ಮಂಗಳವಾರ, ಅಕ್ಟೋಬರ್ 27, 2020
22 °C
ಇದು 'ಸಾಮಾಜಿಕ ಜಾಲತಾಣದ ತಾಕತ್ತು' ಎಂದ ನೆಟ್ಟಿಗರು

ವಿಡಿಯೊ ವೈರಲ್‌: ನೆಮ್ಮದಿಯ ನಿಟ್ಟುಸಿರು ಬಿಟ್ಟ 'ಬಾಬಾ ಕಾ ದಾಬಾ'ದ ವೃದ್ಧ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ಸೋಂಕು ಸೃಷ್ಟಿಸಿದ ಆರ್ಥಿಕ ಆವಾಂತರದಿಂದ ಜಗತ್ತೇ ತಲ್ಲಣಿಸಿದೆ. ಲಾಕ್‌ಡೌನ್‌ನಿಂದ ವ್ಯಾಪಾರ-ವಹಿವಾಟುಗಳು ಸಂಪೂರ್ಣ ನೆಲಕಚ್ಚಿವೆ. ತೀವ್ರ ಸಂಕಷ್ಟದ ಸನ್ನಿವೇಶ ಎದುರಿಸುವ ಅನಿವಾರ್ಯತೆ ಮನಕುಲಕ್ಕೆ ಬಂದೊದಗಿದೆ. ಆದರೆ, ದಕ್ಷಿಣ ದೆಹಲಿಯ ಮಾಳವಿಯಾ ನಗರದಲ್ಲಿ ವೃದ್ಧ ದಂಪತಿಗಳು ನಡೆಸುತ್ತಿದ್ದ 'ಬಾಬಾ ಕಾ ದಾಬಾ'ದ ಮೇಲೆ ಚಾಚಿಕೊಂಡಿದ್ದ ಕರಿನೆರಳು ರಾತ್ರೋರಾತ್ರಿ ಮಾಯವಾಗಿದೆ. ಈ ವೃದ್ಧ ದಂಪತಿಗಳ ಮೊಗದಲ್ಲಿ ಮಂದಹಾಸ ಮೂಡಲು ಸಾಮಾಜಿಕ ಜಾಲತಾಣ ಕಾರಣವಾಗಿದೆ.

ಬಾಬಾ ಕಾ ದಾಬಾ ನಡೆಸುವ 80 ವರ್ಷದ ಕಾಂತಾ ಪ್ರಸಾದ್‌, ಮತ್ತವರ ಪತ್ನಿ ಬಾದಾಮಿ ದೇವಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ತೊಂದರೆಗೆ ಒಳಗಾಗಿದ್ದರು. ಸರ್ಕಾರ ಲಾಕ್‌ಡೌನ್‌ ತೆರವುಗೊಳಿಸಿದ ನಂತರವೂ ಗ್ರಾಹಕರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿತ್ತು. ಆದರೆ, ಈಗ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಬಾಬಾ ಕಾ ದಾಬಾವನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಬ್ಲಾಗರ್‌ ಗೌರವ್‌ ವಾಸನ್‌ ಎಂಬುವವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊ.

ಬಾಬಾ ಕಾ ದಾಬಾದ ವೃದ್ಧ ದಂಪತಿಗಳು ಮನನೊಂದು ಕಣ್ಣೀರು ಹಾಕುತ್ತಿದ್ದ ವಿಡಿಯೊವನ್ನು ವಾಸನ್‌ ಅವರು ಚಿತ್ರಿಕರಿಸಿ ಗುರುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 'ಸ್ನೇಹಿತರೆ, ನಾನು ಮಾಳವಿಯಾ ನಗರಕ್ಕೆ ಹೋಗಿದ್ದೆ. ಈ ವಯಸ್ಸಾದ ದಂಪತಿಗಳು ಜೀವನೋಪಾಯಕ್ಕಾಗಿ ಶ್ರಮಿಸುತ್ತಿರುವುದನ್ನು ಗಮನಿಸಿದೆ. ನಾನು ಅಲ್ಲಿಗೆ ಹೋದಾಗ ಅವರು ಕಷ್ಟಪಡುತ್ತಿರುವುದನ್ನು ನೋಡಿದೆ. ಆಗ ನನಗೆ ಅಳು ಬಂತು. ಅದನ್ನು ನನ್ನಿಂದ ತಡೆಯಲು ಸಾಧ್ಯವಾಗಲಿಲ್ಲ. ಅವರು ಬೆಳಿಗ್ಗೆ 6.30ಕ್ಕೆ ತಮ್ಮ ಕೆಲಸ ಪ್ರಾರಂಭಿಸಿದ್ದಾರೆ. ಆದರೆ, ಮಧ್ಯಾಹ್ನ 1.30 ಗಂಟೆಯಾದರೂ ಕೇವಲ ₹60 ಸಂಪಾದಿಸಲು ಅವರಿಂದ ಸಾಧ್ಯವಾಗಿತ್ತು' ಎಂದು ವಾಸನ್‌ ಬರೆದುಕೊಂಡಿದ್ದರು.

ವಾಸನ್‌ ಹಂಚಿಕೊಂಡಿದ್ದ ವಿಡಿಯೊ ಮತ್ತು ಪೋಸ್ಟ್‌ ರಾತ್ರೋರಾತ್ರಿ ವೈರಲ್‌ ಆಗಿದೆ. ಮರುದಿನ ಬಾಬಾ ಕಾ ದಾಬಾಗೆ ಜನಸಮೂಹ ಹರಿದುಬಂದಿದ್ದಲ್ಲದೇ, ಈ ವೃದ್ಧ ದಂಪತಿಗಳಿಗೆ ಸಹಾಯವಾಗಲು ಸೆಲೆಬ್ರಿಟಿಗಳು ಮುಂದೆ ಬಂದಿದ್ದಾರೆ. ಆನ್‌ಲೈನ್‌ ಮೂಲಕ ಆಹಾರ ಉತ್ಪನ್ನಗಳನ್ನು ವಿತರಿಸುವ ಜೊಮಾಟೊ ಕಂಪನಿಯು ದಂಪತಿಗಳಿಗೆ ಸಹಾಯ ಹಸ್ತ ಚಾಚಿದೆ. ಸಂಕಷ್ಟದಲ್ಲಿದ್ದ ವೃದ್ಧ ದಂಪತಿಗಳೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು