ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರಿಹಾರ ನಿಧಿ ಹಣವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸಬೇಕಿಲ್ಲ: ಸುಪ್ರೀಂ

Last Updated 18 ಆಗಸ್ಟ್ 2020, 21:00 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪಿಡುಗಿನ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಆರಂಭಿಸಲಾಗಿರುವ ಪಿಎಂ–ಕೇರ್ಸ್‌ ನಿಧಿಯಲ್ಲಿರುವ ಮೊತ್ತವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್‌ಡಿಆರ್‌ಎಫ್‌) ವರ್ಗಾಯಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಪಿಎಂ–ಕೇರ್ಸ್‌ನಿಂದ ಎನ್‌ಡಿಆರ್‌ಎಫ್‌ಗೆ ಸ್ವಯಂಪ್ರೇರಿತ ದೇಣಿಗೆಗೆ ಅವಕಾಶ ಇದೆ. ಇಂತಹ ದೇಣಿಗೆಗೆ ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಯಾವುದೇ ನಿಷೇಧ ಇಲ್ಲ ಎಂದೂ ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ನೇತೃತ್ವದ ಪೀಠವು ತಿಳಿಸಿದೆ.

ಪಿಎಂ–ಕೇರ್ಸ್‌ ನಿಧಿಯಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಎನ್‌ಡಿಆರ್‌ಎಫ್‌ಗೆ ವರ್ಗಾಯಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ‘ಸೆಂಟರ್‌ ಫಾರ್‌ ಪಬ್ಲಿಕ್ ಇಂಟರೆಸ್ಟ್‌ ಲಿಟಿಗೇಷನ್‌’ ಎಂಬ ಎನ್‌ಜಿಒ ಪರವಾಗಿ ವಕೀಲ ಪ್ರಶಾಂತ್‌ ಭೂಷಣ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕೋವಿಡ್‌ ಪಿಡುಗು ನಿರ್ವಹಣೆಗೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರ ಮಟ್ಟದ ಪ್ರತ್ಯೇಕ ಯೋಜನೆ ರೂಪಿಸಿ, ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಯಲ್ಲಿ ವಿನಂತಿಸಲಾಗಿತ್ತು. ಆದರೆ, ಈ ವಿನಂತಿಯನ್ನೂ ಪೀಠವು ತಳ್ಳಿ ಹಾಕಿದೆ.

ಪಿಎಂ ಕೇರ್ಸ್‌ ನಿಧಿಯು ವಿಕೋಪ ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತದೆ. ಎನ್‌ಡಿಆರ್‌ಎಫ್‌ನ ಲೆಕ್ಕ ಪರಿಶೋಧನೆಯನ್ನು ಮಹಾಲೇಖಪಾಲರು (ಸಿಎಜಿ) ನಡೆಸುತ್ತಾರೆ. ಆದರೆ, ಪಿಎಂ–ಕೇರ್ಸ್‌ ಲೆಕ್ಕಪರಿಶೋಧನೆಯು ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಎನ್‌ಜಿಒ ಪರವಾಗಿ ವಾದಿಸಿದ್ದ ದುಷ್ಯಂತ್‌ ದವೆ ಹೇಳಿದ್ದರು.

ಪಿಎಂ ಕೇರ್ಸ್‌ಗೆ ದೇಣಿಗೆಯಾಗಿ ಬಂದ ಕೋಟ್ಯಂತರ ರೂಪಾಯಿಯನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸುತ್ತಿಲ್ಲ ಎಂದೂ ಅರ್ಜಿಯಲ್ಲಿ ಹೇಳಲಾಗಿತ್ತು.

ಪಿಎಂ–ಕೇರ್ಸ್‌ ಟ್ರಸ್ಟ್‌ಗೆಪ್ರಧಾನಿ ಪದನಿಮಿತ್ತ ಅಧ್ಯಕ್ಷರಾದರೆ, ರಕ್ಷಣೆ, ಗೃಹ ಮತ್ತು ಹಣಕಾಸು ಸಚಿವರು ಪದನಿಮಿತ್ತ ಟ್ರಸ್ಟಿಗಳು.

ಲೆಕ್ಕ ಪರಿಶೋಧನೆ ಯಾಕಿಲ್ಲ?
2005ರಲ್ಲಿ ಹೊರಡಿಸಲಾದ ಮಾರ್ಗಸೂಚಿಯ ಪ್ರಕಾರ, ಎನ್‌ಡಿಆರ್‌ಎಫ್‌ ಲೆಕ್ಕಪತ್ರಗಳನ್ನು ಮಹಾಲೇಖಪಾಲರು ಪರಿಶೋಧನೆಗೆ ಒಳಪಡಿಸಬೇಕು. ಪಿಎಂ–ಕೇರ್ಸ್‌, ಸೇವಾಸಂಸ್ಥೆಯಾಗಿ ನೋಂದಾಯಿತವಾಗಿದೆ. ಹೀಗೆ ನೋಂದಣಿ ಆಗಿರುವ ಸಂಸ್ಥೆಯ ಲೆಕ್ಕಪತ್ರವನ್ನು ಸಿಎಜಿಯಿಂದ ಪರಿಶೀಲನೆಗೆ ಒಳಪಡಿಸಲು ಅವಕಾಶ ಇಲ್ಲ.

ಪಾರದರ್ಶಕತೆಗೆ ಹೊಡೆತ: ಕಾಂಗ್ರೆಸ್‌
‘ಸರ್ಕಾರವು ಜನರಿಗೆ ತೋರಬೇಕಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಸುಪ್ರೀಂ ಕೋರ್ಟ್‌ನ ಆದೇಶವು ಬಹುದೊಡ್ಡ ಹೊಡೆತ ಕೊಟ್ಟಿದೆ. ಆಡಳಿತ ನಡೆಸುವವರು ಮತದಾರರಿಗೆ ತೋರಬೇಕಾದ ಹೊಣೆಗಾರಿಕೆ ಮತ್ತು ಆಡಳಿತ ನಡೆಸುವವರು ‘ಸರ್ವಾಧಿಕಾರಿಗಳಲ್ಲ’ ಬದಲಿಗೆ ಜನರ ಸೇವಕರು ಎಂಬುದನ್ನು ನೆನಪಿಸುವ ವಿಚಾರಕ್ಕೆ ಈ ತೀರ್ಪು ದೊಡ್ಡ ಹಿನ್ನಡೆ ಉಂಟು ಮಾಡಿದೆ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಸರ್ಕಾರವು ಸಾರ್ವಜನಿಕರಿಂದ ಪಡೆದ ಹಣದ ವಿಚಾರದಲ್ಲಿ ತನಗೆ ಬೇಕಾದಂತೆ, ಅಪಾರದರ್ಶಕವಾಗಿ ವರ್ತಿಸುವ ಬಗ್ಗೆ ಉತ್ತರ ಪಡೆದುಕೊಳ್ಳುವ ಅವಕಾಶವನ್ನು ಸುಪ್ರೀಂ ಕೋರ್ಟ್‌ ವ್ಯರ್ಥ ಮಾಡಿತು ಎಂದೂ ಅವರು ಹೇಳಿದ್ದಾರೆ.

ದುಷ್ಟ ಯೋಜನೆಗಳಿಗೆ ಏಟು: ನಡ್ಡಾ
ರಾಹುಲ್‌ ಗಾಂಧಿ ಮತ್ತು ‘ವಿಷಯಗಳನ್ನು ಬಾಡಿಗೆಗೆ ಪಡೆಯುವ’ ಸಾಮಾಜಿಕ ಕಾರ್ಯಕರ್ತರ ದುಷ್ಟ ಯೋಚನೆಗಳಿಗೆ ಸುಪ್ರೀಂ ಕೋರ್ಟ್‌ ಮುಟ್ಟಿನೋಡಿಕೊಳ್ಳುವಂತಹ ಹೊಡೆತ ಕೊಟ್ಟಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷ ಮತ್ತು ಅದರ ಸಹವರ್ತಿಗಳ ದುರುದ್ದೇಶ ಮತ್ತು ದುಷ್ಟ ಪ್ರಯತ್ನಗಳ ನಡುವೆಯೂ ಸತ್ಯವು ಹೊಳೆಯುತ್ತಿರುತ್ತದೆ ಎಂಬುದನ್ನು ತೀರ್ಪು ತೋರಿಸಿಕೊಟ್ಟಿದೆ. ಪಿಎಂ ಕೇರ್ಸ್‌ಗೆ ಭಾರಿ ಪ್ರಮಾಣದಲ್ಲಿ ದೇಣಿಗೆ ನೀಡುವ ಮೂಲಕ ಜನರು, ರಾಹುಲ್‌ ಅವರ ‘ಬಡಬಡಿಕೆಗಳನ್ನು’ ತಿರಸ್ಕರಿಸಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.

ಗಾಂಧಿ ಕುಟುಂಬವು ಪಿಎಂಎನ್‌ಆರ್‌ಎಫ್‌ (ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ) ತನ್ನ ವೈಯಕ್ತಿಕ ಆಸ್ತಿ ಎಂಬಂತೆ ದಶಕಗಳ ಕಾಲ ವರ್ತಿಸಿದೆ ಮತ್ತು ಪಿಎಂಎನ್‌ಆರ್‌ಎಫ್‌ನ ಹಣವನ್ನು ಕುಟುಂಬದ ಟ್ರಸ್ಟ್‌ಗಳಿಗೆ ವರ್ಗಾಯಿಸಿದೆ ಎಂದೂ ಅವರು ಆರೋಪಿಸಿದ್ದಾರೆ.

***

ಪಿಎಂ ಕೇರ್ಸ್‌ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಪಪ್ರಚಾರವು ತನ್ನ ಪಾಪಗಳನ್ನು ತೊಳೆದುಕೊಳ್ಳಲು ಕಾಂಗ್ರೆಸ್‌ ನಡೆಸುತ್ತಿರುವ ಪ್ರಯತ್ನ ಎಂಬುದು ದೇಶಕ್ಕೆ ಬಹಳ ಚೆನ್ನಾಗಿ ತಿಳಿದಿದೆ.
-ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

***

ಪಾರದರ್ಶಕವಲ್ಲದ ಮತ್ತು ಉತ್ತರದಾಯಿತ್ವ ಇಲ್ಲದ ಪಿಎಂ ಕೇರ್ಸ್‌ ನಿಧಿಯು, ಕೋವಿಡ್‌ ಪರಿಹಾರದ ಹೆಸರಿನಲ್ಲಿ ಹಣ ಸಂಗ್ರಹಿಸಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಿರುವುದು ದುರದೃಷ್ಟಕರ.
-ಪ್ರಶಾಂತ್‌ ಭೂಷಣ್‌, ಅರ್ಜಿದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT