ಹೂವಿನ ಆಮದಿಗಾಗಿ ಉತ್ತರ ಭಾರತದಲ್ಲೂ ವಿಮಾನ ನಿಲ್ದಾಣ ನಿಗದಿಪಡಿಸಿ: ಕೋರ್ಟ್

ನವದೆಹಲಿ: ವಿದೇಶದಿಂದ ಹೂವುಗಳ ಆಮದಿಗಾಗಿ ಚೆನ್ನೈ ವಿಮಾನ ನಿಲ್ದಾಣವನ್ನು ಮೀಸಲಿಡುವುದರ ಜತೆಗೆ ಕೇಂದ್ರ ಸರ್ಕಾರವು ಉತ್ತರ ಭಾರತದಲ್ಲೂ ಹೂವಿನ ಆಮದಿಗಾಗಿ ಒಂದು ವಿಮಾನ ನಿಲ್ದಾಣನ್ನು ನಿಗದಿಪಡಿಸಬಹುದು ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.
‘ಇದು ಕೇವಲ ದಾಸ್ತಾನು ಸೌಕರ್ಯದ ವಿಷಯವಾಗಿದೆ. ಕೊರೊನಾದ ಈ ಪರಿಸ್ಥಿತಿಯಲ್ಲಿ ಯಾವುದೇ ವ್ಯವಹಾರಗಳು ತೊಂದರೆಗೆ ಒಳಗಾಗಬಾರದು. ಕೆಲಸ ಮಾಡುವ ಇಚ್ಛೆಯಿದ್ದಲ್ಲಿ ಮಾರ್ಗ ಸಿಕ್ಕೇ ಸಿಗುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್, ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಪೀಠವು ತಿಳಿಸಿದೆ.
ಜುಲೈ 9ರಂದು ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಚೆನ್ನೈ ವಿಮಾನ ನಿಲ್ದಾಣದಿಂದ ಮಾತ್ರ ಹೂವುಗಳನ್ನು ಆಮದು ಮಾಡಿಕೊಳ್ಳುವಂತೆ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹಣ್ಣು, ಹೂವು ಮತ್ತು ತರಕಾರಿ ವ್ಯಾಪಾರಿಗಳ ಸಂಘವು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
‘ನಾವು ನ್ಯಾಯಾಲಯದ ಮೊರೆ ಹೋಗುವ ಮುನ್ನ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೆವು . ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಸಂಘದ ಸದಸ್ಯರು ತಿಳಿಸಿದರು.
ನ್ಯಾಯಾಲಯದ ಆದೇಶದ ಪ್ರತಿ ದೊರೆತ ಎಂಟು ವಾರಗಳೊಳಗೆ ಸಂಘದ ಮನವಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಪೀಠವು ಹೇಳಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.