ಬುಧವಾರ, ಸೆಪ್ಟೆಂಬರ್ 22, 2021
21 °C
ಕೇಂದ್ರೀಯ ವಿಚಕ್ಷಣಾ ಆಯೋಗದ ಮಾಹಿತಿ

200ಕ್ಕೂ ಅಧಿಕ ಭ್ರಷ್ಟಾಚಾರ ದೂರುಗಳ ತನಿಖೆ ಬಾಕಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿನ ಭ್ರಷ್ಟಾಚಾರ ಕುರಿತು ಮುಖ್ಯ ವಿಚಕ್ಷಣಾ ಅಧಿಕಾರಿಗಳಿಗೆ (ಸಿವಿಒ) ನೀಡಿರುವ ದೂರುಗಳ ಪೈಕಿ 219 ದೂರುಗಳಿಗೆ ಸಂಬಂಧಿಸಿ ತನಿಖೆ ಇನ್ನೂ ಬಾಕಿ ಇದೆ.

2020ರ ಡಿಸೆಂಬರ್ 31ಕ್ಕೆ ಕೊನೆಗೊಂಡಂತೆ ವಿವಿಧ ದೂರುಗಳಿಗೆ ಸಂಬಂಧಿಸಿದ ತನಿಖೆಯ ಪ್ರಗತಿ ಕುರಿತು ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ. 105 ದೂರುಗಳಿಗೆ ಸಂಬಂಧಿಸಿದ ತನಿಖೆ ಕಳೆದ ಮೂರಕ್ಕಿಂತ ಹೆಚ್ಚು ವರ್ಷಗಳಿಂದ ಬಾಕಿ ಉಳಿದಿದೆ ಎಂದು ಇದೇ ವರದಿಯಲ್ಲಿ ಹೇಳಲಾಗಿದೆ.

ಯಾವುದೇ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ದೂರುಗಳು ಬಂದಾಗ, ಆ ಕುರಿತ ತನಿಖೆಯನ್ನು ಮೂರು ತಿಂಗಳು ಅಥವಾ ಸಾಧ್ಯವಾದಷ್ಟು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ ಎಂಬುದು ಸಿವಿಸಿಯ ವಿವರಣೆಯಾಗಿದೆ.

‘ತನಿಖೆಗಾಗಿ ಸಿವಿಒಗಳಿಗೆ ಶಿಫಾರಸು ಮಾಡಿದ್ದ 219 ದೂರುಗಳ ಪೈಕಿ 58 ದೂರುಗಳಿಗೆ ಸಂಬಂಧಿಸಿದ ತನಿಖೆ ಒಂದು ವರ್ಷದಿಂದ ಬಾಕಿ ಇದೆ. 56 ದೂರುಗಳಿಗೆ ಸಂಬಂಧಿಸಿದ ತನಿಖೆ 1–3 ವರ್ಷಗಳಿಂದ ಬಾಕಿ ಉಳಿದಿದೆ. ಇನ್ನು, 105 ದೂರುಗಳ ತನಿಖೆ ಮೂರು ವರ್ಷಗಳಿಗಿಂತ ಹೆಚ್ಚು ವರ್ಷಗಳಿಂದ ಬಾಕಿ ಇದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ದೆಹಲಿ ರಾಷ್ಟ್ರೀಯ ರಾಜಧಾನಿ ಸರ್ಕಾರ (ಜಿಎನ್‌ಸಿಟಿಡಿ), ಪ್ರೌಢ ಹಾಗೂ ಉನ್ನತ ಶಿಕ್ಷಣ ಇಲಾಖೆ, ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗಳಿಗೆ ಸಂಬಂಧಿಸಿ, ಅತಿ ಹೆಚ್ಚು ಅಂದರೆ ತಲಾ 22 ದೂರುಗಳ ತನಿಖೆ ಬಾಕಿ ಇದೆ.

ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ 2019ರಲ್ಲಿ 32,579 ಹಾಗೂ 2020ರಲ್ಲಿ 27,035 ದೂರುಗಳು ಬಂದಿವೆ. ತನಿಖೆ ನಡೆಸುವುದರಲ್ಲಿ ಹಾಗೂ ತನಿಖೆ ನಂತರ ವರದಿ ಸಲ್ಲಿಸುವಲ್ಲಿ ಆಗುತ್ತಿರುವ ವಿಳಂಬ ಕಳವಳಕಾರಿ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು