ಭಾನುವಾರ, ಆಗಸ್ಟ್ 1, 2021
25 °C

ಒಂದೇ ದಿನ 580ಕ್ಕೂ ಹೆಚ್ಚು ಸಿಎಪಿಎಫ್, ಕೇಂದ್ರ ಪಡೆಗಳ ಸಿಬ್ಬಂದಿಗೆ ಕೋವಿಡ್ ದೃಢ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ಇತರ ಎರಡು ಕೇಂದ್ರ ಪಡೆಗಳ 580ಕ್ಕೂ ಹೆಚ್ಚು ಸಿಬ್ಬಂದಿಗೆ 24 ಗಂಟೆಗಳ ಅವಧಿಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಸಂಜೆ ವೇಳೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ, ದೇಶದ ಪ್ರಮುಖ ನಾಗರಿಕ ವಿಮಾನ ನಿಲ್ದಾಣಗಳ ಭದ್ರತೆ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನೇಪಾಳ ಮತ್ತು ಭೂತಾನ್ ಗಡಿ ಕಾವಲು ಪಡೆ ಸಶಸ್ತ್ರ ಸೀಮಾ ಬಲದಲ್ಲಿ (ಎಸ್‌ಎಸ್‌ಬಿ) ಗರಿಷ್ಠ 149 ಸಿಬ್ಬಂದಿಗೆ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) 146 ಸಿಬ್ಬಂದಿಗೆ ಕೋವಿಡ್-19 ದೃಢಪಟ್ಟಿದೆ.

ಮುಖ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಗಡಿಗಳಲ್ಲಿ ಕಾರ್ಯ ನಿರ್ವಹಿಸುವ ಗಡಿ ಭದ್ರತಾ ಪಡೆಯ (ಬಿಎಸ್ಎಫ್) 132 ಸಿಬ್ಬಂದಿಗೆ ಮತ್ತು ಪ್ರಮುಖ ನಕ್ಸಲ್ ವಿರೋಧಿ ಕಾರ್ಯಾಚರಣೆ ಪಡೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) 119 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾ ಜೊತೆಗಿನ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಕಾಪಾಡುವ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ಯಲ್ಲಿ ಹೊಸದಾಗಿ 29 ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ವರದಿ ಮಾಡಿದೆ.

ಕೇಂದ್ರದ ಇತರ ಎರಡು ಪಡೆಗಳಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಭಯೋತ್ಪಾದನಾ ನಿಗ್ರಹ ಪಡೆಯಾದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ)ಯಲ್ಲಿ ಕ್ರಮವಾಗಿ 7 ಮತ್ತು 5 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.

ಏಪ್ರಿಲ್ 27ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾದ ಹೊಸ ಪ್ರಕರಣಗಳು 587 ಎಂದು ಡೇಟಾ ತಿಳಿಸಿದೆ.

ಈ ಎಲ್ಲಾ ಐದು ಸಿಎಪಿಎಫ್‌ಗಳು ಮತ್ತು ಇತರ ಎರಡು ಕೇಂದ್ರ ಪಡೆಗಳಲ್ಲಿ ಸಕ್ರಿಯ ಪ್ರಕರಣಗಳು 6,264 ರಷ್ಟಿದ್ದರೆ, 55,730 ಕ್ಕೂ ಹೆಚ್ಚು ಸಿಬ್ಬಂದಿ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡಿದ್ದಾರೆ, ಇದು ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಭಾರಿ ಉಲ್ಬಣಕ್ಕೆ ಸಾಕ್ಷಿಯಾಗಿದೆ.

ಬಿಎಸ್‌ಎಫ್‌ನಲ್ಲಿ 18,120 ಕ್ಕಿಂತ ಹೆಚ್ಚು, ಸಿಆರ್‌ಪಿಎಫ್‌ನಲ್ಲಿ 17,640 ಕ್ಕೂ ಹೆಚ್ಚು, ಸಿಐಎಸ್‌ಎಫ್‌ನಲ್ಲಿ 13,400, ಎಸ್‌ಎಸ್‌ಬಿಯಲ್ಲಿ 6,779, ಐಟಿಬಿಪಿಯಲ್ಲಿ 5,037, ಎನ್‌ಡಿಆರ್‌ಎಫ್‌ನಲ್ಲಿ 748 ಮತ್ತು ಎನ್‌ಎಸ್‌ಜಿಯಲ್ಲಿ 406 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಎನ್‌ಎಸ್‌ಜಿಯನ್ನು ಹೊರತುಪಡಿಸಿ ಈ ಪಡೆಗಳ ಒಟ್ಟು 230 ಸಿಬ್ಬಂದಿ ಈವರೆಗೂ ಮೃತಪಟ್ಟಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ನೇತೃತ್ವದಲ್ಲಿ ಸಿಎಪಿಎಫ್‌ಗಳು ಮತ್ತು ಇತರ ಎರಡು ಪಡೆಗಳನ್ನು ದೇಶಾದ್ಯಂತ ವಿವಿಧ ಆಂತರಿಕ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸಲು, ಗಡಿ ಕಾವಲು, ವಿಐಪಿ ರಕ್ಷಣೆ, ಅನಾಹುತಗಳನ್ನು ಎದುರಿಸಲು ಮತ್ತು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಿಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು