ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದ ಗೋಶಾಲೆಯಲ್ಲಿ 50 ಜಾನುವಾರುಗಳ ನಿಗೂಢ ಸಾವು: ತನಿಖೆಗೆ ಸಿಎಂ ಆದೇಶ

ಗೋಶಾಲೆಗೆ ಮೇವು ಪೂರೈಸಿದ್ದ ತಾಹಿರ್‌ ಎಂಬಾತನಿಗಾಗಿ ಪೊಲೀಸರ ಹುಡುಕಾಟ
Last Updated 5 ಆಗಸ್ಟ್ 2022, 2:47 IST
ಅಕ್ಷರ ಗಾತ್ರ

ಅಮ್ರೋಹ (ಉತ್ತರ ಪ್ರದೇಶ): ಅಮ್ರೋಹದ ಹಸನ್‌ಪುರ ಪ್ರದೇಶದ ಗೋಶಾಲೆಯಲ್ಲಿ ಗುರುವಾರ 50ಕ್ಕೂ ಹೆಚ್ಚು ಜಾನುವಾರುಗಳು ನಿಗೂಢವಾಗಿ ಸಾವಿಗೀಡಾಗಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಪಶುಸಂಗೋಪನೆ ಸಚಿವ ಧರಂ ಪಾಲ್ ಸಿಂಗ್ ಅವರನ್ನು ಅಮ್ರೋಹಾಗೆ ತೆರಳುವಂತೆ ಸೂಚಿಸಿದ್ದಾರೆ.

ಮೇವು ತಿಂದ ಹಸುಗಳು ಗುರುವಾರ ಸಂಜೆ ಅಸ್ವಸ್ಥಗೊಂಡಿವೆ ಎಂದು ಅಮ್ರೋಹದ ಜಿಲ್ಲಾಧಿಕಾರಿ ಬಿ.ಕೆ.ತ್ರಿಪಾಠಿ ಮಾಧ್ಯಮ ಪ್ರತಿನಿಧಿಗಳಿಗೆ ಮೊದಲು ತಿಳಿಸಿದ್ದರು.

ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಿದ್ದರು.

ಗೋಶಾಲೆಯ 50 ಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಲಾಂಗೆಹ್ ನಂತರ ಸುದ್ದಿ ಸಂಸ್ಥೆ ಪಿಟಿಐಗೆ ದೃಢಪಡಿಸಿದರು.

ಗೋಶಾಲೆಗೆ ತಾಹಿರ್ ಎಂಬ ವ್ಯಕ್ತಿ ಮೇವು ಪೂರೈಸಿದ್ದ. ತಾಹಿರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಗೋಶಾಲೆಯ ಉಸ್ತುವಾರಿ ಹೊತ್ತಿರುವ ಗ್ರಾಮಾಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ಅಮ್ರೋಹಾದಲ್ಲಿ ಹಸುಗಳು ಮೃತಪಟ್ಟ ಬಗ್ಗೆ ತಿಳಿದ ಕೂಡಲೇ ಪಶುಸಂಗೋಪನಾ ಸಚಿವರಿಗೆ ಸ್ಥಳಕ್ಕೆ ತೆರಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಚಿಸಿದ್ದಾರೆ’ ಎಂದು ಸಿಎಂ ಕಚೇರಿ ಟ್ವಿಟರ್‌ ಮೂಲಕ ಮಾಹಿತಿ ನೀಡಿದೆ.

ಅಸ್ವಸ್ಥಗೊಂಡಿರುವ ಹಸುಗಳ ಚಿಕಿತ್ಸೆಗಾಗಿ ಪಶು ವೈದ್ಯರ ತಂಡವನ್ನು ಕಳುಹಿಸಲು ಸಿಎಂ ಆದೇಶ ನೀಡಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ.

‘ಘಟನೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಯಾರನ್ನೂ ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಉತ್ತರ ಪ್ರದೇಶದ ನರೈನಿ ಪ್ರದೇಶದಲ್ಲಿರುವ ಗೋಶಾಲೆಯಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ 50 ಹಸುಗಳು ಮತ್ತು ಇತರ ಜಾನುವಾರುಗಳನ್ನು ಜೀವಂತ ಸಮಾಧಿ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT