ಶನಿವಾರ, ಆಗಸ್ಟ್ 13, 2022
26 °C
ಕುಂಟುತ್ತಾ ಸಾಗುತ್ತಿರುವ ಕೋವಿಡ್‌ ಲಸಿಕೆ ಅಭಿಯಾನ

5 ತಿಂಗಳಲ್ಲಿ ಶೇ 5ರಷ್ಟು ಜನರಿಗಷ್ಟೇ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಲಸಿಕೆ ಅಭಿಯಾನ ಆರಂಭವಾಗಿ ಐದು ತಿಂಗಳಾದರೂ ಶೇ 5ರಷ್ಟು ಜನರಿಗೆ ಮಾತ್ರ ಈವರೆಗೆ ಲಸಿಕೆ ಹಾಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. 

5.03 ಕೋಟಿ ಜನರಿಗೆ ಲಸಿಕೆಯ ಎರಡೂ ಡೋಸ್‌ ಹಾಕಲಾಗಿದೆ. 22 ಕೋಟಿ ಜನರಿಗೆ ಮೊದಲ ಡೋಸ್‌ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌ ಹೇಳಿದ್ದಾರೆ. 

ಒಟ್ಟು 27 ಕೋಟಿ ಜನರಿಗೆ ಲಸಿಕೆ ಹಾಕಿಸಲಾಗಿದೆ. ದಿನಕ್ಕೆ ಸರಾಸರಿ 31 ಲಕ್ಷ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಒಟ್ಟು 95 ಕೋಟಿ ಜನರಿಗೆ ಲಸಿಕೆಯ ಎರಡೂ ಡೋಸ್‌ ಹಾಕಿಸಬೇಕು ಎಂಬ ಗುರಿ ಇರಿಸಿಕೊಳ್ಳಲಾಗಿದೆ. 2021ರಲ್ಲಿ ಇನ್ನು ಉಳಿದಿರುವ 196 ದಿನಗಳಲ್ಲಿ ಗುರಿ ಇರಿಸಿಕೊಂಡಿರುವ ಎಲ್ಲ
ರಿಗೂ ಲಸಿಕೆ ಹಾಕಿಸಬೇಕಿದ್ದರೆ ದಿನವೊಂದಕ್ಕೆ 83 ಲಕ್ಷ ಜನರಿಗೆ ಲಸಿಕೆ ಹಾಕಿಸಬೇಕು. 

ಜೂನ್‌ ತಿಂಗಳಲ್ಲಿ 12 ಕೋಟಿ ಡೋಸ್‌ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಅರ್ಧ ತಿಂಗಳು ಕಳೆದರೂ ಸುಮಾರು 5 ಲಕ್ಷ ಡೋಸ್‌ ಮಾತ್ರ ಲಭ್ಯವಾಗಿದೆ.  

ದೃಢ ಪ್ರಮಾಣ ಇಳಿಕೆ: ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 5ಕ್ಕಿಂತ ಕಡಿಮೆ ಆಗಿರುವ ಜಿಲ್ಲೆಗಳ ಸಂಖ್ಯೆಯು ಕಳೆದ ಐದು ವಾರಗಳಲ್ಲಿ ಐದು ಪಟ್ಟು ಹೆಚ್ಚಾಗಿದೆ. ಏಪ್ರಿಲ್‌ 30ರಿಂದ ಮೇ 6ರ ಅವಧಿಯಲ್ಲಿ ಇಂತಹ ಜಿಲ್ಲೆಗಳ ಸಂಖ್ಯೆ 103 ಇತ್ತು. ಈಗ ಅದು 513 ಜಿಲ್ಲೆಗಳಿಗೆ ಏರಿಕೆಯಾಗಿದೆ ಎಂದು ಅಗರ್‌ವಾಲ್‌ ತಿಳಿಸಿದ್ದಾರೆ. 

ಲಸಿಕೆ ಡೋಸ್‌ ನಡುವೆ ಅಂತರ ಹೆಚ್ಚಳ: ಸಮರ್ಥನೆ

ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಣ ಅಂತರವನ್ನು 12ರಿಂದ 16 ವಾರಗಳಿಗೆ ಹೆಚ್ಚಿಸಿರುವುದನ್ನು ಅಸ್ಟ್ರಾಜೆನೆಕಾ ಲಸಿಕೆಯ ವೈದ್ಯಕೀಯ ಪ್ರಯೋಗಗಳ ಮುಖ್ಯ ತನಿಖಾಧಿಕಾರಿ ಪ್ರೊ. ಆ್ಯಂಡ್ರ್ಯು ಪೊಲಾರ್ಡ್‌ ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ.

ಲಸಿಕೆಯ ಮೊದಲ ಡೋಸ್‌ ನೀಡಿದ ಎರಡನೇ ಮತ್ತು ಮೂರನೇ ತಿಂಗಳಲ್ಲಿ ರೋಗದಿಂದ ಲಭಿಸುವ ರಕ್ಷಣೆಯ ಮಟ್ಟವು ಗಮನಾರ್ಹವಾಗಿ ಸುಧಾರಿಸುತ್ತದೆ. ಅಸ್ಟ್ರಾಜೆನೆಕಾ ಲಸಿಕೆಯ ಒಂದೇ ಡೋಸ್‌, ಆ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಆದರೆ, ಅದು ರಕ್ಷಣೆ ನೀಡಬಲ್ಲದು. ಹೆಚ್ಚಿನ ಸುರಕ್ಷತೆಗೆ ಎರಡನೇ ಡೋಸ್‌ ಪಡೆಯುವುದು ಅಗತ್ಯ ಎಂದು ಅವರು ಹೇಳಿದ್ದಾರೆ.ಎರಡು ದೇಶಗಳಲ್ಲಿ ಭಿನ್ನವಾದ ಪರಿಸ್ಥಿತಿ ಇರುವುದರಿಂದ ಬ್ರಿಟನ್‌
ಹಾಗೂ ಭಾರತದ ಲಸಿಕಾ ನೀತಿಯನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಆಕ್ಸ್‌ಫರ್ಡ್‌ ಲಸಿಕಾ ಸಮೂಹದ ನಿರ್ದೇಶಕರೂ ಆಗಿರುವ ಪೊಲಾರ್ಡ್‌ ಹೇಳಿದ್ದಾರೆ.

ಭಾರತದಲ್ಲಿ ಬಹುದೊಡ್ಡ ಸಮುದಾಯವು ಲಸಿಕೆ ಪಡೆಯುವುದು ಬಾಕಿ ಇದೆ. ಆದ್ದರಿಂದ ದೇಶದಲ್ಲಿ ಮೊದಲ ಬಾರಿ ಕಂಡುಬಂದಿದ್ದ ‘ಡೆಲ್ಟಾ’ ರೂಪಾಂತರ ವೈರಸ್‌ ವ್ಯಾಪಕವಾಗಿ ಹರಡಿ ಅಪಾಯ ಹೆಚ್ಚುವಂತೆ ಮಾಡಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು