ಗುಜರಾತ್ ಚುನಾವಣೆ: ಮೊದಲ ಬಾರಿಗೆ ಮತದಾನ ಮಾಡಲಿರುವ ‘ಆಫ್ರಿಕನ್ ವಿಲೇಜ್’ ಮತದಾರರು
ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಗುರುವಾರ (ಡಿ.1) ಮೊದಲ ಹಂತದ ಮತದಾನ ನಡೆಯಲಿದೆ. ಸೌರಾಷ್ಟ್ರ, ಕಛ್, ದಕ್ಷಿಣ ಭಾಗ ಒಳಗೊಂಡ 19 ಜಿಲ್ಲೆಗಳ 89 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 70 ಮಹಿಳೆಯರು ಸೇರಿ ಒಟ್ಟಾರೆ 788 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಗುಜರಾತ್‌ನ ಆಫ್ರಿಕನ್ ವಿಲೇಜ್ (ಆಫ್ರಿಕನ್ ಗ್ರಾಮ) ಎಂದು ಹೆಸರಾದ ಬುಡಕಟ್ಟು ಹಳ್ಳಿಯ ಜನರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ.
ಗುಜರಾತ್‌ನ ಜುನಾಗಡ್ ಜಿಲ್ಲೆಯ ಜಾಂಬೂರ್ ಎಂಬ ಹಳ್ಳಿ ಗುಜರಾತ್‌ನ ಆಫ್ರಿಕನ್ ವಿಲೇಜ್ ಎಂದು ಖ್ಯಾತಿಯಾಗಿದೆ. ಇಲ್ಲಿ ಕರ್ನಾಟಕದ ಸಿದ್ಧಿ ಜನಾಂಗವನ್ನು ಹೋಲುವಂತಹ ಆಫ್ರಿಕನ್ ಮೂಲದ ಬುಡಕಟ್ಟು ಸಮುದಾಯವಿದ್ದು, ಅವರಿಗೆ ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ನೀಡಲಾಗಿದೆ.
ಮತದಾನದ ಹಕ್ಕು ನೀಡಿರುವುದರಿಂದ ಜಾಂಬೂರ್ ಹಳ್ಳಿಗರು ಬುಧವಾರ ಇಡೀ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಒಂದು ರೀತಿ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ. ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
#Watch | People of Gujarat's mini African village- Jambur, celebrated their first opportunity to vote in their own special tribal booth (30.11)#GujaratElections pic.twitter.com/LFrG6q8ukT
— ANI (@ANI) December 1, 2022
ಏಳನೇ ಶತಮಾನದಲ್ಲಿ ಅರಬ್ ಮಾರ್ಗವಾಗಿ ಗುಜರಾತ್‌ಗೆ ಈ ಜನಾಂಗದವರು ಬಂದು ನೆಲೆಸಿದ್ದಾರೆ. ತಮ್ಮ ಸಮುದಾಯದಲ್ಲಿ ಮಾತ್ರ ವಿವಾಹವಾಗುವ ಇವರು, ಗುಜರಾತಿ ಭಾಷೆ, ಸಂಸ್ಕೃತಿಯಲ್ಲಿ ಬೆರೆತಿದ್ದಾರೆ.
14,382 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. 2017ರ ಚುನಾವಣೆಯಲ್ಲಿ ಈ 89 ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳನ್ನು ಆಡಳಿತಾರೂಢ ಬಿಜೆಪಿ ಗೆದ್ದುಕೊಂಡಿತ್ತು. 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.