ಶನಿವಾರ, ಜನವರಿ 29, 2022
22 °C
ಆಕ್ಸ್‌ಫ್ಯಾಮ್‌ ಇಂಡಿಯಾ, ಕಾಮನ್ ಕಾಸ್‌ ಸಂಸ್ಥೆಗಳು ದೇಣಿಗೆ ಸಂಗ್ರಹಿಸಲು ನಿರ್ಬಂಧ

ವಿದೇಶಿ ದೇಣಿಗೆ: ಸಾವಿರಾರು ಎನ್‌ಜಿಒಗಳ ಪರವಾನಗಿ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ ರಾಜ್ಯ ದಲ್ಲಿನ ಕರ್ನಾಟಕ ಸೆಂಟ್ರಲ್‌ ಡಯಾಸಿಸ್, ಬಯೋಕಾನ್‌ ಫೌಂಡೇಷನ್‌, ಸಿಟಿಜನ್‌ ಆಕ್ಷನ್ ಗ್ರೂಪ್‌, ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಮತ್ತು ಎಚ್‌.ಡಿ. ಕುಮಾರಸ್ವಾಮಿ ಸಹ್ರಯಾಲಯ ಟ್ರಸ್ಟ್‌ ಹಾಗೂ ಇತರ 736 ಸಂಸ್ಥೆಗಳನ್ನು ಒಳಗೊಂಡಂತೆ ದೇಶದ ಸಾವಿರಾರು ಸರ್ಕಾರೇತರ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯುವ ಪರವಾನಗಿ ಕಳೆದು ಕೊಂಡಿವೆ. 

12,500ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ವಿದೇಶಿ ದೇಣಿಗೆ ಪಡೆಯುವ ಅನುಮತಿಯನ್ನು ಕಳೆದುಕೊಂ
ಡಿವೆ. ಈ ಪೈಕಿ 5,933 ಸಂಸ್ಥೆಗಳು 2021ರ ಡಿ.31ರಂದು ಅನುಮತಿ ಕಳೆದುಕೊಂಡಿವೆ.

ಆಕ್ಸ್‌ಫ್ಯಾಮ್‌ ಇಂಡಿಯಾ, ಬೆಂಗಳೂರು ಮತ್ತು ಕೋಲ್ಕತ್ತದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌, ನೆಹರೂ ಮೆಮೋರಿಯಲ್ ಮ್ಯೂಸಿಯಂ ಅಂಡ್ ಲೈಬ್ರರಿ, ಉತ್ತರಾಖಂಡದ ವಿಪತ್ತು ನಿರ್ವಹಣಾ ಕೇಂದ್ರ, ಭಾರತದ ಕ್ಷಯರೋಗ ಸಂಸ್ಥೆಗಳು ಈ ಪಟ್ಟಿಯಲ್ಲಿ ಸೇರಿವೆ. 

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿ ಎನ್‌ಜಿಒಗಳು ವಿದೇಶಿ ದೇಣಿಗೆ ಪಡೆಯುವ ಪರವಾನಗಿಯನ್ನು ಮಾ.31ರವರೆಗೆ ವಿಸ್ತರಿಸಲಾಗಿತ್ತು. ಕೆಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಅಥವಾ ಈ ಸಂಸ್ಥೆಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ ಎನ್ನಲಾಗಿದೆ. ಎಫ್‌ಸಿಆರ್‌ಎ ಡೇಟಾಬೇಸ್‌ ಪ್ರಕಾರ, 5,933 ಸಂಸ್ಥೆಗಳ ಪರವಾನಗಿಯನ್ನು ಗೃಹಸಚಿವಾಲಯವು ಶುಕ್ರವಾರ ತಡರಾತ್ರಿ ರದ್ದುಗೊಳಿಸಿದೆ. 

16,829 ಎನ್‌ಜಿಒಗಳು ವಿದೇಶಿ ದೇಣಿಗೆ ಸಂಗ್ರಹಿಸಲು ಅನುಮತಿ ಪಡೆದಿವೆ. ಆದರೆ, ಈ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳಲ್ಲಿ ದೋಷಗಳು ಕಾಣಿಸಿದರೆ ಈ ಸಂಖ್ಯೆ ಇನ್ನಷ್ಟು ಕಡಿಮೆ ಆಗಬಹುದು.   ವಿವಿ ಗಿರಿ ನ್ಯಾಷನಲ್ ಲೇಬರ್ ಇನ್‌ಸ್ಟಿ‌ಟ್ಯೂಟ್, ಸತ್ಯಜಿತ್ ರೇ ಫಿಲ್ಮ್ ಅಂಡ್ ಟಿವಿ ಇನ್‌ಸ್ಟಿಟ್ಯೂಟ್,  ಟೈಮ್ಸ್‌ ಆಫ್‌ ಇಂಡಿಯಾ ಪರಿಹಾರ ಧನ, ಅಪ್ನೆ ಆಪ್‌ ವುಮೆನ್‌ ವರ್ಲ್ಡ್‌ವೈಡ್‌, ಬಚ್ಚೋನ್‌ ಕಾ ಘರ್‌, ಕಾಮನ್ ಕಾಸ್‌, ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌, ಸುಭಾಷ್‌ ಚಂದ್ರ ಫೌಂಡೇಷನ್‌, ಸುಲಭ್‌, ಹೆಬಿಟೇಟ್‌ ಸೆಂಟರ್‌, ದೆಹಲಿ ಪಬ್ಲಿಕ್‌ ಸ್ಕೂಲ್‌ ಸೊಸೈಟಿ ವಿದೇಶಿ ದೇಣಿಗೆ ಪಡೆಯಲು ಪರವಾನಗಿ ಕಳೆದುಕೊಂಡ ಇತರ ಸಂಸ್ಥೆಗಳು. 

ಮದರ್‌ ಥೆರೆಸಾ ಅವರು ಸ್ಥಾಪಿಸಿದ್ದ ಮಿಷನರಿ ಆಫ್‌ ಚಾರಿಟಿ ಸಂಸ್ಥೆಯ ಪರವಾನಗಿ ನವೀಕರಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಇದು ವಿವಾದವನ್ನು ಹುಟ್ಟು ಹಾಕಿತ್ತು.

ರಾಜ್ಯದ 736 ಸಂಸ್ಥೆಗಳ ಪರವಾನಗಿ ರದ್ದು

ತಮಿಳುನಾಡು (1,453), ಪಶ್ಚಿಮ ಬಂಗಾಳ (1,382) ಮತ್ತು ಮಹಾರಾಷ್ಟ್ರ (1,282) ರಾಜ್ಯಗಳ ಅತಿಹೆಚ್ಚು ಎನ್‌ಜಿಒಗಳಿಗೆ ಅನುಮತಿ ನಿರಾಕರಿಸಲಾಗಿದೆ. ಕರ್ನಾಟಕದ 736 ಸರ್ಕಾರೇತರ ಸಂಸ್ಥೆಗಳು ಅನುಮತಿ ಕಳೆದುಕೊಂಡಿವೆ. ಆಂಧ್ರಪ್ರದೇಶದ 973, ಉತ್ತರ ಪ್ರದೇಶದ 872, ಒಡಿಶಾದ 840, ಕೇರಳದ 700, ದೆಹಲಿಯ 662 ಮತ್ತು ಬಿಹಾರದ 629 ಸಂಸ್ಥೆಗಳು ಈ ಪಟ್ಟಿಯಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು