ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಯಾವಾಗಲೂ ಸುಳ್ಳು ಹೇಳುತ್ತಲೇ ಬಂದಿದೆ: ಸಿಬಿಐನ ಮಾಜಿ ಜಂಟಿ ನಿರ್ದೇಶಕ

Last Updated 23 ಆಗಸ್ಟ್ 2020, 15:03 IST
ಅಕ್ಷರ ಗಾತ್ರ

ನವದೆಹಲಿ: 1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಸ್ಫೋಟದ ನಂತರ ಭಾರತದಿಂದ ಪಲಾಯನ ಮಾಡಿದ ಉಗ್ರ ದಾವೂದ್ ಇಬ್ರಾಹಿಂ ಮತ್ತು ಅವರ ಸಹಚರರಿಗೆ ಆಶ್ರಯ ನೀಡಿರುವ ಬಗ್ಗೆ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ಯಾವಾಗಲೂ ಸುಳ್ಳು ಹೇಳುತ್ತಲೇ ಬಂದಿವೆ ಎಂದು ಸಿಬಿಐನ ಮಾಜಿ ಜಂಟಿ ನಿರ್ದೇಶಕ ಶಾಂತನು ಸೇನ್ ಭಾನುವಾರ ಹೇಳಿದ್ದಾರೆ.

ಭಯೋತ್ಪಾದನೆ ಸಂಘಟನೆಗಳ ಮೇಲೆ ಹೊಸದಾಗಿ ವಿಧಿಸಿರುವ ನಿರ್ಬಂಧಗಳ ಪಟ್ಟಿಯಲ್ಲಿ ಕರಾಚಿಯ ವಿಳಾಸದೊಂದಿಗೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಹೆಸರು ಇರುವುದನ್ನು ದೃಢಪಡಿಸಿದ್ದ ಪಾಕಿಸ್ತಾನ, ದೇಶದಲ್ಲಿ ದಾವೂದ್ ಇರುವಿಕೆಯ ಕುರಿತು ಯು-ಟರ್ನ್ ಹೊಡೆದ ಬಳಿಕ ಈ ವಿಚಾರ ತಿಳಿಸಿದ್ದಾರೆ.

'1993ರ ಮಾರ್ಚ್‌ನಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳನ್ನು ಯೋಜಿಸಿದ, ಹಣಕಾಸು ಒದಗಿಸಿದ ಮತ್ತು ಪಾಕಿಸ್ತಾನದ ಐಎಸ್‌ಐ ನಿಯೋಜಿಸಿದ್ದ ಮೂವರು ಆರೋಪಿಗಳಾದ ದಾವೂದ್ ಇಬ್ರಾಹಿಂ, ಟೈಗರ್ ಮೆಮನ್ ಮತ್ತು ಮುಸ್ತಫಾ ದೋಸಾ ಪಾಕಿಸ್ತಾನದಿಂದ ಆಶ್ರಯ ಪಡೆದಿದ್ದಾರೆ. ಅವರಿಗೆ ಆಶ್ರಯವನ್ನು ಸ್ಫೋಟಕ್ಕೆ ಕೆಲವು ದಿನಗಳ ಮೊದಲು ನೀಡಲಾಯಿತು ಮತ್ತು ಅದನ್ನು ತಡೆರಹಿತವಾಗಿ ಮುಂದುವರಿಸಲಾಗಿದೆ' ಎಂದು ಪ್ರಕರಣದ ತನಿಖೆ ನಡೆಸಿದ ಸಿಬಿಐ ವಿಶೇಷ ಕಾರ್ಯಪಡೆಯ ಉಸ್ತುವಾರಿ ವಹಿಸಿದ್ದ ಸೇನ್ ಹೇಳಿದ್ದಾರೆ.

'ಪಾಕಿಸ್ತಾನ ಯಾವಾಗಲೂ ಉಗ್ರರ ಇರುವಿಕೆಯ ಬಗ್ಗೆ ಸುಳ್ಳು ಹೇಳುತ್ತದೆ. ಕಳೆದ ರಾತ್ರಿ ಬ್ರೇಕಿಂಗ್ ನ್ಯೂಸ್ ಆಗಿದ್ದ ಮಾಧ್ಯಮ ವರದಿಯು ಅದರ (ಪಾಕಿಸ್ತಾನದ) ನಿರಾಕರಣೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿದೆ'. ಮುಂಬೈ ಸರಣಿ ಸ್ಫೋಟ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಿಬಿಐ ಅವರ ಪಾಕಿಸ್ತಾನದ ಸಂಪರ್ಕವನ್ನು ಬಹಿರಂಗಪಡಿಸಲು ಪುರಾವೆಗಳನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದರು.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ 88 ಭಯೋತ್ಪಾದಕರ ಪಟ್ಟಿಯಲ್ಲಿ ದಾವೂದ್ ಹೆಸರು ಸೇರಿದೆ. ಅವನ ಗಡಿಪಾರು ಮಾಡಲು ನಾವು ಒತ್ತಾಯಿಸಬೇಕು ಮತ್ತು ನಮ್ಮ ಪ್ರಯತ್ನಗಳಲ್ಲಿ ಕೈಜೋಡಿಸಲು ಇತರ ದೇಶಗಳನ್ನು ಮನವೊಲಿಸಬೇಕು. ಈ ಪಟ್ಟಿಯಿದ್ದರೂ ಕೂಡ ಅದನ್ನು ನಿರಾಕರಿಸುತ್ತಿರುವುದರಿಂದಾಗಿ ನಮ್ಮ ದೃಷ್ಟಿಯಲ್ಲಿ ಇದು ವ್ಯರ್ಥವಾಗಿದೆ. ಅವರು ಯಾವಾಗಲೂ ಈ ಕುರಿತಾದ ನಿರಾಕರಣೆಯಲ್ಲಿ ಮುಂದುವರಿಯುತ್ತಾರೆ, ಈ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

ಭಾರತದಲ್ಲಿ ಮೋಸ್ಟ್ ವಾಂಟೆಡ್ ಆಗಿರುವ ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ನಿನ್ನೆ ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೆ, ಆತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಅಲ್ಲಿನ ಸರ್ಕಾರ ಮತ್ತೆ ಹಿಂಜರಿದಿದೆ.

1993ರ ಮುಂಬೈ ಸರಣಿ ಸ್ಫೋಟಗಳಿಗೆ ಕಾರಣವಾದ ದಾವೂದ್ ಮತ್ತು ಇತರ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದನ್ನು ಇಸ್ಲಾಮಾಬಾದ್ ಹಲವು ವರ್ಷಗಳಿಂದ ನಿರಾಕರಿಸುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT