ಗುರುವಾರ , ಜನವರಿ 28, 2021
27 °C

ಒಂದು ದೇಶ, ಒಂದು ಚುನಾವಣೆ ಭಾರತದಲ್ಲಿ ಅಗತ್ಯವಾಗಿದೆ: ನರೇಂದ್ರ ಮೋದಿ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ಕೆವಾಡಿಯಾ (ಗುಜರಾತ್‌): ‘ಒಂದು ದೇಶ, ಒಂದು ಚುನಾವಣೆ’ಯ ಕಲ್ಪನೆಯನ್ನು ಗುರುವಾರ ಮತ್ತೊಮ್ಮೆ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಈ ವ್ಯವಸ್ಥೆ ಭಾರತಕ್ಕೆ ಅಗತ್ಯವಾಗಿದೆ. ಏಕೆಂದರೆ, ಪ್ರತಿ ಕೆಲವು ತಿಂಗಳಲ್ಲಿ ನಡೆಯುತ್ತಿರುವ ಚುನಾವಣೆಗಳು, ಅಭಿವೃದ್ಧಿಯ ಕಾರ್ಯಕ್ಕೆ ಅಡ್ಡಿಯಾಗಿದೆ’ ಎಂದಿದ್ದಾರೆ.

80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಮಾತನಾಡಿದ ಮೋದಿ, ‘ಒಂದು ದೇಶ, ಒಂದು ಚುನಾವಣೆ ಕೇವಲ ಚರ್ಚೆಯ ವಿಷಯವಲ್ಲ. ಇದು ದೇಶಕ್ಕೆ ಅಗತ್ಯವಾಗಿದೆ. ಪ್ರತಿ ತಿಂಗಳು ದೇಶದ ಒಂದಲ್ಲ ಒಂದು ಕಡೆ ಚುನಾವಣೆಗಳು ನಡೆಯುತ್ತಿವೆ. ಚುನಾವಣೆಗಳಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ಆಗುವ ಪರಿಣಾಮ ಎಲ್ಲರಿಗೂ ತಿಳಿದಿದೆ. ಹೀಗಾಗಿ ಈ ವಿಷಯದ ಕುರಿತು ವಿಸ್ತೃತವಾದ ಅಧ್ಯಯನ, ಪರ ವಿರೋಧಗಳ ವಿವೇಚನೆ ಅಗತ್ಯವಾಗಿದೆ’ ಎಂದರು.

ಲೋಕಸಭೆ, ವಿಧಾನಸಭೆ ಹಾಗೂ ಪಂಚಾಯತಿ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯ ವಿಷಯವನ್ನೂ ಪ್ರಸ್ತಾಪಿಸಿದ ಮೋದಿ ಅವರು, ಪ್ರತ್ಯೇಕ ಪಟ್ಟಿಯು ಸಂಪನ್ಮೂಲದ ವ್ಯರ್ಥ ಎಂದರು.‘ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗವು ಹೆಚ್ಚಿನ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಪ್ರತಿ ನಿರ್ಧಾರವೂ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ತೆಗೆದುಕೊಳ್ಳಬೇಕು’ ಎಂದರು.

ಸರ್ದಾರ್‌ ಸರೋವರ ಅಣೆಕಟ್ಟು ನಿರ್ಮಾಣದ ವಿಳಂಬದ ಕುರಿತು ಪ್ರಸ್ತಾಪಿಸಿದ ಮೋದಿ, ‘ಅಭಿವೃದ್ಧಿಗೆ ಒತ್ತು ನೀಡಿದ್ದರೆ, ಈ ಯೋಜನೆಯು ಬೇಗನೇ ಪೂರ್ಣಗೊಳ್ಳಬೇಕಿತ್ತು. ಇದರ ವಿಳಂಬಕ್ಕೆ ಕಾರಣರಾದವರಿಗೆ, ಈ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ’ ಎಂದು ನೇರವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು