ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್‌: ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿಕೆ- ಮುಂದೂಡಿಕೆಯಲ್ಲೇ ಮುಗಿದ ಕಲಾಪ

Last Updated 27 ಜುಲೈ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ಪೆಗಾಸಸ್‌ ಗೂಢಚರ್ಯೆ ಹಾಗೂ ವಿವಾದಿತ ಕೃಷಿ ಕಾಯ್ದೆಗಳ ವಿಚಾರವಾಗಿ ಪ್ರತಿಪಕ್ಷಗಳ ಸಂಸದರ ಪ್ರತಿಭಟನೆ ಮುಂದುವರಿದಿದ್ದರಿಂದ, ಸಂಸತ್ತಿನ ಉಭಯ ಸದನಗಳ ಕಲಾಪವು ಮಂಗಳವಾರ ಮುಂದೂಡಿಕೆಯಲ್ಲಿಯೇ ಮುಗಿದುಹೋಯಿತು.‌

ಸಂಜೆ 4.30ರವರೆಗೆ ಲೋಕಸಭೆಯ ಕಲಾಪವು ಒಂಬತ್ತು ಬಾರಿ ಮುಂದೂಡಿಕೆಯಾದರೆ, ರಾಜ್ಯಸಭೆ ಕಲಾಪವು ಸಂಜೆ ಮೂರೂವರೆ ತನಕ ನಾಲ್ಕು ಸಲ ಮುಂದೂಡಿಕೆಯಾಗಿ, ನಂತರ ಎರಡೂ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ನಾಲ್ಕೂವರೆಗೆ ಮತ್ತೆ ಲೋಕಸಭೆ ಕಲಾಪ ಆರಂಭವಾದಾಗ ಸಭಾಧ್ಯಕ್ಷ ಸ್ಥಾನದಲ್ಲಿದ್ದ ರಾಜೇಂದ್ರ ಅಗರ್‌ವಾಲ್‌, ಪ್ರಮುಖ ಪ್ರಸ್ತಾಪಗಳ ಚರ್ಚೆಗೆ ಅನುಮತಿ ನೀಡಿದರು. ಆದರೆ, ಪ್ರತಿಪಕ್ಷಗಳ ಸದಸ್ಯರು ಮತ್ತೆ ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿ ಘೋಷಣೆಗಳೊಂ
ದಿಗೆ, ಪ್ರತಿಭಟನೆ ತೀವ್ರಗೊಳಿಸಿದರು.

ಗದ್ದಲ–ಘೋಷಣೆಗಳ ನಡುವೆಯೇ ಕೆಲವು ಸದಸ್ಯರು ವಿಷಯಗಳನ್ನು ಪ್ರಸ್ತಾಪಿಸಿದರು. ಸುಗಮ ಕಲಾಪಕ್ಕೆ ಸಹಕರಿಸುವಂತೆ ಸಭಾಧ್ಕಕ್ಷರು ಮಾಡಿದ ಮನವಿಗೆ ಸ್ಪಂದನ ದೊರೆಯಲಿಲ್ಲ. ಪ್ರತಿಭಟನೆ ನಿಲ್ಲದಾದಾಗ, ಕಲಾಪವನ್ನು ದಿನದಮಟ್ಟಿಗೆ ಮುಂದೂಡಿದರು.

ತೋಮರ್‌ ತಿರುಗೇಟು: ಪ್ರಶ್ನೋತ್ತರ ಅವಧಿಯಲ್ಲಿ ಘೋಷಣೆಗಳು ತೀವ್ರಗೊಂಡಾಗ, ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಪ್ರತಿಪಕ್ಷಗಳ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

‘ಅವರಿಗೆ ನಿಜಕ್ಕೂ ರೈತರ ಕಾಳಜಿ ಇದ್ದಿದ್ದರೆ ಕಲಾಪಕ್ಕೆ ಅವಕಾಶ ಕೊಡುತ್ತಿದ್ದರು’ ಎಂದು ಟೀಕಿಸಿದರು. ರೈತರಿಗೆ ಸಂಬಂಧಿಸಿದ ಅಂದಾಜು 15 ಪ್ರಶ್ನೆಗಳಿವೆ. ಅವರ ಬಗ್ಗೆ ನಿಮಗೆ ಕಳಕಳಿ ಇದ್ದಲ್ಲಿ, ಕಲಾಪ ನಡೆಯಲು ಅವಕಾಶ ಕೊಡಿ. ಕೇಂದ್ರ ಸರ್ಕಾರವು ಏನು ಹೇಳುತ್ತಿದೆ ಎಂಬುದನ್ನು ಮೊದಲು ಕೇಳಿಸಿಕೊಳ್ಳಿ. ಅದು ಬಿಟ್ಟು, ಈ ರೀತಿ ಅಡ್ಡಿ ಮಾಡುವುದು ಸದನದ ಘನತೆಗೆ ಚ್ಯುತಿ ತಂದಂತೆ’ ಎಂದು ಕಿಡಿಕಾರಿದರು.

ಅದಾದ ಬಳಿಕ ಕಲಾಪವು ಮುಂದೂಡಿಕೆಯಾಗುತ್ತಲೇ ಹೋಯಿತು.ಇತ್ತ ರಾಜ್ಯಸಭೆಯಲ್ಲೂ ಅದೇ ವಾತಾವರಣ ಮುಂದುವರಿದಿದ್ದರಿಂದ, ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಕಲಾಪಕ್ಕೆ ಕಾಂಗ್ರೆಸ್‌ ಅಡ್ಡಿ: ಪ್ರಧಾನಿ

ಸಂಸತ್ತಿನ ಎರಡೂ ಸದನಗಳಲ್ಲಿ ಸುಗಮ ಕಲಾಪ ನಡೆಯಲು ಕಾಂಗ್ರೆಸ್‌ ಬಿಡುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಹರಿಹಾಯ್ದಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮುಂಗಾರು ಅಧಿವೇಶನವನ್ನು ಹಳಿತಪ್ಪಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಬಂಡವಾಳವನ್ನು ಬಯಲು ಮಾಡುವಂತೆ ಪಕ್ಷದ ಸಂಸದರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT