ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಸ್ಥಳಗಳ ಸ್ವರೂಪ: 1991 ಕಾಯ್ದೆ ಮಾನ್ಯತೆ ಪ್ರಶ್ನಿಸಿ ಸುಪ್ರೀಂಗೆ ಪಿಐಎಲ್‌

Last Updated 31 ಅಕ್ಟೋಬರ್ 2020, 15:11 IST
ಅಕ್ಷರ ಗಾತ್ರ

ನವದೆಹಲಿ: ಧಾರ್ಮಿಕ ಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳಲು 1947ರ ಆಗಸ್ಟ್‌ 15ರ ದಿನಾಂಕವನ್ನು ನಿಗದಿ ಮಾಡಿರುವ 1991ರ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

‘ಮೂಲಭೂತವಾದಿ, ಅನಾಗರಿಕ ದಾಳಿಕೋರರು ಮತ್ತು ಕಾನೂನುಭಂಜಕರು ಅತಿಕ್ರಮಣ ಮಾಡಿದ ಧಾರ್ಮಿಕ ಸ್ಥಳಗಳು ಮತ್ತು ತೀರ್ಥಯಾತ್ರೆ ಸ್ಥಳಗಳ ಸ್ವರೂಪವನ್ನು ಉಳಿಸಿಕೊಳ್ಳಲು ನಿಗದಿ ಮಾಡಲಾದ ದಿನಾಂಕವು ಸ್ವೇಚ್ಛೆಯಿಂದ ಕೂಡಿದ್ದು ಮತ್ತು ಅತಾರ್ಕಿಕವಾದುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಈ ಅರ್ಜಿ ಸಲ್ಲಿಸಿದ್ದಾರೆ.ಹಿಂದೂ, ಜೈನ, ಬೌದ್ಧ ಹಾಗೂ ಸಿಖ್‌ ಧಾರ್ಮಿಕ ಸ್ಥಳಗಳಲ್ಲಿ ಆಗಿರುವ ಅತಿಕ್ರಮಣವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ದೂರು ನೀಡುವಂತಿಲ್ಲ ಹಾಗೂ ಹೈಕೋರ್ಟ್‌ಗೆ ಹೋಗುವಂತಿಲ್ಲ. ಇದಕ್ಕಿರುವ ಪರಿಹಾರೋಪಾಯಕ್ಕೆ ಕೇಂದ್ರ ಸರ್ಕಾರವು ನಿರ್ಬಂಧ ಹೇರಿದೆ ಎಂದು ಅರ್ಜಿಯಲ್ಲಿ ಅವರು ವಾದಿಸಿದ್ದಾರೆ.

ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991ರಲ್ಲಿನ ನಿಬಂಧನೆಗಳು ಸಮಾನತೆಯ ಮೂಲಭೂತ ಹಕ್ಕು, ಧರ್ಮವನ್ನು ಆಚರಿಸುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುವ ಕಾರಣ, ಇದನ್ನು ಸಂವಿಧಾನ ಬಾಹಿರ ಹಾಗೂ ಅನೂರ್ಜಿತ ಎಂದು ನ್ಯಾಯಾಲಯ ಘೋಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

‘ಶ್ರಿಕೃಷ್ಣನ ಜನ್ಮಸ್ಥಳವು ತಮಗೆ ದೊರೆಯಬೇಕು ಎಂದು ಹಿಂದೂಗಳು ನೂರಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಕಾಯ್ದೆ ರೂಪಿಸುವ ವೇಳೆಯಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ವಿವಾದವನ್ನು ಮಾತ್ರ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ರಾಮ ಮತ್ತು ಕೃಷ್ಣ ವಿಷ್ಣುವಿನ ಅವತಾರವೇ ಆಗಿದ್ದರೂ ಕೃಷ್ಣ ಜನ್ಮಸ್ಥಳವನ್ನು ಸೇರಿಸಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

2019ರ ನ.9ರಂದು ಸುಪ್ರೀಂ ಕೋರ್ಟ್‌ ಅಯೋಧ್ಯೆ ಪ್ರಕರಣದಲ್ಲಿ ಆ ತೀರ್ಪು ನೀಡದೇ ಹೋಗಿದ್ದರೆ, ರಾಮಮಂದಿರ ಧ್ವಂಸಗೊಂಡ 500 ವರ್ಷಗಳ ಬಳಿಕವೂ ಹಿಂದೂಗಳಿಗೆ ನ್ಯಾಯ ದೊರೆಯುತ್ತಿರಲಿಲ್ಲ. ಧಾರ್ಮಿಕ ಸ್ಥಳಗಳಲ್ಲಿನ ಅತಿಕ್ರಮಣವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಅಥವಾ ನ್ಯಾಯಾಂಗ ವ್ಯವಸ್ಥೆಯ ಮೂಲಕ ಪರಿಹಾರ ಪಡೆಯುವುದನ್ನು ತಡೆಯುವುದಕ್ಕೆ ಕೇಂದ್ರಕ್ಕೆ ಯಾವ ಅಧಿಕಾರವೂ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಶಿ–ಮಥುರಾ ಮಂದಿರಗಳು ಹಿಂದೂಗಳಿಗೆ ನೀಡಬೇಕು ಎಂಬುದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ಬೇಡಿಕೆಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಅರ್ಜಿ ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT