ಭಾನುವಾರ, ಏಪ್ರಿಲ್ 2, 2023
33 °C

ಲಂಡನ್‌ ವಿಮಾನ ನಿಲ್ದಾಣದಲ್ಲಿ ಯುರೇನಿಯಂ: ಪಾಕ್ ಪಾತ್ರದ ತನಿಖೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದಿಂದ ಬಂದಿರುವ ಯುರೇನಿಯಂ ಒಳಗೊಂಡಿರುವ ಪ್ಯಾಕೇಜ್‌ ಅನ್ನು ಇತ್ತೀಚೆಗೆ ವಶಪಡಿಸಿಕೊಳ್ಳುವಿಕೆ, ಭಾರತ ನೆರೆಯ ರಾಷ್ಟ್ರದ  ರಹಸ್ಯ ಪ್ರಸರಣ ಜಾಲಗಳ ಮೇಲೆ ಮತ್ತೊಮ್ಮೆ ಗಮನ ಕೇಂದ್ರೀಕರಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪಾತ್ರದ ಬಗ್ಗೆ ತನ್ನ ದೀರ್ಘಕಾಲದ ಅನುಮಾನಕ್ಕೆ ರುಜುವಾತು ನೀಡಬಹುದಾದ್ದರಿಂದ ಬ್ರಿಟನ್‌ ಅಧಿಕಾರಿಗಳು ಪ್ರಾರಂಭಿಸಿದ ತನಿಖೆಯ ಫಲಿತಾಂಶಕ್ಕಾಗಿ ಭಾರತ ಕಾಯುತ್ತಿದೆ ಎಂದು ನವದೆಹಲಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ಡಿ. 29 ರಂದು ಬ್ರಿಟನ್ ಗಡಿ ಪಡೆ ಸಿಬ್ಬಂದಿ ನಡೆಸಿದ ವಾಡಿಕೆ ಶೋಧ ವೇಳೆ ಯುರೇನಿಯಂ ಪತ್ತೆಯಾಗಿದೆ.  ಪಾಕಿಸ್ತಾನದಿಂದ ಬಂದಿದೆ ಎಂದು ಹೇಳಲಾದ ಒಮಾನ್‌ನಿಂದ ವಿಮಾನದಲ್ಲಿ ಹೀಥ್ರೂ ವಿಮಾನ ನಿಲ್ದಾಣಕ್ಕೆ  ಬಂದಿಳಿದ ಗುಜರಿ ವಸ್ತುಗಳ ಸಾಗಣೆಯಲ್ಲಿ ಯುರೇನಿಯಂ ಪತ್ತೆಯಾಗಿದೆ ಎಂದು ದಿ ಸನ್ ವರದಿ ಮಾಡಿದೆ.

ಪ್ಯಾಕೇಜ್ ವಶಪಡಿಸಿಕೊಂಡ ಬಗ್ಗೆ ಬ್ರಿಟನ್‌ ಗಡಿ ಪಡೆ ಮಾಹಿತಿ ನೀಡಿದ ನಂತರ ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಕಮಾಂಡ್ ತನಿಖೆ  ಪ್ರಾರಂಭಿಸಿದೆ.

ರಹಸ್ಯ ಅಣ್ವಸ್ತ್ರ ಪ್ರಸರಣದಲ್ಲಿ ಪಾಕಿಸ್ತಾನದ ಪಾತ್ರ ಮತ್ತು ಭಾರತದ ಭದ್ರತೆಗೆ ಅದು ಒಡ್ಡಿರುವ ಗಂಭೀರ ಅಪಾಯದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಇತರ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಪದೇ ಪದೇ ಪ್ರಸ್ತಾಪಿಸುತ್ತಿದೆ. 

2022 ರ ಅಕ್ಟೋಬರ್‌ನಲ್ಲಿ ಉತ್ತರ ಕೊರಿಯಾದಿಂದ ಪಾಕಿಸ್ತಾನಕ್ಕೆ ಪರಮಾಣು ಮತ್ತು ರಕ್ಷಣಾ ತಂತ್ರಜ್ಞಾನಗಳ ಪ್ರಸರಣದ ಬಗ್ಗೆ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್‌ಸಿ) ಗಮನ ಸೆಳೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು