ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ವರ್ಗಾವಣೆ

Last Updated 17 ಮಾರ್ಚ್ 2021, 21:38 IST
ಅಕ್ಷರ ಗಾತ್ರ

ಮುಂಬೈ/ ನವದೆಹಲಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕ ವಾಹನದ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವ ಕಾರಣಕ್ಕೆ ಮುಂಬೈ ನಗರ ಪೊಲೀಸ್‌ ಆಯುಕ್ತ ಹುದ್ದೆಯಿಂದ ಪರಮ್‌ ಬೀರ್‌ ಸಿಂಗ್‌ ಅವರನ್ನು ಮಹಾರಾಷ್ಟ್ರ ಸರ್ಕಾರ ಬುಧವಾರ ವರ್ಗಾವಣೆ ಮಾಡಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಹುದ್ದೆಯ (ಡಿಜಿಪಿ) ಹೆಚ್ಚುವರಿ ಅಧಿಕಾರವಹಿಸಿಕೊಂಡಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ್‌ ನಗರಾಳೆ ಅವರನ್ನು ನೂತನ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಪರಮ್‌ ಬೀರ್‌ ಸಿಂಗ್‌ ಅವರನ್ನು ಗೃಹ ರಕ್ಷಕ ದಳದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ‘ಸರ್ಕಾರ ಅತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಹೇಮಂತ್‌ ನಗರಾಳೆ ಅವರನ್ನು ಮುಂಬೈ ನಗರದ ನೂತನ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಲಾಗಿದೆ. ರಜನೀಶ್‌ ಸೇಠ್‌ ಅವರಿಗೆ ಪೊಲೀಸ್‌ ಮಹಾನಿರ್ದೇಶಕ ಹುದ್ದೆಯ (ಡಿಜಿಪಿ) ಹೆಚ್ಚುವರಿ ಅಧಿಕಾರ ನೀಡಲಾಗಿದೆ’ ಎಂದು ಗೃಹ ಸಚಿವ ಅನಿಲ್‌ ದೇಶಮುಖ್‌ ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಅನಿಲ್‌ ದೇಶಮುಖ್‌ ಈ ನಿರ್ಧಾರ ಪ್ರಕಟಿಸಿದ್ದಾರೆ. ಆಡಳಿತಾರೂಢ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ನಾಯಕರ ಸರಣಿ ಸಭೆಗಳ ಬಳಿಕ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪೊಲೀಸ್‌ ಆಯುಕ್ತರನ್ನು ಬದಲಾಯಿಸುವ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸಹ ಸೋಮವಾರ ಇದೇ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ್ದರು. ಸಿಂಗ್‌ ಅವರ ಸೂಚನೆಯ ಮೇರೆಗೆ ಬಾಂಬ್‌ ಭೀತಿಯ ಪ್ರಕರಣವನ್ನು ಸದ್ಯ ಬಂಧಿತರಾಗಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ನಿರ್ವಹಿಸಿದ್ದರು
ಎನ್ನಲಾದ ವರದಿಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನಿಖೆಗೆ ಸಹಕಾರ: ಸ್ಕಾರ್ಪಿಯೊ ವಾಹನದಲ್ಲಿ ಸ್ಪೋಟಕಗಳು ತುಂಬಿದ್ದ ಪ್ರಕರಣದ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಮುಂಬೈ ಪೊಲೀಸ್ ಅಧಿಕಾರಿ ಸಚಿನ್‌ ವಾಜೆ ಬಳಸುತ್ತಿದ್ದ ಮರ್ಸಿಡಿಸ್‌ ಕಾರಿನ ಹಿಂದಿನ ಮಾಲೀಕರು ತಿಳಿಸಿದ್ದಾರೆ.

ವಾಜೆ ಬಳಸುತ್ತಿದ್ದ ಮರ್ಸಿಡಿಸ್ ಕಾರಿನ ಹಿಂದಿನ ಮಾಲೀಕ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸರನಾಶ್ ಭಾವ್ಸಾರ್. ‘ನಾನು ಕಳೆದ ತಿಂಗಳು ಈ ವಾಹನವನ್ನು ಆನ್‌ಲೈನ್‌ ಜಾಲತಾಣದ ಮೂಲಕ ಮಾರಾಟ ಮಾಡಿದ್ದೆ. ಆದರೆ ಯಾರು ಈ ವಾಹನ ಖರೀದಿಸಿದ್ದಾರೆಂದು ಗೊತ್ತಿಲ್ಲ‘ ಎಂದು ಭಾವ್ಸಾರ್ ಟಿವಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

‘ನನಗೆ ಸಚಿನ್‌ ವಾಜೆ ಯಾರು ಅಂತ ಗೊತ್ತಿಲ್ಲ. ಮಂಗಳವಾರ ಅವರ ಹೆಸರನ್ನು ಕೇಳಿದ ನಂತರವೇ, ಈ ಪ್ರಕರಣದ ವಿಚಾರ ಗೊತ್ತಾಯಿತು‘ ಎಂದು ಭಾವ್ಸಾರ್ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳಾಗಲೀ ಅಥವಾ ಪೊಲೀಸರಾಗಲೀ ಭಾವ್ಸಾರ್ ಅವರನ್ನು ಇಲ್ಲಿವರೆಗೂ ಸಂಪರ್ಕಿಸಿಲ್ಲ.

ನಾಲ್ಕನೇ ದಿನವೂ ಪೊಲೀಸ್‌ ಅಧಿಕಾರಿ ಕಾಝಿ ವಿಚಾರಣೆ: ಉದ್ಯಮಿ ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ಅಧಿಕಾರಿ ರಿಯಾಜುದ್ದೀನ್‌ ಕಾಝಿ ಅವರನ್ನು ಸತತ ನಾಲ್ಕನೇ ದಿನವಾದ ಬುಧವಾರವೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಚಾರಣೆ ನಡೆಸಿದೆ.

ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿರುವ ಕಾಝಿ ಸದ್ಯ ಅಪರಾಧ ವಿಭಾಗದ ಗುಪ್ತ ದಳ ಘಟಕದಲ್ಲಿ (ಸಿಐಯು) ಕಾರ್ಯನಿರ್ವಹಿಸುತ್ತಿದ್ದಾರೆ.

ಬಂಧಿತರಾಗಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ವಾಸಿಸುತ್ತಿದ್ದ ಠಾಣೆಯ ಸಾಕೇತ್‌ ಪ್ರದೇಶದಿಂದ ಫೆಬ್ರುವರಿ 27ರಂದು ಸಿಸಿಟಿವಿಗಳ ಡಿಜಿಟಲ್‌ ವಿಡಿಯೊ ರಿಕಾರ್ಡ್‌ಗಳನ್ನು (ಡಿವಿಆರ್‌) ಕಾಝಿ ಸಂಗ್ರಹಿಸಿದ್ದರು. ಸಾಕ್ಷ್ಯಗಳನ್ನು ನಾಶಪಡಿಸಲು ಡಿವಿಆರ್‌ ಸಂಗ್ರಹಿಸಲಾಗಿತ್ತು ಎನ್ನುವ ಅನುಮಾನವನ್ನು ಎನ್‌ಐಎ ವ್ಯಕ್ತಪಡಿಸಿದೆ.

ಫೆಬ್ರುವರಿ 25ರಂದು ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಕಾರ್ಪಿಯೊ ವಾಹನದ ನಕಲಿ ನಂಬರ್‌ ಪ್ಲೇಟ್‌ಗಳನ್ನು ಸಹ ಕಾಝಿ ಸಂಗ್ರಹಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪರಾಧ ವಿಭಾಗದ ಮತ್ತೊಬ್ಬ ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ಪ್ರಕಾಶ್‌ ಹೊವಾಳ್‌ ವಿಚಾರಣೆಯನ್ನು ಸಹ ಬುಧವಾರ ನಡೆಸಲಾಗಿದೆ.

ವಾಜೆಗೆ ಸೂಚನೆ ನೀಡಿದ್ದು ಯಾರು?

ಬಂಧಿತರಾಗಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆಗೆ ಸೂಚನೆ ನೀಡುತ್ತಿದ್ದರು ಎನ್ನಲಾದ ವ್ಯಕ್ತಿಗಳನ್ನು ಎನ್‌ಐಎ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಕೆಲವು ವ್ಯಕ್ತಿಗಳ ಸೂಚನೆಯ ಮೇರೆಗೆ ವಾಜೆ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ತನಿಖೆಯ ಸಂದರ್ಭದಲ್ಲಿ ಕೆಲವು ಸಾಕ್ಷ್ಯಗಳು ಸಹ ದೊರೆತಿವೆ. ಅಂತಹ ವ್ಯಕ್ತಿಗಳನ್ನು ವಿಚಾರಣೆಗೆ ಕರೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಹೊಣೆಯನ್ನು ಹೊತ್ತುಕೊಂಡು ಟೆಲಿಗ್ರಾಂ ಆ್ಯಪ್‌ನಲ್ಲಿ ಜೈಷ್‌–ಉಲ್‌–ಹಿಂದ್‌ ಸಂಘಟನೆ ಪೋಸ್ಟ್‌ ಮಾಡಿದ್ದ ಪತ್ರದ ಬಗ್ಗೆಯೂ ತನಿಖೆ ಮಾಡಲಾಗುವುದು. ದೆಹಲಿ ಪೊಲೀಸ್‌ ವಿಶೇಷ ಘಟಕವು ಈಗಾಗಲೇ ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ಸಹಚರ ತೆಹಸ್ರೀನ್‌ ಅಖ್ತರ್‌ನನ್ನು ವಶಕ್ಕೆ ಪಡೆದಿದೆ. ಈತ ಸುಧಾರಿತ ಸ್ಫೋಟಕಗಳ ಬಗ್ಗೆ ಪರಿಣತಿ ಪಡೆದಿದ್ದಾನೆ ಎಂದು ತಿಳಿಸಿದ್ದಾರೆ.

ಅಖ್ತರ್‌ನ ವಿಚಾರಣೆ ಬಳಿಕ ಮೊಬೈಲ್‌ ಸೇರಿದಂತೆ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಈ ಬಗ್ಗೆಯೂ ವಾಜೆ ಅವರನ್ನು ಪ್ರಶ್ನಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಪ್ರಕರಣದ ಮಹತ್ವ ಸುಳಿವು ಲಭ್ಯವಾಗಿದೆ. ಶೀಘ್ರ ಈ ಪ್ರಕರಣದ ಹಿಂದಿನ ಸಂಚು ಬಯಲು ಮಾಡಲಾಗುವುದು ಎಂದು ತಿಳಿಸಿದ್ದಾರೆ.

16 ವರ್ಷಗಳ ಸುದೀರ್ಘ ಅವಧಿಗೆ ಅಮಾನುತಗೊಂಡಿದ್ದ ಸಚಿನ್‌ ವಾಜೆ ಅವರಿಗೆ ಮತ್ತೆ ಗೌರವ ಪಡೆದುಕೊಳ್ಳುವುದು ಮುಖ್ಯವಾಗಿತ್ತು. ಹೀಗಾಗಿಯೇ ಈ ಸಂಚಿನ ಭಾಗವಾಗಲು ಒಪ್ಪಿಕೊಂಡಿರುವ ಸಾಧ್ಯತೆಗಳಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಾಟ್ಕೋಪರ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಶಂಕಿತ ಆರೋಪಿ ಖ್ವಾಜಾ ಯುನುಸ್‌ 2003ರಲ್ಲಿ ಸಾವಿಗೀಡಾಗಿದ್ದ. ಹೀಗಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜೆ ಅವರನ್ನು 2004ರಲ್ಲಿ ಅಮಾನತುಗೊಳಿಸಲಾಗಿತ್ತು.

‘ವಾಜೆ ಅಮಾನತು ರದ್ದು ಕೋರಿದ್ದ ಉದ್ಧವ್‌’

ದೆಹಲಿ: ‘ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರ ಅಮಾನತು ಆದೇಶವನ್ನು ರದ್ದುಪಡಿಸುವಂತೆ 2018ರಲ್ಲಿ ಶಿವಸೇನಾ ಅಧ್ಯಕ್ಷರಾಗಿದ್ದ ಉದ್ಧವ್‌ ಠಾಕ್ರೆ ಕೋರಿದ್ದರು’ ಎಂದು ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಬುಧವಾರ ಬಹಿರಂಗಪಡಿಸಿದ್ದಾರೆ.

‘2018ರಲ್ಲಿ ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದೆ. ಆಗ ನಾನು ಗೃಹ ಖಾತೆಯನ್ನು ಸಹ ಹೊಂದಿದ್ದೆ. ಅಮಾನತುಗೊಂಡಿದ್ದ ವಾಜೆ ಅವರನ್ನು ಪೊಲೀಸ್‌ ಇಲಾಖೆಯಲ್ಲಿ ಮರು ನೇಮಿಸಿಕೊಳ್ಳುವಂತೆ ಉದ್ಧವ್‌ ಠಾಕ್ರೆ ಆಗ ದೂರವಾಣಿ ಕರೆ ಮಾಡಿದ್ದರು. ಬಳಿಕ, ಶಿವಸೇನಾದ ಕೆಲವು ಸಚಿವರು ಸಹ ಇದೇ ವಿಷಯಕ್ಕೆ ನನ್ನನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT