ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಚಿಕಿತ್ಸೆಯಲ್ಲಿ ‘ಪ್ಲಾಸ್ಮಾ ಥೆರಪಿ’ಯಿಂದ ಲಾಭವಿಲ್ಲ: ಐಸಿಎಂಆರ್

ಕೋವಿಡ್‌–19: ಸಾವಿನ ಪ್ರಮಾಣ ತಗ್ಗಿಲ್ಲ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಧ್ಯಯನ ವರದಿ
Last Updated 9 ಸೆಪ್ಟೆಂಬರ್ 2020, 16:48 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕು ಪ್ರಕರಣಗಳಲ್ಲಿ ಸಾವಿನ ಪ್ರಮಾಣ ತಗ್ಗಿಸುವಲ್ಲಿ ‘ಪ್ಲಾಸ್ಮಾ ಥೆರಪಿ’ ಅಷ್ಟೊಂದು ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಅಲ್ಲ ಎಂದುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಅಭಿಪ್ರಾಯಪಟ್ಟಿದೆ.

ಪ್ಲಾಸ್ಮಾ ಬಳಕೆಯಿಂದ ಕೋವಿಡ್‌ ಗಂಭೀರ ಪ್ರಕರಣಗಳಲ್ಲಿ ಚೇತರಿಕೆಯೂ ಕಂಡುಬಂದಿಲ್ಲ ಎಂದು ಐಸಿಎಂಆರ್‌ ಕೈಗೊಂಡ ಅಧ್ಯಯನ ವರದಿ ಹೇಳಿದೆ.

ಕೊರೊನಾ ಸೋಂಕಿತರಲ್ಲಿ ಪ್ಲಾಸ್ಮಾ ಥೆರಪಿ ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಐಸಿಎಂಆರ್ ‘ಪ್ಲಾಸಿಡ್‌ ಟ್ರಯಲ್‌’ ಮಾದರಿಯ ಅಧ್ಯಯನ ಕೈಗೊಂಡಿತ್ತು.

ಐಸಿಎಂಆರ್ ಅಧ್ಯಯನದಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲವಾದರೂ, ಅದು ನೇಮಕ ಮಾಡಿದ ತಜ್ಞರ ತಂಡಸ್ವತಂತ್ರವಾಗಿ ಅಧ್ಯಯನ ಕೈಗೊಂಡಿತ್ತು. ಐಸಿಎಂಆರ್‌ ನಿಯೋಜಿಸಿದ ಕೋವಿಡ್‌–19 ರಾಷ್ಟ್ರೀಯ ಕಾರ್ಯಪಡೆಯು ಅಧ್ಯಯನ ವರದಿಗೆ ಅನುಮೋದನೆ ನೀಡಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ‘ಪ್ಲಾಸ್ಮಾ ಥೆರಪಿ’ ಬಳಸಲು ಕೇಂದ್ರ ಆರೋಗ್ಯ ಸಚಿವಾಲಯ ಜೂನ್‌ 27ರಂದು ಒಪ್ಪಿಗೆ ನೀಡಿತ್ತು. ಇದಾದ ನಂತರ ದೇಶದಲ್ಲಿ ಹೆಚ್ಚಿನ ಬೆಲೆಗೆ ಪ್ಲಾಸ್ಮಾ ಮಾರಾಟದ ಕಾಳದಂಧೆ ಆರಂಭ ವಾಗಿದೆ ಎಂದು ವರದಿಆತಂಕ ವ್ಯಕ್ತಪಡಿಸಿದೆ. ಪ್ಲಾಸ್ಮಾ ಥೆರಪಿಯಿಂದ ಮರಣ ಪ್ರಮಾಣ ಕಡಿಮೆಯಾಗದಿದ್ದರೂ ಇದೊಂದು ಸುರಕ್ಷಿತ ಚಿಕಿತ್ಸಾ ವಿಧಾನ ವಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಆದರೆ, ಪ್ಲಾಸ್ಮಾ ಗುಣಮಟ್ಟ ಪರಿಶೀಲನೆ, ಸಂಗ್ರಹ ವ್ಯವಸ್ಥೆ, ಸುರಕ್ಷಿತ ಪ್ಲಾಸ್ಮಾ ದಾನ ಸೌಲಭ್ಯ ಹೊಂದಿರುವ ಸಂಸ್ಥೆಗಳ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇಲ್ಲ ಎಂದು ಹೇಳಿದೆ.

ಪ್ಲಾಸ್ಮಾ ಥೆರಪಿ ಹೊಸದಲ್ಲ!

ಪ್ಲಾಸ್ಮಾ ಥೆರಪಿ ಹೊಸದಲ್ಲ. ವೈರಾಣುಜನ್ಯ ರೋಗಗಳನ್ನು ನಿಯಂತ್ರಿಸಲು ಶತಮಾನಗಳಿಂದ ಹಲವಾರು ರಾಷ್ಟ್ರಗಳಲ್ಲಿ ಈ ಪದ್ಧತಿ ಬಳಕೆಯಲ್ಲಿದೆ.

ಕೊರೊನಾ ಸೋಂಕಿತರಿಗೂ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಹಲವಾರು ರಾಷ್ಟ್ರಗಳು ಈಗಾಗಲೇ ಅನುಮತಿ ನೀಡಿವೆ.

ಈವರೆಗೆ ಎರಡು ವರದಿ ಮಾತ್ರ ಪ್ರಕಟ

ಕೋವಿಡ್‌–19 ಸೋಂಕಿತರಲ್ಲಿ ಪ್ಲಾಸ್ಮಾ ಥೆರಪಿಯ ಪರಿಣಾಮ ಕುರಿತು ಇಲ್ಲಿಯವರೆಗೆ ಎರಡು ಅಧ್ಯಯನ ವರದಿಗಳು ಮಾತ್ರ ಪ್ರಕಟವಾಗಿವೆ. ಚೀನಾ ಮತ್ತು ನೆದರ್ಲೆಂಡ್ಸ್‌ ತಲಾ ಒಂದು ಅಧ್ಯಯನ ವರದಿ ಪ್ರಕಟಿಸಿವೆ.

ಅಧ್ಯಯನದಲ್ಲಿ ಪಾಲ್ಗೊಳ್ಳಲು ಸೋಂಕಿತರ ನಿರಾಸಕ್ತಿ ಮತ್ತು ಅಧ್ಯಯನ ಸ್ವರೂಪದ ಮರುವಿನ್ಯಾಸದ ಕಾರಣ ಈ ಎರಡೂ ವರದಿಗಳು ಪರಿಣಾಮಕಾರಿ ಫಲಿತಾಂಶ ಕಂಡುಕೊಳ್ಳುವಲ್ಲಿ ವಿಫಲವಾಗಿವೆ.

‘ಪ್ಲಾಸಿಡ್‌ ಟ್ರಯಲ್‌’ ಅಧ್ಯಯನದ ಮಾದರಿ

39:ಅಧ್ಯಯನ ನಡೆದ ದೇಶದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಂಖ್ಯೆ

ಏ.22– ಜುಲೈ 14: ಅಧ್ಯಯನ ನಡೆದ ಅವಧಿ

464: ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದ ಸೋಂಕಿತರು

235: ಪ್ಲಾಸ್ಮಾ ಥೆರಪಿಗೆ ಪಡೆದ ಸೋಂಕಿತರು

229:ಸಾಮಾನ್ಯ ಚಿಕಿತ್ಸೆಗೆ ಒಳಗಾದವರು

***

ಪ್ಲಾಸ್ಮಾ ಚಿಕಿತ್ಸೆ ನೀಡಿದ ಹೊರತಾಗಿಯೂ 28 ದಿನಗಳ ಅವಧಿಯಲ್ಲಿ ಸೋಂಕಿತರ ಚೇತರಿಕೆ ಮತ್ತು ಮರಣ ಪ್ರಮಾಣದಲ್ಲಿ ಯಾವುದೇ ಪ್ರಗತಿ ಕಂಡು ಬರಲಿಲ್ಲ
–ಐಸಿಎಂಆರ್ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT