ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆಗೆ ಉತ್ತೇಜನ ನೀಡಲು ಪಾಕ್‌ನಿಂದ ಕೋವಿಡ್‌ ಸ್ಥಿತಿ ದುರ್ಬಳಕೆ: ಭಾರತ

Last Updated 3 ನವೆಂಬರ್ 2020, 7:16 IST
ಅಕ್ಷರ ಗಾತ್ರ

‌‌ವಿಶ್ವಸಂಸ್ಥೆ: ‘ಗಡಿ ರೇಖೆಯುದ್ದಕ್ಕೂ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು, ಪಾಕಿಸ್ತಾನವು ಕೋವಿಡ್‌–19 ಪರಿಸ್ಥಿತಿಯ ಲಾಭ ಪಡೆಯುತ್ತಿದೆ’ ಎಂದು ಭಾರತ ಕಟುವಾಗಿ ಟೀಕಿಸಿದೆ. ಅಲ್ಲದೆ, ದ್ವೇಷ ಭಾಷಣಗಳ ಮೂಲಕ ಭಾರತದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ಪ್ರತ್ಯೇಕತಾ ಭಾವನೆ ಮೂಡಿಸುತ್ತಿದೆ ಎಂದೂ ಆರೋಪಿಸಿದೆ.

‘ವರ್ಣಭೇದ, ವರ್ಣಭೇದ ತಾರತಮ್ಯ, ಅನ್ಯರ ಬಗ್ಗೆ ದ್ವೇಷದ ಭಾವ ಮತ್ತು ಸಂಬಂಧಿತ ಅಸಹಿಷ್ಣುತೆ’ ಕುರಿತು ವಿಶ್ವಸಂಸ್ಥೆಯ ಶಾಶ್ವತ ಆಯೋಗದ ಪ್ರಥಮ ಕಾರ್ಯದರ್ಶಿ ಅಶೀಶ್ ಶರ್ಮಾ ಅವರು ಮಾತನಾಡುತ್ತಿದ್ದರು.

ಪಾಕಿಸ್ತಾನದ ದ್ವೇಷ ಭಾಷಣಗಳು ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ. ಬದಲಿಗೆ ವಿವಿಧ ಸಂಘಟಟನೆಗಳು, ವ್ಯಕ್ತಿ ಹಾಗೂ ಪ್ರಮುಖ ಸ್ಥಾನದಲ್ಲಿರುವ ರಾಜಕೀಯ ನಾಯಕರನ್ನು ಗುರಿಯಾಗಿಸಿದೆ ಎಂದರು.

ಸದ್ಯ, ಕೋವಿಡ್–19 ಕಾರಣದಿಂದಾಗಿ ಜಗತ್ತಿನಲ್ಲಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇಂಥ ಪರಿಸ್ಥಿತಿಯ ಅನುಕೂಲ ಪಡೆಯುತ್ತಿರುವ ಪಾಕಿಸ್ತಾನ ಗಡಿಯಲ್ಲಿ ಉಗ್ರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಅಸಹಿಷ್ಣುತೆ ಮತ್ತು ಹಿಂಸಾಚಾರ ಮೂಡಿಸಲು ಪಾಕಿಸ್ತಾನ ತನ್ನ ದ್ವೇಷ ಭಾಷಣದಿಂದ ಯತ್ನಿಸುತ್ತಿದೆ ಎಂದು ಪ್ರತಿಪಾದಿಸಿದರು. ಬದಲಿಗೆ ಪಾಕಿಸ್ತಾನವು ತನ್ನದೇ ನೆಲದಲ್ಲಿ ಇರುವ ಹಿಂಸಾಚಾರ, ತಾರತಮ್ಯ ಧೋರಣೆ ಹಾಗೂ ಅಹಿಷ್ಣುತಾ ವಾತಾವರಣವನ್ನು ನಿವಾರಿಸಲು ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.

ಜಗತ್ತು ಇಂದು ಕೋವಿಡ್–19 ಪಿಡುಗಿನಿಂದ ಉದ್ಭವಿಸಿರುವ ಸವಾಲುಗಳ‌ನ್ನಷ್ಟೇ ಎದುರಿಸುತ್ತಿಲ್ಲ. ಸಮುದಾಯಗಳ ನಡುವೆ ದ್ವೇಷದ ಬೀಜ ಬಿತ್ತುತ್ತಿರುವ ತಪ್ಪು ಮಾಹಿತಿಗಳ ಪಿಡುಗಿನ ಸವಾಲನ್ನೂ ಎದುರಿಸುತ್ತಿದೆ ಎಂದು ಶರ್ಮಾ ಪ್ರತಿಪಾದಿಸಿದರು.

‌ಕೋವಿಡ್ ಸಂದರ್ಭದಲ್ಲಿ ತಪ್ಪು ಮಾಹಿತಿಗಳ ಹರಿವಿನಿಂದಾಗಿ ಮೂಡುವ ಪರಿಸ್ಥಿತಿ ಎದುರಿಸುವ ಕುರಿತು ಭಾರತ ಮತ್ತು ಇತರೆ 12 ರಾಷ್ಟ್ರಗಳು ಕಳೆದ ಜೂನ್‌ನಲ್ಲಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದವು.

ಭಾರತ ಕೋವಿಡ್‌ ಸ್ಥಿತಿಯನ್ನು ಪಾರದರ್ಶಕವಾದ ರೀತಿಯಲ್ಲಿ ಎದುರಿಸುತ್ತಿದೆ. ಸರ್ವರಿಗೂ ವೈದ್ಯ ಸೇವೆ ಒದಗಿಸಲು ಆದ್ಯತೆ ನೀಡುತ್ತಿದೆ ಎಂದು ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಯ ಮೂರನೇ ಸಮಿತಿ ಸಭೆಯಲ್ಲಿ ಪ್ರತಿಪಾದಿಸಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT