ಗುರುವಾರ , ಡಿಸೆಂಬರ್ 3, 2020
23 °C
ಕೈಬಿಡದ ತಮಿಳುನಾಡಿನ ಹಳ್ಳಿಯ ನಂಟು

ಬೈಡನ್: ಕೋವಿಡ್ ತಂಡಕ್ಕೆ ತಮಿಳುನಾಡಿನ ಡಾ.ಸೆಲೈನ್ ಗೌಂಡರ್ ಸೇರ್ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಈರೋಡ್ (ತಮಿಳುನಾಡು): ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಕೋವಿಡ್‌–19 ಸಲಹಾ ಮಂಡಳಿಗೆ ತಮಿಳುನಾಡಿನ ಡಾ.ಸೆಲೈನ್ ಗೌಂಡರ್ ಆಯ್ಕೆಯಾಗಿದ್ದಾರೆ.

ಡಾ.ಸೆಲೈನ್, ನ್ಯೂಯಾರ್ಕ್‌ನ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್‌ ವಿಶ್ವವಿದ್ಯಾಲಯದ ವೈದ್ಯಕೀಯ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದಲ್ಲಿ ಕ್ಲಿನಿಕಲ್ ಸಹಾಯಕ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೆಲೈನ್ ಗೌಂಡರ್ ಅವರ ತಂದೆ ರಾಜ್ ನಟರಾಜನ್ ಗೌಂಡರ್ ತಮಿಳುನಾಡಿನ ಈರೋಡ್ ಸಮೀಪದ ಪೆರುಮಾಪಾಳಯಂ ಎನ್ನುವ ಪುಟ್ಟಹಳ್ಳಿಯವರು. 60ರ ದಶಕದಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ವಲಸೆ ಹೋದ ರಾಜ್ ಗೌಂಡರ್ ಅವರು ಅಲ್ಲಿಯೇ ನೆಲೆಸಿದ್ದಾರೆ. ಇದೀಗ ಬೈಡನ್ ತಂಡಕ್ಕೆ ಸೇರ್ಪಡೆಯಾಗಿರುವ ಭಾರತೀಯ–ಅಮೆರಿಕನ್ ಮಹಿಳೆ ಡಾ.ಸೆಲೀನ್ ಬಗ್ಗೆ ಪೆರುಮಾಪಾಳಯಂ ಹಳ್ಳಿಯ ಜನರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ರಾಜ್ ಗೌಂಡರ್ 1968ರಲ್ಲಿ ಅಮೆರಿಕಕ್ಕೆ ತೆರಳಿದರು. ಅಮೆರಿಕದಲ್ಲಿದ್ದರೂ ತಂದೆ–ಮಗಳು ತಮಿಳುನಾಡಿನ ನಂಟು ಬಿಡಲಿಲ್ಲ. ಪೆರುಮಾಪಾಳಯಂ ಹಳ್ಳಿಯ ಜನರ ಸಹಾಯಕ್ಕಾಗಿ ರಾಜ್ ಗೌಂಡರ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ’ ಎಂದು ರಾಜ್ ಅವರ ಹತ್ತಿರದ ಸಂಬಂಧಿ ಎಸ್. ತಂಗವೇಲ್ ತಿಳಿಸಿದ್ದಾರೆ.

‘ಇಲ್ಲಿನ ಮೊದಕುರಿಚಿ ಬಾಲಕರ ಪ್ರೌಢಶಾಲೆಯನ್ನು ಮೇಲ್ದರ್ಜೆಗೇರಿಸಲು ಸೆಲೈನ್‌ ಪೆರುಮಾಪಾಳಯಂ ಗ್ರಾಮಕ್ಕೂ ಭೇಟಿ ನೀಡಿದ್ದಾರೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್ ನೀಡಿದ್ದಾರೆ. ಅಂಗವಿಕಲ ಮಕ್ಕಳಿಗೂ ಸಹಾಯ ಹಸ್ತ ಚಾಚಿದ್ದಾರೆ. ಇಡೀ ಹಳ್ಳಿಯೇ ದೊಡ್ಡಕುಟುಂಬದಂತಿದ್ದು, ಸೆಲೈನ್ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸುತ್ತಿದೆ’ ಎಂದೂ ಅವರು ಹೇಳಿದ್ದಾರೆ. 

ಪಳನಿಸ್ವಾಮಿ, ಸ್ಟಾಲಿನ್ ಹರ್ಷ: ಬೈಡನ್ ಅವರ ಕೋವಿಡ್ ಸಲಹಾ ತಂಡಕ್ಕೆ ಡಾ.ಸೆಲೈನ್‌ ಸೇರ್ಪಡೆಯಾಗಿರುವ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿ, ಹರ್ಷ ವ್ಯಕ್ತಪಡಿಸಿದ್ದಾರೆ.

ಡಾ.ಸೆಲೈನ್‌ಗೂ ಮುನ್ನ ತಮಿಳುನಾಡಿನವರೇ ಆದ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿದ್ದು, ತಮಿಳುನಾಡಿನಲ್ಲಿ ಸಂಭ್ರಮ ಮೂಡಿಸಿತ್ತು.

 

ಮದುವೆಯಾದರೂ ಹೆಸರು ಬದಲಿಸಲಿಲ್ಲ:

‘ಅಮೆರಿಕನ್ನರು ಭಾರತದವರ ಹೆಸರನ್ನು ಉಚ್ಚರಿಸಲು ಕಷ್ಟಪಡುತ್ತಾರೆ. ಆದರೂ ನಾನು ಹುಟ್ಟುವ ಮೊದಲೇ ನಮ್ಮ ತಂದೆ ತಮ್ಮ ಹೆಸರಿನ ಜತೆಗೆ ಗೌಂಡರ್ ಎಂದು ಸೇರಿಸಿಕೊಂಡಿದ್ದರು. ಹಾಗಾಗಿ, ನನ್ನ ಹೆಸರಿನ ಜೊತೆಗೂ ಗೌಂಡರ್ ಬಂದಿದೆ. ನನ್ನ ಹೆಸರು ನನ್ನ ಇತಿಹಾಸ ಮತ್ತು ನನ್ನ ಗುರುತು ಕೂಡ ಆಗಿದೆ. ಹಾಗಾಗಿ, ಮದುವೆಯಾದ ನಂತರವೂ ನನ್ನ ಹೆಸರನ್ನು ಬದಲಿಸಲಿಲ್ಲ’ ಎಂದು ಸೈಲೈನ್ ಗೌಂಡರ್ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು