ಮಂಗಳವಾರ, ಜೂನ್ 28, 2022
25 °C

ಕಾಂಗ್ರೆಸ್ಸನ್ನು ಬೆದರಿಸಲು ಗೋವಾ ಫಲಿತಾಂಶ ಬಳಸಿಕೊಂಡ ‘ಪಿಕೆ’: ಟಿಎಂಸಿ ಮಾಜಿ ನಾಯಕ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಪಣಜಿ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತಗಳನ್ನು ವಿಭಜಿಸುವ ಮೂಲಕ ಕಾಂಗ್ರೆಸ್ ಅನ್ನು ಬೆದರಿಸಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪ್ರಯತ್ನಿಸಿದ್ದರು ಎಂದು ತೃಣಮೂಲ ಕಾಂಗ್ರೆಸ್‌ನ ಗೋವಾ ಘಟಕದ ಮಾಜಿ ಅಧ್ಯಕ್ಷ ಕಿರಣ್‌ ಕಂಡೋಲ್ಕರ್‌ ಬುಧವಾರ ಅರೋಪಿಸಿದ್ದಾರೆ. 

‘ಗೋವಾದಲ್ಲಿ ಬಿಜೆಪಿ ಗೆಲ್ಲುವುದು ಕಿಶೋರ್ ಅವರ ಆಶಯವಾಗಿತ್ತು. ಆ ಮೂಲಕ ಕಾಂಗ್ರೆಸ್ ಅನ್ನು ಬೆದರಿಸಿ, ಅದರ ಜೊತೆಗಿನ ಭವಿಷ್ಯದ ತಮ್ಮ ಚರ್ಚೆಗಳ ಮೇಲೆ ಹತೋಟಿ ಸಾಧಿಸುವುದು ಅವರ ಮೂಲ ಉದ್ದೇಶವಾಗಿತ್ತು’ ಎಂದು ಕಿರಣ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಕಾಂಗ್ರೆಸ್‌ ಮತ್ತು ಅದರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲು ಬಯಸಿದ್ದ ಪ್ರಶಾಂತ್‌ ಕಿಶೋರ್‌, ಅದಕ್ಕಾಗಿಯೇ ಗೋವಾಕ್ಕೆ ಬಂದಿದ್ದರು. ನೀವು ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳದೇ ಹೋದರೆ, ಮತ ಹಂಚಿ ಹೋಗುತ್ತದೆ ಎಂದು ಭಯಪಡಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕೆ ಗೋವಾ ಉದಾಹರಣೆ ನೀಡಿದ್ದಾರೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಗೋವಾದಲ್ಲಿ ವಿರೋಧ ಪಕ್ಷಗಳು ಇಬ್ಭಾಗವಾದ ಕಾರಣ ಬಿಜೆಪಿ ಶೇ.33ರಷ್ಟು ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ’ ಎಂದು ಕಿರಣ್‌ ಹೇಳಿದರು. 

‘ಪ್ರಶಾಂತ್ ಕಿಶೋರ್ ಗೋವಾಕ್ಕೆ ಬಂದಿದ್ದು ಬಿಜೆಪಿ ಗೆಲುವನ್ನು ಖಚಿಪಡಿಸಿಕೊಳ್ಳಲೇ ಹೊರತು, ಅದನ್ನು ಸೋಲಿಸಲು ಅಲ್ಲ. ನಾವು ಅವರೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದರಿಂದ, ಗೋವಾದಲ್ಲಿ ನಡೆದು ಹೋಗಿದ್ದಕ್ಕೆ ನಾವೂ ಜವಾಬ್ದಾರರು’ ಎಂದು ಅವರು ಹೇಳಿದರು.

ಗೋವಾದಲ್ಲಿ ಉನ್ನತ ಮಟ್ಟದ ಪ್ರಚಾರ ನಡೆಸಿದ ಹೊರತಾಗಿಯೂ, ತೃಣಮೂಲ ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲಲೂ ಸಾಧ್ಯವಾಗಲಿಲ್ಲ. ಈ ಸೋಲಿಗೆ ಪ್ರಶಾಂತ್‌ ಕಿಶೋರ್‌ ಅವರ ಐ–ಪ್ಯಾಕ್‌ ಕಾರಣ ಎಂದೂ ಕಿರಣ್‌ ಕಂಡೋಲ್ಕರ್‌ ಆರೋಪಿಸಿದ್ದಾರೆ.   

‘ಐ-ಪ್ಯಾಕ್‌ ಮತ್ತು ಪ್ರಶಾಂತ್ ಕಿಶೋರ್ ದೇಶದ ಉಳಿದ ಭಾಗಗಳಲ್ಲಿ ಯಾವುದೇ ತಂತ್ರ ರೂಪಿಸಬಹುದು. ಆದರೆ, ಗೋವಾದಲ್ಲಿ ಅವರು ರಾಜಕೀಯ ತಂತ್ರಗಾರಿಕೆ ಶೂನ್ಯವಾಗಿತ್ತು. ನಾವು ಅದಕ್ಕೆ ತತ್ತರಿಸಿದ್ದೆವೆ. ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡುವ ಮುನ್ನ ನಾನು ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾಗಿದ್ದೆ. ಅವರು ಗೋವಾದ ಬಗ್ಗೆ ರಾಜಕೀಯ ಭರವಸೆ ನೀಡಿದಾಗ ನನಗೂ ತಬ್ಬಿಬ್ಬಾಗಿತ್ತು’ ಎಂದು ಕಂಡೋಲ್ಕರ್ ಹೇಳಿದ್ದಾರೆ.

‘ಚುನಾವಣೆ ಸೋಲಿನಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್‌ ನಾಯಕತ್ವದ ತಪ್ಪು ಇಲ್ಲ. ಟಿಎಂಸಿಯು ಗೋವಾದ ಸಂಪೂರ್ಣ ಜವಾಬ್ದಾರಿಯನ್ನು ಐ-ಪ್ಯಾಕ್‌ಗೆ ವಹಿಸಿತ್ತು. ಇಲ್ಲಿ ಪ್ರಶಾಂತ್ ಕಿಶೋರ್ ಅವರೇ ಬಾಸ್‌ ಆಗಿದ್ದರು. ಹೀಗಾಗಿ ಚುನಾವಣೆ ಸೋಲು ತೃಣಮೂಲ ಕಾಂಗ್ರೆಸ್‌ನ ವೈಫಲ್ಯವಲ್ಲ, ಅಭ್ಯರ್ಥಿಗಳಾಗಿ ನಮ್ಮದೂ ಅಲ್ಲ. ಬದಲಿಗೆ ಅದು ಐ–ಪ್ಯಾಕ್‌ನ ವೈಫಲ್ಯ’ ಎಂದು ಅವರು ದೂರಿದರು. 

ಗೋವಾ ವಿಧಾನಸಭೆ ಚುನಾವಣೆ ಸೋಲಿನ ನಂತರ ತೃಣಮೂಲ ಕಾಂಗ್ರೆಸ್‌ನ ಮನೆ ಬರಿದಾಗಿದ್ದು, ಹಲವು ನಾಯಕರು ರಾಜೀನಾಮೆ ನೀಡಿ ಹೋರ ಹೋಗಿದ್ದಾರೆ. 

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು