ಶುಕ್ರವಾರ, ಮೇ 20, 2022
19 °C

ಕೊರೊನಾ ಡೆಲ್ಟಾ ತಳಿ ತೊಡೆದು ಹಾಕಲು ಓಮೈಕ್ರಾನ್ ಒಳ್ಳೆಯದೆಂದ ತಜ್ಞರು: ಕಾರಣವೇನು?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಅತಿ ಹೆಚ್ಚು ಪ್ರಸರಣ ಸಾಮರ್ಥ್ಯವಿರುವ ಓಮೈಕ್ರಾನ್, ಈ ಹಿಂದೆ ಪತ್ತೆಯಾಗಿದ್ದ ಡೆಲ್ಟಾ ತಳಿಯನ್ನು ಜಗತ್ತಿನಿಂದ ತೊಡೆದು ಹಾಕಲು ನೆರವಾಗಬಹುದು ಎಂದು ಆರೋಗ್ಯ ತಜ್ಞರು ಅಬಿಪ್ರಾಯಪಟ್ಟಿದ್ದಾರೆ.

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಅತಿ ವೇಗವಾಗಿ ಹರಡುತ್ತಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ದೇಶಗಳಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಓಮೈಕ್ರಾನ್ ಈಗ ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಪ್ರಬಲ ಡೆಲ್ಟಾ ತಳಿಗಿಂತಲೂ ವೇಗವಾಗಿ ಹರಡುತ್ತಿದೆ.

ಇದನ್ನೂ ಓದಿ: 

ಡೆಲ್ಟಾ ತಳಿಯಿಂದ ಸೋಂಕಿನ ತೀವ್ರತೆ ಹೆಚ್ಚಿದ್ದುದಲ್ಲದೆ, ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಿತ್ತು. ದೇಹದಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗುವುದು, ನ್ಯುಮೋನಿಯಾ, ಸಾವು ಹೆಚ್ಚು ಸಂಭವಿಸುತ್ತಿತ್ತು. ಆದರೆ ಓಮೈಕ್ರಾನ್‌ನಿಂದ ಸೋಂಕು ತಗುಲಿದವರಲ್ಲಿ ಸೌಮ್ಯ ಲಕ್ಷಣಗಳು ಕಂಡುಬಂದಿವೆ.

‘ಓಮೈಕ್ರಾನ್‌ನ ಸೌಮ್ಯ ಅಲೆ ಕಂಡುಬರಲಿದ್ದು, ಡೆಲ್ಟಾಗೆ ಪರ್ಯಾಯವಾಗಿರಲಿದೆ. ಇದರಿಂದ ಜಗತ್ತಿಗೆ ಒಳಿತಾಗಲಿದೆ’ ಎಂದು ಮಹಾರಾಷ್ಟ್ರ ಸರ್ಕಾರದ ಕೋವಿಡ್ ಕಾರ್ಯಪಡೆಯ ಸದಸ್ಯ ಡಾ. ವಸಂತ್ ನಾಗ್ವೇಕರ್ ತಿಳಿಸಿದ್ದಾರೆ.

‘ಓಮೈಕ್ರಾನ್ ಹೆಚ್ಚು ಹರಡುವಂಥದ್ದು. ಈಗಾಗಲೇ ಸೋಂಕಿತರಾಗಿ ಗುಣಮುಖರಾದವರು ಮತ್ತು ಲಸಿಕೆ ಪಡೆದವರಿಗೂ ಈ ತಳಿಯಿಂದ ಸೋಂಕು ತಗುಲುವ ಸಾಧ್ಯತೆ ಇದೆ. ಆದರೆ ಈವರೆಗೆ ಓಮೈಕ್ರಾನ್‌ ತೀವ್ರವಾದ ಸೋಂಕಿಗೆ ಕಾರಣವಾದ ನಿದರ್ಶನಗಳಿಲ್ಲ’ ಎಂದು ಮುಂಬೈಯ ಗ್ಲೋಬಲ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ತಜ್ಞರೂ ಆಗಿರುವ ಡಾ. ವಸಂತ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಯುವಕರಿಗೇ ಹೆಚ್ಚು ಸೋಂಕು ತಗುಲಿರುವುದು ಕಂಡುಬಂದಿದೆ. ಸೋಂಕಿತರೆಲ್ಲ ಸೌಮ್ಯ ಲಕ್ಷಣ ಹೊಂದಿದ್ದರು.

ಇದನ್ನೂ ಓದಿ: 

‘ಈಗ ಹೊಸ ತಳಿಯು ಸ್ಥಿರವಾಗಿರುವಂತೆ ಕಾಣಿಸುತ್ತಿದೆ. ಹೆಚ್ಚು ಪ್ರಸರಣ ಸಾಮರ್ಥ್ಯ ಹೊಂದಿದ್ದರೂ ಕಡಿಮೆ ತೀವ್ರತೆ ಇದೆ. ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು, ಸಾವಿನ ಸಂಖ್ಯೆ ಈ ಹಿಂದಿನದ್ದಕ್ಕಿಂತ ಕಡಿಮೆ ಇವೆ ಎಂದೂ ಡಾ. ವಸಂತ್ ಹೇಳಿದ್ದಾರೆ.

ಆದಾಗ್ಯೂ ನಾವು ಹೆಚ್ಚು ನಿಗಾ ಇರಿಸಬೇಕಿದೆ. ಜೀನೋಮ್ ಸೀಕ್ವೆನ್ಸಿಂಗ್, ಲಸಿಕೆ ನೀಡಿಕೆ ಹೆಚ್ಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.

‘ಸಾಂಕ್ರಾಮಿಕದ ಈ ಹಂತದಿಂದ ಪಾರಾಗಲು ಎಲ್ಲೆಡೆ ಜನರಿಗೆ ಲಸಿಕೆ ನೀಡಬೇಕು. ವೈರಸ್ ಹರಡುತ್ತಿರುವ ಕಾರಣ ಹೊಸ ರೂಪಾಂತರಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ‘ಜಾನ್ಸ್ ಹಾಪ್‌ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್‌ ಪಬ್ಲಿಕ್ ಹೆಲ್ತ್‌’ನ ಅಂತರರಾಷ್ಟ್ರೀಯ ಆರೋಗ್ಯ ವಿಭಾಗದ ಸಹಾಯಕ ವಿಜ್ಞಾನಿ ಬ್ರಿಯಾನ್ ವಾಹಲ್ ಹೇಳಿದ್ದಾರೆ.

ಭಾರತ, ದಕ್ಷಿಣ ಆಫ್ರಿಕಾ ಸೇರಿದಂತೆ ಎಲ್ಲ ದೇಶಗಳಲ್ಲಿಯೂ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಿಸುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು