ಗುರುವಾರ , ಫೆಬ್ರವರಿ 25, 2021
28 °C

'ಆತ್ಮನಿರ್ಭರ ಭಾರತ್‘‌ ಮೂಲಕ ನವ ಭಾರತಕ್ಕಾಗಿ ಕೆಲಸ ಮಾಡಲು ಪ್ರಧಾನಿ ಮೋದಿ ಕರೆ

ಎಎನ್‌ಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: 'ಆತ್ಮನಿರ್ಭರ ಭಾರತ್' ಅಭಿಯಾನದ ಮೂಲಕ 'ನವ ಭಾರತ'ಕ್ಕಾಗಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಯುವಕರಿಗೆ ಕರೆ ನೀಡಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶವು 75ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರವೇಶಿಸುತ್ತಿದೆ. ಅಸ್ಸಾಂನ ಅಸಂಖ್ಯಾತ ಜನರು ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡಿದ್ದರು. ಹಲವಾರು ಜನರು ತಮ್ಮ ಜೀವನವನ್ನು, ತಮ್ಮ ಯೌವನವನ್ನು ತ್ಯಾಗ ಮಾಡಿದ್ದಾರೆ. ಈಗ ನೀವು ಹೊಸ ಭಾರತ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ಜೀವಿಸಬೇಕು ಎಂದು ಹೇಳಿದರು.

ಕೋವಿಡ್-19ನ ಈ ಸಮಯದಲ್ಲಿ ಆತ್ಮನಿರ್ಭರ ಭಾರತ ಅಭಿಯಾನವು ನಮ್ಮ ಶಬ್ದಕೋಶದ ಒಂದು ಭಾಗವಾಗಿ ಮಾರ್ಪಟ್ಟಿದೆ. ಅದರಂತೆ ಇಂದು ಈಶಾನ್ಯ ಭಾಗದ ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರ ತೊಡಗಿಸಿಕೊಂಡಿದೆ. ಸಂಪರ್ಕ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ನಾವು ಕೆಲಸ ಮಾಡುತ್ತಿರುವ ರೀತಿಯಲ್ಲಿ ನಿಮಗಾಗಿ ಹಲವು ಹೊಸ ಸಾಧ್ಯತೆಗಳಿವೆ. ಈ ಸಾಧ್ಯತೆಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.

ತೇಜ್‌ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಳಮಟ್ಟದ ಆವಿಷ್ಕಾರಗಳು 'ವೋಕಲ್ ಫಾರ್ ಲೋಕಲ್' ಮಾಡಲು ಪ್ರಚೋದನೆಯನ್ನು ನೀಡುತ್ತದೆ. ಈ ಆವಿಷ್ಕಾರಗಳು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತವೆ ಮತ್ತು ಇದರಿಂದಾಗಿ ಅಭಿವೃದ್ಧಿಯೆಡೆಗಿನ ಹೊಸ ಬಾಗಿಲು ತೆರೆಯುತ್ತದೆ ಎಂದು ಮೋದಿ ಹೇಳಿದರು.

ತ್ಯಾಜ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪರಿಣಾಮವೂ ದೊಡ್ಡದಾಗಿದೆ. ಬೆಳೆಗಳ ತ್ಯಾಜ್ಯಗಳು ನಮ್ಮ ರೈತರಿಗೆ ಮತ್ತು ಪರಿಸರಕ್ಕೆ ದೊಡ್ಡ ಸವಾಲಾಗಿದೆ. ನೀವು ಮಾಡುತ್ತಿರುವ ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರಗಳಿಗೆ ಸಂಬಂಧಿಸಿದ ತಂತ್ರಜ್ಞಾನದ ಕೆಲಸವು ಭಾರತದ ಪ್ರಮುಖ ಸಮಸ್ಯೆಯನ್ನು ಪರಿಹರಿಸಬಹುದು. ಈಶಾನ್ಯದ ಜೀವವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಅಭಿಯಾನವನ್ನು ವಿಶ್ವವಿದ್ಯಾನಿಲಯವು ನಡೆಸುತ್ತಿದೆ ಎಂದು ಅವರು ಹೇಳಿದರು.

ಆಸ್ಟ್ರೇಲಿಯಾ ವಿರುದ್ಧದ ಭಾರತೀಯ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವನ್ನು 'ಜೀವನ ಪಾಠ'ಕ್ಕೆ ಹೋಲಿಸಿದ್ದಾರೆ ಮತ್ತು ಸವಾಲಿನ ಪರಿಸ್ಥಿತಿಗಳಲ್ಲಿ ಹೋರಾಡುವ ಆಟಗಾರರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಇಂದಿನ ಭಾರತವು ಸಮಸ್ಯೆಗಳನ್ನು ಪರಿಹರಿಸುವ ಪ್ರಯೋಗಗಳಲ್ಲಿ ಕೆಲಸ ಮಾಡಲು ಹೆದರುವುದಿಲ್ಲ ಎಂದರು.

ಆಸ್ಟ್ರೇಲಿಯಾದಲ್ಲಿ ಭಾರತೀಯ ತಂಡದ ಗೆಲುವು ಬದಲಾದ ಪರಿಸ್ಥಿತಿಯಲ್ಲಿ ಕಾರ್ಯವಿಧಾನದಲ್ಲಿನ ಬದಲಾವಣೆಗೆ ಉತ್ತಮ ಉದಾಹರಣೆಯಾಗಿದೆ. ಮೊದಲ ಪರೀಕ್ಷೆಯಲ್ಲಿ ಸೋತ ನಂತರವೂ ಅವರು ಹೋರಾಟವನ್ನು ಮುಂದುವರಿಸಿದರು. ಗಾಯಗಳಿಂದ ಬಳಲುತ್ತಿದ್ದರೂ ಕೂಡ, ನಮ್ಮ ಆಟಗಾರರು ಗೆಲುವಿಗಾಗಿ ಹೋರಾಡುತ್ತಲೇ ಇದ್ದರು ಮತ್ತು ಹೊಸ ಪರಿಹಾರಗಳನ್ನು ಹುಡುಕುತ್ತಲೇ ಇದ್ದರು. ಕೆಲವು ಆಟಗಾರರು ಕಡಿಮೆ ಅನುಭವ ಹೊಂದಿದ್ದರೂ ಕೂಡ ಅವರ ಧೈರ್ಯ ಕಡಿಮೆಯಾಗಿರಲಿಲ್ಲ. ಅವರು ಸರಿಯಾದ ಪ್ರತಿಭೆ ಮತ್ತು ಮನೋಧರ್ಮದಿಂದ ಇತಿಹಾಸವನ್ನು ಸೃಷ್ಟಿಸಿದರು. ಆಸ್ಟ್ರೇಲಿಯಾದಂತಹ ಅನುಭವಿ ತಂಡವನ್ನು ಸೋಲಿಸಿದರು. ನಮ್ಮ ಆಟಗಾರರ ಈ ಸಾಧನೆಯೇ ಜೀವನ ಪಾಠ ಎಂದು ಹೇಳಿದರು.

ಮೊದಲನೆಯ ಪಾಠವೆಂದರೆ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ವಿಶ್ವಾಸವಿರಬೇಕು. ಎರಡನೆಯದು ನಾವು ಸಕಾರಾತ್ಮಕ ಮನೋಭಾವದಿಂದ ಮುಂದೆ ಸಾಗಿದರೆ ಫಲಿತಾಂಶವೂ ಸಕಾರಾತ್ಮಕವಾಗಿರುತ್ತದೆ. ಮೂರನೆಯದು ನಿಮಗೆ ಸುರಕ್ಷಿತವಾಗಿ ಹೊರಗೆ ಹೋಗಲು ಒಂದು ಆಯ್ಕೆ ಮತ್ತು ಇನ್ನೊಂದೆಡೆ ಗೆಲುವಿನ ಆಯ್ಕೆ ಇದ್ದರೆ, ನೀವು ಗೆಲುವಿನ ಸಾಧ್ಯತೆಯನ್ನೇ ಅನ್ವೇಷಿಸಬೇಕು. ಒಂದು ವೇಳೆ ನೀವು ಸೋತರೂ, ಗೆಲುವಿಗಾಗಿ ಪ್ರಯತ್ನಿಸುವಾಗ, ಅದನ್ನು ನಷ್ಟವೆಂದು ಪರಿಗಣಿಸಲಾಗುವುದಿಲ್ಲ. ಅಪಾಯಗಳನ್ನು ತೆಗೆದುಕೊಳ್ಳಲು ಮತ್ತು ಪ್ರಯೋಗಗಳನ್ನು ಮಾಡಲು ನೀವು ಭಯಪಡಬಾರದು. ನಾವು ಚುರುಕಾಗಿರಬೇಕು ಮತ್ತು ನಿರ್ಭಯವಾಗಿರಬೇಕು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು