ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣಪತ್ರದ ತಪ್ಪು ಮಾಹಿತಿಗೆ 2 ವರ್ಷ ಸಜೆ: ಮುಖ್ಯ ಚುನಾವಣಾ ಆಯುಕ್ತರ ಪತ್ರ

ಚುನಾವಣಾ ಸುಧಾರಣೆ: ಕ್ರಮಕ್ಕೆ ಮನವಿ
Last Updated 8 ಜೂನ್ 2021, 21:04 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ಚುನಾವಣಾ ಸುಧಾರಣಾ ಪ್ರಸ್ತಾವ ಕುರಿತು ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

ಪ್ರಸ್ತಾವಗಳ ಬಗ್ಗೆ ಕಾನೂನು ಸಚಿವಾಲಯ ಶೀಘ್ರದಲ್ಲೇ ಕ್ರಮ ತೆಗದುಕೊಳ್ಳುವ ವಿಶ್ವಾಸವಿದೆ ಎಂದು ಚಂದ್ರ ಹೇಳಿದ್ದಾರೆ.

ಚುನಾವಣೆ ವೇಳೆ ಆಯೋಗಕ್ಕೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಯನ್ನು ಎರಡು ವರ್ಷ ಜೈಲಿಗೆ ಕಳಿಸುವ ವಿಚಾರವು ಪ್ರಸ್ತಾವನೆಗಳಲ್ಲಿಪ್ರಮುಖವಾದುದು. ಪ್ರಸ್ತುತ ಈ ಅಪರಾಧಕ್ಕೆ ಆರು ತಿಂಗಳು ಸಜೆ ಇದ್ದು, ಶಿಕ್ಷೆಯ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸುವ ಉದ್ದೇಶವಿದೆ. ಅಭ್ಯರ್ಥಿಯು ಎರಡು ವರ್ಷ ಜೈಲಿನಲ್ಲಿದ್ದರೆ, ಅವರು ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಈಗಿರುವ ಆರು ತಿಂಗಳ ಸೆರೆವಾಸದಿಂದ ಅಭ್ಯರ್ಥಿಯನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಲು ಆಗುವುದಿಲ್ಲ ಎಂದು ಚಂದ್ರ ತಿಳಿಸಿದ್ದಾರೆ.

‘ಕಾಸಿಗಾಗಿ ಸುದ್ದಿ’ಯನ್ನು ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿ ಚುನಾವಣಾ ಅಪರಾಧವನ್ನಾಗಿ ಪರಿಗಣಿಸಲು ಚುನಾವಣಾ ಆಯೋಗ ಪ್ರಸ್ತಾವ ಇರಿಸಿದೆ. ಚುನಾವಣಾ ಪ್ರಚಾರದ ಅಂತ್ಯದ ಸಮಯ ಮತ್ತು ಮತದಾನದ ದಿನದ ನಡುವಿನ ‘ಮೌನ ಅವಧಿಯಲ್ಲಿ’ ಪತ್ರಿಕೆಗಳಲ್ಲಿ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸಲು ಪ್ರಸ್ತಾವ ಇಟ್ಟಿದೆ. ಹೀಗೆ ಮಾಡುವುದರಿಂದ ಮತದಾರರು ಪ್ರಭಾವಿತರಾಗುವುದಿಲ್ಲ ಮತ್ತು ಮುಕ್ತ ಮನಸ್ಸಿನಿಂದ ತಮ್ಮ ಹಕ್ಕು ಚಲಾಯಿಸುತ್ತಾರೆ ಎಂಬುದು ಆಯೋಗದ ಅಭಿಮತ. ಇದನ್ನು ಜಾರಿಗೆ ತರಬೇಕಾದರೆ, ಪ್ರಜಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಬದಲಾವಣೆ ತರಬೇಕಿದೆ. ಚುನಾವಣಾ ಸುಧಾರಣೆ ಕುರಿತು ನೇಮಿಸಿದ್ದ ಸಮಿತಿಯು ಜಾಹೀರಾತು ನಿಷೇಧಿಸುವಂತೆ ಶಿಫಾರಸು ಮಾಡಿತ್ತು.

ಪ್ರಸ್ತುತ, ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಮತದಾನದ 48 ಗಂಟೆಗಳ ಮೊದಲು ಚುನಾವಣಾ ಪ್ರಚಾರ ಕುರಿತ ಸುದ್ದಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ. ಮುದ್ರಣ ಮಾಧ್ಯಮವನ್ನು ಕಾಯ್ದೆಯ ಸೆಕ್ಷನ್ 126ರ ವ್ಯಾಪ್ತಿಗೆ ತರಲು ಸಮಿತಿ ಶಿಫಾರಸು ಮಾಡಿತ್ತು.

ಆಧಾರ್ ಸಂಖ್ಯೆ ಜೋಡಣೆಗೆ ಮರುಜೀವ

ಸರ್ಕಾರದ ಮುಂದೆ ಬಾಕಿ ಇರುವ ಮತ್ತೊಂದು ಪ್ರಮುಖ ಪ್ರಸ್ತಾವ ಎಂದರೆ, ಮತದಾರರ ಪಟ್ಟಿಯನ್ನು ಆಧಾರ್ ಜೊತೆ ಬೆಸೆಯುವುದು. ಹೀಗೆ ಮಾಡುವುದರಿಂದ ಒಬ್ಬ ಮತದಾರ ವಿವಿಧ ಸ್ಥಳಗಳಲ್ಲಿ ಹಲವು ಗುರುತಿನ ಪತ್ರಗಳನ್ನು ಮಾಡಿಕೊಳ್ಳುವುದಕ್ಕೆ ಕಡಿವಾಣ ಬೀಳಲಿದೆ.

ಈ ಬಗ್ಗೆ ಇತ್ತೀಚೆಗೆ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದ ಸಚಿವ ರವಿಶಂಕರ್ ಪ್ರಸಾದ್, ಚುನಾವಣಾ ಆಯೋಗದ ಈ ಪ್ರಸ್ತಾವವು ಸರ್ಕಾರದ ಪರಿಶೀಲನೆಯಲ್ಲಿದ್ದು, ಇದಕ್ಕೆ ಚುನಾವಣಾ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕಿದೆ ಎಂದು ತಿಳಿಸಿದ್ದರು.

2019ರ ಆಗಸ್ಟ್‌ನಲ್ಲಿ ಕಳುಹಿಸಲಾದ ಪ್ರಸ್ತಾವನೆಯ ಪ್ರಕಾರ, ಮತದಾರರ ನೋಂದಣಿ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸುವವರು ಹಾಗೂ ಪ್ರಸ್ತುತ ಮತದಾರ ಆಗಿರುವವರ ಆಧಾರ್‌ ಸಂಖ್ಯೆಯನ್ನು ಪಡೆದುಕೊಳ್ಳಲು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅಧಿಕಾರ ನೀಡುವಂತೆ ಕಾನೂನಿನ ತಿದ್ದುಪಡಿ ಆಗಬೇಕಿದೆ.

ಆದರೆ, ಆಧಾರ್ ಸಂಖ್ಯೆಯನ್ನು ಚುನಾವಣಾ ದತ್ತಾಂಶದೊಂದಿಗೆ ಜೋಡಿಸುವ ಚುನಾವಣಾ ಆಯೋಗದ ಯೋಜನೆಗೆ 2015ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ಆಧಾರ್ ಕುರಿತು ನೀಡಿದ್ದ ಆದೇಶವು ತಡೆ ಒಡ್ಡಿತ್ತು. ಆಯೋಗವು ತನ್ನ ನ್ಯಾಷನಲ್ ಎಲೆಕ್ಟೋರಲ್ ರೋಲ್ ಪ್ಯೂರಿಫಿಕೇಷನ್ ಅಂಡ್ ಅಥೆಂಟಿಕೇಷನ್ ಪ್ರೋಗ್ರಾಂ (ಎನ್‌ಇಆರ್‌ಪಿಎಪಿ) ಭಾಗವಾಗಿ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುತ್ತಿತ್ತು.

ಮತದಾರರ ಪಟ್ಟಿಯಲ್ಲಿ ಸೇರಿರುವ ಒಬ್ಬರದೇ ಅನೇಕ ನಮೂದುಗಳನ್ನು ಪರಿಶೀಲಿಸಿ ಅದನ್ನು ಸರಿಪಡಿಸಲು ಮತ್ತು ಪಟ್ಟಿಯನ್ನು ದೋಷರಹಿತವಾಗಿಸಲು ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆಯೋಗ ಪ್ರಾರಂಭಿಸಿತ್ತು. ಆದರೆ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಕಾನೂನಿನ ಅನುಮತಿ ಅಗತ್ಯ ಎಂದು ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟಪಡಿಸಿದ್ದರಿಂದ, ಆಯೋಗವು ಚುನಾವಣಾ ಕಾನೂನಿನಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿದೆ ಎಂದು ಸಮಿತಿಯ ಸದಸ್ಯರೊಬ್ಬರು ಇತ್ತೀಚೆಗೆ ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT