ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಕರ್ತವ್ಯಲೋಪದಿಂದ ನ್ಯಾಯದಾನ ವಿಳಂಬ: ಸಿಜೆಐ ರಮಣ

ಭಾರಿ ಸಂಖ್ಯೆಯಲ್ಲಿ ಪ್ರಕರಣ ಬಾಕಿಗೆ ಕಾರಣ ವಿಶ್ಲೇಷಿಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಮಣ
Last Updated 30 ಏಪ್ರಿಲ್ 2022, 19:44 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):‘ಅಧಿಕಾರಿಗಳು ಪೂರ್ಣಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸದ ಕಾರಣ, ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಪಡಿತರ ಚೀಟಿ ವಿತರಣೆಯಂತಹ ಕೆಲಸ ಗಳನ್ನು ತಹಶೀಲ್ದಾರ್ ಸೂಕ್ತವಾಗಿ ನಿಭಾಯಿ ಸಿದ್ದರೆ, ರೈತ ಕೋರ್ಟ್‌ ಮೆಟ್ಟಿಲೇರುತ್ತಿ ರಲಿಲ್ಲ. ಕಂದಾಯ ಅಧಿಕಾರಿಗಳು ಕಾನೂನಿನ ಪ್ರಕಾರ ಭೂಸ್ವಾಧೀನ ಪ್ರಕ್ರಿಯೆ ನಡೆಸದ ಕಾರಣ, ಕೋರ್ಟ್‌ಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಸಮಾವೇಶ ಉದ್ದೇಶಿಸಿ ಅವರು ಶನಿವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶವನ್ನು ಉದ್ಘಾಟಿಸಿದರು.

‘ನೀತಿ ರೂಪಿಸುವುದು ನ್ಯಾಯಾಂಗದ ಪರಿಧಿಯಲ್ಲಿಲ್ಲ. ಸರ್ಕಾರದ ಈ ಕೆಲಸದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ಆದರೆ ನ್ಯಾಯದ ನಿರೀಕ್ಷೆಯಿಂದ ಕೋರ್ಟ್‌ಗೆ ಎಡತಾಕುವ ಜನರಿಗೆ ನಾವು ಆಗುವುದಿಲ್ಲ ಎಂದು ಹೇಳಲು ಬರುವುದಿಲ್ಲ’ ಎಂದು ಅವರು ಹೇಳಿದರು.

‘ನ್ಯಾಯದಾನದಲ್ಲಿ ಭಾರತೀಕರಣ ವನ್ನು ನಾನು ಪ್ರಬಲವಾಗಿ ಪ್ರತಿಪಾದಿಸುತ್ತೇನೆ. ಎಲ್ಲರಿಗೂ ನ್ಯಾಯಾಂಗದಸವಲತ್ತು ಸಿಗಬೇಕಾ ದರೆ, ಭಾರತೀಯ ನಾಗರಿಕರ ಅಗತ್ಯ ಗಳಿಗೆ ತಕ್ಕಂತೆ ನ್ಯಾಯದಾನ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಭಾರತೀಕರಣ ಎನಿಸಿಕೊಳ್ಳುತ್ತದೆ. ಭಾಷೆಗಳ ಬೇಲಿಯನ್ನು ದಾಟುವುದು, ಎಲ್ಲರನ್ನೂ ಒಳಗೊಳ್ಳುವುದು, ಪ್ರಕ್ರಿಯೆಯಲ್ಲಿ ಸುಧಾರಣೆ ತರುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲಾದ ವಿಚಾರಗಳನ್ನು ಇದು ಒಳಗೊಂಡಿದೆ’ ಎಂದು ವಿವರಿಸಿದ್ದಾರೆ.

ಮಾನವೀಯ ಸ್ಪರ್ಶಕ್ಕೆ ಕರೆ: ವಿಚಾರಣಾಧೀನ ಕೈದಿಗಳ
ಬಿಡುಗಡೆಗೆಮಾನವೀಯತೆಯ ಆಧಾರದಲ್ಲಿ ಆದ್ಯತೆ ನೀಡುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹೈಕೋರ್ಟ್‌ಗಳ ಮುಖ್ಯ ನ್ಯಾಯ
ಮೂರ್ತಿಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದರು.‘ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳ ಪ್ರಕರ ಣಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿ ಕೊಂಡು, ಅವರನ್ನು ಬಿಡುಗಡೆ ಮಾಡ ಬೇಕು. ನ್ಯಾಯಾಂಗ ಸುಧಾರಣೆ ಎಂದರೆ ಕೇವಲ ನೀತಿ ನಿರೂಪಣೆಗಷ್ಟೇ ಸಂಬಂಧಿಸಿರುವುದಲ್ಲ’ ಎಂದರು.

‘ನ್ಯಾಯಮೂರ್ತಿಗಳ ಭರ್ತಿಗೆ ಕಾಲಮಿತಿ’

ನವದೆಹಲಿ: ಮಂಜೂರಾಗಿರುವ ನ್ಯಾಯಮೂರ್ತಿಗಳ ಹುದ್ದೆಗಳ ಶೀಘ್ರ ಭರ್ತಿಗೆ ಕೇಂದ್ರ ಸೂಚಿಸಿದೆ. ಈ ಸಂಬಂಧ ಕಾಲಮಿತಿಯನ್ನೂ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಇಲ್ಲಿ ನಡೆದ ಮುಖ್ಯಮಂತ್ರಿಯವರು ಮತ್ತು ಮುಖ್ಯ ನ್ಯಾಯಮೂರ್ತಿಯವರ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನ್ಯಾಯಮೂರ್ತಿಯವರ ಹುದ್ದೆ ಖಾಲಿಯಾದ 6 ತಿಂಗಳೊಳಗೆ ಭರ್ತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸಮ್ಮೇಳನದಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ. ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಇಂತಿಷ್ಟು ದಿನ ಎಂಬಂತೆ ಕಾಲಮಿತಿ ನಿಗದಿ ಮಾಡಲಾಗಿದೆ. ನ್ಯಾಯಾಂಗ ಇಲಾಖೆಯಲ್ಲಿನ ಕೆಳಹಂತದ ಅಧಿಕಾರಿಗಳ ಹುದ್ದೆ ಭರ್ತಿಗೂ ಕ್ರಮ ಕೈಗೊಳ್ಳು ವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಮೂಲಸೌಕರ್ಯ, ಖಾಲಿ ಹುದ್ದೆ: ಸಿಜೆಐ ಪ್ರಸ್ತಾವ

*ಜನರಿಗೆ ಅನುಕೂಲ ಕಲ್ಪಿಸುವ ನ್ಯಾಯಾಂಗ ಮೂಲಸೌಕರ್ಯಗಳನ್ನು ತುರ್ತಾಗಿ ಒದಗಿಸಬೇಕು

*ದೇಶದ ಕೆಳಹಂತದ ನ್ಯಾಯಾಲಯಗಳಲ್ಲಿ 4 ಕೋಟಿ ಬಾಕಿ ಪ್ರಕರಣ ಇವೆ. ನ್ಯಾಯಾಧೀಶರ ಕೊರತೆ ತೀವ್ರವಾಗಿದೆ. 10 ಲಕ್ಷ ಜನಸಂಖ್ಯೆಗೆ 20 ನ್ಯಾಯಾಧೀಶರು ಮಾತ್ರ ಇದ್ದಾರೆ. ತೀವ್ರವಾಗಿ ಏರಿಕೆಯಾಗುತ್ತಿರುವ ವ್ಯಾಜ್ಯಗಳನ್ನು ನಿಭಾಯಿಸಲು ಈ ಸಂಖ್ಯೆ ಏನೇನೂ ಸಾಲದು

*ಕೆಳಹಂತದ ನ್ಯಾಯಾಲಯಗಳಲ್ಲಿ ಮಂಜೂರಾದ 24 ಸಾವಿರ ಹುದ್ದೆಗಳಲ್ಲಿ ಹಲವು ಭರ್ತಿಯಾಗದೇ ಬಾಕಿ ಉಳಿದಿವೆ

*ಹೈಕೋರ್ಟ್‌ಗಳ 1,104 ಮಂಜೂರಾದ ಹುದ್ದೆಗಳಲ್ಲಿ 388 ಖಾಲಿಯಿವೆ. ಶಿಫಾರಸು ಮಾಡಲಾದ 180ರ ಪೈಕಿ 126 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ

*2016ರಲ್ಲಿ 20,811 ಮಂಜೂರಾದ ಹುದ್ದೆಗಳಿದ್ದವು. ಈ ಆರು ವರ್ಷಗಳಲ್ಲಿ ಇವು ಶೇ 16ರಷ್ಟು ಹೆಚ್ಚಳದೊಂದಿಗೆ 24,112 ಆಗಿವೆ

*ಇದೇ ಅವಧಿಯಲ್ಲಿ ಜಿಲ್ಲಾ ಕೋರ್ಟ್‌ಗಳಲ್ಲಿದ್ದ ಬಾಕಿ ಪ್ರಕರಣಗಳು 2.65 ಕೋಟಿಯಿಂದ 4.11 ಕೋಟಿಗೆ ಏರಿಕೆಯಾಗಿದೆ

*ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಬಾಕಿ ಉಳಿದಿರುವುದಕ್ಕೆ ನ್ಯಾಯಾಂಗವನ್ನು ದೂಷಿಸಲಾಗುತ್ತದೆ. ಆದರೆ ನ್ಯಾಯಮೂರ್ತಿಗಳ ಮೇಲೆ ಮೇಲೆ ಕೆಲಸದ ಭಾರಿ ಒತ್ತಡವಿದೆ

*ಕೋರ್ಟ್ ಆದೇಶಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ತೋರುವ ಉದ್ದೇಶಪೂರ್ವಕ ನಿಷ್ಕ್ರಿಯತೆಯು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT