ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಗಾಸಸ್’ ಬಳಸಿ 40ಕ್ಕೂ ಹೆಚ್ಚು ಭಾರತೀಯ ಪತ್ರಕರ್ತರ ಫೋನ್‌ಗಳು ಹ್ಯಾಕ್‌

Last Updated 18 ಜುಲೈ 2021, 19:53 IST
ಅಕ್ಷರ ಗಾತ್ರ

ನವದೆಹಲಿ: ‘ಪೆಗಾಸಸ್’ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು 40 ಪತ್ರಕರ್ತರು ಹಾಗೂ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಗಳು ಸೇರಿದಂತೆ 12 ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್‌ ಮಾಡಿ, ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಇವರೇ ಅಲ್ಲದೆ ಕೆಲ ಸಚಿವರು, ವಿರೋಧ ಪಕ್ಷಗಳ ನಾಯಕರು, ಕಾನೂನು ಸಮುದಾಯದವರು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕು ಕಾರ್ಯಕರ್ತರು ಸೇರಿದಂತೆ 300 ಭಾರತೀಯರ ಮೊಬೈಲ್‌ಗಳು ಹ್ಯಾಕ್‌ ಆಗಿವೆ ಎಂದು ‘ದಿ ವೈರ್‌’ ಭಾನುವಾರ ರಾತ್ರಿ ವರದಿ ಮಾಡಿದೆ.

ನಿರ್ದಿಷ್ಟ ಜನರ ಮೇಲಿನ ಕಣ್ಗಾವಲಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸರ್ಕಾರ, ‘ಇದರಲ್ಲಿ ಸತ್ಯಾಂಶವಿಲ್ಲ, ನಿರಾಧಾರ’ ಎಂದು ಹೇಳಿಕೆ ನೀಡಿದೆ. 2019ರ ಅಕ್ಟೋಬರ್‌ನಲ್ಲಿ ಇದೇ ರೀತಿಯ ಸುದ್ದಿ ಬಿತ್ತರವಾಗಿತ್ತು. ಈಗಿನದ್ದು ಅದರ ಮುಂದುವರಿದ ಭಾಗದಂತೆ ಇದೆ. ಇದು ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳಿಗೆ ಕೆಡಕು ತರುವ ಯತ್ನವಾಗಿದೆ ಎಂದು ಸರ್ಕಾರ ದೂರಿದೆ.

ಸೋರಿಕೆಯಾದ ದತ್ತಾಂಶವನ್ನು ಪ್ಯಾರಿಸ್‌ ಮೂಲದ ಲಾಭೋದ್ಧೇಶವಿಲ್ಲದ ಮಾಧ್ಯಮ ಸಂಸ್ಥೆ ‘ಫಾರ್ಬಿಡೆನ್‌ ಸ್ಟೋರಿಸ್‌’, ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್‌’ ಸಂಸ್ಥೆಗಳು ದಿ ವೈರ್‌, ಲೆ ಮಾಂಡೆ, ದಿ ಗಾರ್ಡಿಯನ್‌, ವಾಷಿಂಗ್ಟನ್‌ ಪೋಸ್ಟ್‌, ಡೈ ಜೈಟ್‌, ಸೇರಿದಂತೆ 10 ಇತರ ಮೆಕ್ಸಿನ್‌, ಅರಬ್‌ ಮತ್ತು ಯುರೋಪಿನ ಸುದ್ದಿ ಸಂಸ್ಥೆಗಳೊಂದಿಗೆ ಹಂಚಿಕೊಂಡಿವೆ. ಈ ಸಂಸ್ಥೆಗಳು ಜಂಟಿಯಾಗಿ ಕೈಗೊಂಡಿರುವ ಈ ತನಿಖೆಗೆ ‘ಪೆಗಾಸಸ್‌ ಪ್ರಾಜೆಕ್ಟ್‌’ ಎಂದು ಕರೆಯಲಾಗಿದೆ.

ದಿ ವೈರ್ ವರದಿಯ ಪ್ರಕಾರ, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಎಂಟು ಕಾರ್ಯಕರ್ತರು, ವಕೀಲರು ಮತ್ತು ಶಿಕ್ಷಣ ತಜ್ಞರ ಮೊಬೈಲ್‌ಗಳು ಹ್ಯಾಕ್‌ ಆಗಿವೆ.

ಪತ್ರಕರ್ತರ ಪೈಕಿ ಸುಶಾಂತ್ ಸಿಂಗ್, ಜೆ. ಗೋಪಿಕೃಷ್ಣನ್‌, ಶಿಶಿರ್‌ ಗುಪ್ತಾ, ರಿತಿಕಾ ಚೋಪ್ರಾ, ಪ್ರಶಾಂತ್‌ ಝಾ, ಪ್ರೇಮ್‌ ಶಂಕರ್‌ ಝಾಂ, ಸ್ವಾತಿ ಚತುರ್ವೇದಿ, ರಾಹುಲ್‌ ಸಿಂಗ್‌, ಮುಜಮ್ಮಿಲ್‌ ಜಲೀಲ್‌, ಇಫ್ತಿಕಾರ್‌ ಗೀಲಾನಿ ಮತ್ತು ಸಂದೀಪ್‌ ಉನ್ನಿತಾನ್‌, ದಿ ವೈರ್‌ನ ಸಂಸ್ಥಾಪಕ–ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂ.ಕೆ.ವೇಣು ಅವರ ಹೆಸರುಗಳೂ ಈ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT