ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರ ಕೆಡವಿ, ಬಿಜೆಪಿಗೆ ಅವಕಾಶ ನೀಡಿ: ಅಮಿತ್ ಶಾ

Last Updated 3 ಜುಲೈ 2022, 15:43 IST
ಅಕ್ಷರ ಗಾತ್ರ

ಹೈದರಾಬಾದ್: ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತಿದ್ದರೆ, ತೆಲಂಗಾಣವು ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರ ಆಡಳಿತದಲ್ಲಿ ಎಲ್ಲ ರೀತಿಯಲ್ಲೂ ಹಿಂದುಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಹಾಗೆಯೇ, ವಿಧಾನಸಭೆ ಚುನಾವಣೆ ಬಳಿಕ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಪೆರೇಡ್‌ ಮೈದಾನದಲ್ಲಿ ನಡೆದ ಬಿಜೆಪಿಯ 'ವಿಜಯ ಸಂಕಲ್ಪ ಸಭಾ' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶಾ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ತೆಲಂಗಾಣವು ಅಧಿಕೃತವಾಗಿ ವಿಮೋಚನಾ ದಿನವನ್ನು ಆಚರಿಸಲಿದೆ ಎಂದು ಹೇಳಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳೂ ಪ್ರಗತಿಯ ಪಥದಲ್ಲಿ ಸಾಗುತ್ತಿವೆ. ತೆಲಂಗಾಣದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳೇ ಇಲ್ಲ. ಕೈಗಾರಿಕೆಗಳು ಸ್ಥಾಪನೆಯಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇಡೀ ದೇಶ ಮುನ್ನಡೆಯಹಾದಿಯಲ್ಲಿದೆ. ಆದರೆ, ತೆಲಂಗಾಣ ಹಿಂದುಳಿದಿದೆ. ಈ ಪರಿಸ್ಥಿತಿಯು ತೆಲಂಗಾಣಕ್ಕೆ ಒಳ್ಳೆಯದಲ್ಲ' ಎಂದಿದ್ದಾರೆ.

ಕೇಸರಿ ಪಕ್ಷಕ್ಕೆ (ಬಿಜೆಪಿಗೆ) ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದ ಶಾ, ತೆಲಂಗಾಣ ರಾಷ್ಟ್ರ ಸಮಿತಿಯನ್ನು (ಟಿಆರ್‌ಎಸ್‌) ಅನ್ನು ಕಿತ್ತೆಸೆಯಿರಿ ಎಂದು ಕರೆ ನೀಡಿದ್ದಾರೆ. 'ನಾನು ನಿಮಗೆ ಮಾತು ಕೊಡುತ್ತೇನೆ.. ಟಿಆರ್‌ಎಸ್‌ ಏನೆಲ್ಲವನ್ನು ಮಾಡಲು ವಿಫಲವಾಗಿದೆಯೇ, ಆ ಎಲ್ಲ ಭರವಸೆಗಳನ್ನು ಬಿಜೆಪಿಯು ಈಡೇರಿಸುತ್ತದೆ' ಎಂದು ತಿಳಿಸಿದ್ದಾರೆ.

ಕೆಸಿಆರ್‌ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಬಗ್ಗೆ ಭಯವಿದೆ. ಹಾಗಾಗಿ ಅವರು (ಕೆಸಿಆರ್‌) ತೆಲಂಗಾಣ ವಿಮೋಚನ ದಿನವನ್ನು ಆಚರಿಸಲಿಲ್ಲ. ಈ ಹಿಂದೆ ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್‌ ರಾಜ್ಯವನ್ನು 1948ರ ಸೆಪ್ಟೆಂಬರ್‌ 17ರಂದು ಭಾರತದ ಒಕ್ಕೂಟದಲ್ಲಿ ಸೇರಿಸಿಕೊಳ್ಳಲಾಗಿದೆ. ಆ ದಿನವನ್ನು ಬಿಜೆಪಿಯು ಅಧಿಕೃತವಾಗಿ 'ವಿಮೋಚನಾ ದಿನ' ಎಂದು ಆಚರಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಟಿಆರ್‌ಎಸ್‌ ಪಕ್ಷದ ಗುರುತು ಆಗಿರುವ ಕಾರಿನ 'ಸ್ಟೇರಿಂಗ್‌' ಓವೈಸಿ ಕೈಯಲ್ಲಿದೆ ಎಂದು ಶಾ ಆರೋಪಿಸಿದ್ದಾರೆ.

'ತೆಲಂಗಾಣ ಜನರ ಮನಸ್ಥಿತಿಯನ್ನು ಗಮನಿಸಿದ್ದೇನೆ. ಕೆಸಿಆರ್‌, ನಿಮಗೆ ಯಾವಾಗ ಬೇಕೋ ಆಗ ಚುನಾವಣೆ ನಡೆಸಿ. ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ' ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮುಂದುವರಿದು, ಕೆಸಿಆರ್‌ ಅವರು ನಿರುದ್ಯೋಗಿ ಯುವಕರ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಹೆಚ್ಚಾಗಿ, ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ತಲೆಕೆಡಿಸಿಕೊಂಡಿದ್ದಾರೆ ಎಂದೂ ಆರೋಪಿಸಿದ್ದಾರೆ.

ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT