ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ ಸಾಹಿತ್ಯೋತ್ಸವ: ಸರ್ಕಾರದ ನೋಟಿಸ್ ಬೋರ್ಡ್ ಆದ ಸಂಸತ್ –ಶಶಿ ತರೂರ್

‘ಪ್ರಜಾಪ್ರಭುತ್ವ’ ಗೋಷ್ಠಿ
Last Updated 20 ಜನವರಿ 2023, 23:15 IST
ಅಕ್ಷರ ಗಾತ್ರ

ಜೈಪುರ: ಕೇಂದ್ರ ಸರ್ಕಾರವು ಸಂಸತ್ತನ್ನು ತನ್ನ ನೋಟಿಸ್ ಬೋರ್ಡ್ ಎನ್ನುವಂತೆ ಸೀಮಿತ ಮಾಡಿಬಿಟ್ಟಿದೆ ಎಂದು ರಾಜಕಾರಣಿ, ಸಾಹಿತಿ ಶಶಿ ತರೂರ್ ವಿಷಾದಿಸಿದರು.

ಜೈಪುರ ಸಾಹಿತ್ಯೋತ್ಸವದ ಎರಡನೇ ದಿನವಾದ ಶುಕ್ರವಾರ ಅವರು 'ಸಸ್ಟೇನಿಂಗ್ ಡೆಮಾಕ್ರಸಿ; ನರ್ಚರಿಂಗ್ ಡೆಮಾಕ್ರಸಿ' (ಪ್ರಜಾಪ್ರಭುತ್ವದ ಉಳಿವು, ಪೋಷಣೆ) ಗೋಷ್ಠಿಯಲ್ಲಿ ತ್ರಿಪುರ್ ದಮನ್ ಸಿಂಗ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಹಿಂದೆ 1962ರಲ್ಲಿ ಚೀನಾ ಎದುರು ಯುದ್ಧ ನಡೆದ ಸಂದರ್ಭದಲ್ಲೂ ಸಂಸತ್‌ನಲ್ಲಿ ರಾಜಕಾರಣಿಗಳು ತಾವು ಮಾಡಿದ ಕೆಲಸಗಳನ್ನು ಪ್ರಶ್ನಿಸುವ ಪರಿಪಾಟವಿತ್ತು. ಗುಲಾಬ್ ನಬಿ ಆಜಾದ್ ಅವರು ಆರೋಗ್ಯ ಸಚಿವಾಗಿದ್ದಾಗ ಒಂದು ಮಸೂದೆ ಕುರಿತು ಪ್ರಶ್ನೆ ಎದ್ದಿದ್ದಕ್ಕೆ, ಮತ್ತೆ ಕರಡನ್ನೇ ತಿದ್ದಿಕೊಂಡು ಬರಲು ಒಪ್ಪಿದ್ದರು. ಈಗಿನ ಸರ್ಕಾರ ತನಗೆ ಏನು ಹೇಳಬೇಕಿದೆಯೊ, ಮಾಡಬೇಕಿದೆಯೊ ಅದನ್ನಷ್ಟೆ ಸಂಸತ್‌ನಲ್ಲಿ ಮಾಡುತ್ತಿದೆ. ಭಿನ್ನಮತ ಎನ್ನುವುದು ಸಾಧ್ಯವಿಲ್ಲವಾಗಿದೆ. ವಿಪ್ ನೀಡಿ, ಕಟ್ಟಿಹಾಕಿ ತಮಗೆ ಏನು ಬೇಕೋ ಅದನ್ನೇ ಮಾಡಿಕೊಳ್ಳುತ್ತಾರೆ ಎಂದು ಬೇಸರದಿಂದ ಹೇಳಿದರು.

ಸತ್ಯಾಗ್ರಹ, ಪ್ರತಿಭಟನೆ ಹಿಂದೆ ವಸಾಹತುಶಾಹಿಗಳ ವಿರುದ್ಧದ ಅಸ್ತ್ರವಾಗಿದ್ದವು. ಅವನ್ನು ಸ್ಥಳೀಯ ಸಮಸ್ಯೆಯಾಗಿ ಬಗೆಹರಿಸಿಕೊಳ್ಳಲು ಸಂಸತ್ತನ್ನು ಬಳಸಿಕೊಳ್ಳುವುದು ಅಂಬೇಡ್ಕರ್ ಅವರಿಗೆ ಇಷ್ಟವಿರಲಿಲ್ಲ. ಸದನದಲ್ಲಿ ಆರೋಗ್ಯಕರ‌ ಸಂವಾದವನ್ನು ಅವರು ಬಯಸಿದ್ದರು. ಜವಾಹರಲಾಲ್ ನೆಹರೂ ಕೂಡ ಪ್ರಜಾಪ್ರಭುತ್ವದಲ್ಲಿ‌ ನಂಬಿಕೆ ಉಳ್ಳವರೇ ಆಗಿದ್ದರು ಎಂದರು.

ಸಮಸ್ಯೆಗಳನ್ನು ಸರ್ಕಾರದ ಯೋಜನೆಗಳಿಂದ ಬಗೆಹರಿಸಿಕೊಳ್ಳಲು ಒತ್ತಡ ತರುವುದೇ ಸರಿಯಾದ ಕ್ರಮ. ಜನರ ನಡುವೆ ಸುಖಾಸುಮ್ಮನೆ ಹೋರಾಡಿದರಷ್ಟೆ ಸಾಲುವುದಿಲ್ಲ. ಅಣ್ಣಾ ಹಜಾರೆ ಚಳವಳಿ ಜೋರಾಗಿತ್ತಾದರೂ ಅದು ಒಂದು ಉತ್ತಮ ಯೋಜನೆ ರೂಪುಗೊಳ್ಳಲು ಇಂಬುಗೊಡಲಿಲ್ಲ ಎಂದು ಉದಾಹರಿಸಿದರು.

ಟರ್ಕಿ, ಹಂಗರಿ, ಬ್ರೆಜಿಲ್ ಮೊದಲಾದ ದೇಶಗಳಲ್ಲಿ ಪ್ರಜಾಪ್ರಭುತ್ವದ ಗುಣಮಟ್ಟದಲ್ಲಿ ಕುಸಿತವಾಗಿದೆ. ಭಾರತದ ಸ್ಥಿತಿಯೂ ಅದೇ ಆಗಿದೆ ಎಂದು ವಿಶ್ವದ ಹಲವು ವಿದ್ವಾಂಸರು ಅಧ್ಯಯನ ಮಾಡಿ ತಿಳಿಸಿದ್ದಾರೆ. ನರೇಂದ್ರಮೋದಿ ಸೇರಿದಂತೆ ಕೆಲವು ದೇಶಗಳ ನಾಯಕರು ಧರ್ಮದ ಆಧಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು‌ ಅವರು ವಿಶ್ಲೇಷಿಸಿದರು.

ನೊಬೆಲ್ ಪುರಸ್ಕೃತರ ಅಕ್ಷರ ಪ್ರಸವ
ತಾಂಜೇನಿಯಾದಲ್ಲಿ ಹುಟ್ಟಿ, ಯುರೋಪ್ ವಸಾಹತೀಕರಣದ ಸಂದರ್ಭದಲ್ಲಿ ನಿರಾಶ್ರಿತರಾಗಿ ಇಂಗ್ಲೆಂಡ್‌ ಸೇರಿದ ಬಾಲ್ಯದ ದಿನಗಳನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಬ್ದುಲ್‌ರಜಾಕ್ ಗುರ್ನಾ ತಮ್ಮ ಬದುಕು ಹಾಗೂ ಬರಹ ಕುರಿತ ಸಂವಾದದಲ್ಲಿ ಶುಕ್ರವಾರ ನೆನಪಿಸಿಕೊಂಡರು.

ಯಾವುದೇ ಕುಶಲ ಕೆಲಸದ ಅರಿವಿಲ್ಲದ, ಕಷ್ಟ ಅನುಭವಿಸಿದ್ದವರ ಸ್ಥಿತಿಯನ್ನೇ ಕಂಡಿರದೇ ಇದ್ದ ತಮ್ಮ ಬಾಲ್ಯದಿಂದ ಯೌವನದ ದಿನಗಳಲ್ಲಿ ಬರೆಯುವ ತುಡಿತ ಮೂಡಿದ್ದನ್ನು ಅವರು ಹೇಳಿಕೊಂಡರು. ಮೊದಲು ಕರಡು ಪ್ರತಿಯ ರೂಪದಲ್ಲಿದ್ದ ಹಾಳೆಗಳು ಆಮೇಲೆ ಕೃತಿಯಾದ ಸುಖವನ್ನೂ ಮೆಲುಕು ಹಾಕಿದರು. ಮೊದಲ ಕೃತಿ ಪ್ರಸವಕ್ಕೆ ವರ್ಷಗಟ್ಟಲೆ ಕಾಯಬೇಕಾಗಿ ಬಂದದ್ದನ್ನು, ಬರೆಯುವುದು ಸುಖ– ಉತ್ಕಟತೆಯಾದರೆ ಕೊನೆಯವರೆಗೆ ಉಳಿಯುತ್ತದೆ ಎನ್ನುವುದನ್ನೂ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT