ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಕೋವಿಡ್ ಲಸಿಕೆ ವಿರುದ್ಧ ಟೀಕೆ: ಎಫ್‌ಐಆರ್ ಕೈಬಿಡಲು ‘ಸುಪ್ರೀಂ’ಗೆ ಮನವಿ

Last Updated 17 ಮೇ 2021, 13:46 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ವಿರುದ್ಧ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿದ್ದವರ ವಿರುದ್ಧ ಹಾಕಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಪ್ರದೀಪ್ ಕುಮಾರ್ ಯಾದವ್ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಕೋವಿಡ್‌–19 ಪೋಸ್ಟರ್‌ಗಳು, ಜಾಹೀರಾತು, ಕರಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳಲ್ಲೂ ಎಫ್‌ಐಆರ್ ದಾಖಲಿಸದಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದೂ ಅರ್ಜಿಯಲ್ಲಿ ಕೋರಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್‌ಗೆ ಸಂಬಂಧಿಸಿದಂತೆ ಮಾಡಲಾದ ಪೋಸ್ಟ್‌ಗಳಿಗೆ ಸಂಬಂಧಿಸಿ ದೆಹಲಿಯಲ್ಲೇ 25 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸಲಾಗಿದೆ. ಈ ಕುರಿತು ದೆಹಲಿ ಪೊಲೀಸ್ ಆಯುಕ್ತರಿಂದ ಎಫ್‌ಐಆರ್ ದಾಖಲೆಗಳನ್ನು ಕೇಳಬೇಕೆಂದು ಯಾದವ್ ನ್ಯಾಯಾಲಯಕ್ಕೆ ಕೋರಿದ್ದಾರೆ.

‘ಭಾಷಣ ಮತ್ತು ಕರಪತ್ರಗಳ ಮೂಲಕ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಿರುವ ಜನಸಾಮಾನ್ಯರ ಅಭಿಪ್ರಾಯಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದರಲ್ಲಿ ಮುಗ್ಧ ಸಾರ್ವಜನಿಕರ ಅಕ್ರಮ ಬಂಧನವಾಗುತ್ತಿದ್ದು, ಈ ವಿಷಯದಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕು’ ಎಂದೂ ಯಾದವ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

‘ಈ ನ್ಯಾಯಾಲಯವು ತನ್ನ ಅನೇಕ ಪ್ರಕರಣಗಳಲ್ಲಿ, ಸಾರ್ವಜನಿಕ ಉದ್ದೇಶಕ್ಕೆ ಸಂಬಂಧಿಸಿದಂತೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಹೇಳಿದೆ’ ಎಂದಿರುವ ಯಾದವ್ ಅವರು, 2015ರ ಶ್ರೇಯಾ ಸಿಂಘಾಲ್ ಪ್ರಕರಣದ ತೀರ್ಪನ್ನೂ ಉಲ್ಲೇಖಿಸಿದ್ದಾರೆ.

‘ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣದ ಇತ್ತೀಚಿನ ಆದೇಶದಲ್ಲಿ ನ್ಯಾಯಾಲಯವು, ಸಾಮಾಜಿಕ ಮಾಧ್ಯಮಗಳಲ್ಲಿ ವೈದ್ಯಕೀಯ ಸಹಾಯ ಕೋರಿ ಮನವಿ ಮಾಡುವ ಸಾರ್ವಜನಿಕರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸದಂತೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದೂ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT