ಶುಕ್ರವಾರ, ಫೆಬ್ರವರಿ 3, 2023
23 °C
ಗುಜರಾತ್ ಚುನಾವಣಾ ಪ್ರಚಾರ: ಖರ್ಗೆ ಟೀಕೆಗೆ ಮೋದಿ ತೀವ್ರ ಆಕ್ಷೇಪ

ರಾಮಭಕ್ತರನ್ನು ರಾವಣ ಎನ್ನಬಾರದಿತ್ತು: ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್‌: ‘ರಾಮಭಕ್ತರ ನಾಡಿನ ವ್ಯಕ್ತಿಯನ್ನು ಖರ್ಗೆ ಅವರು ರಾವಣ ಎಂದು ಕರೆಯಬಾರದಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತಿಗರಿಗೆ ಅವಮಾನ ಮಾಡಿದ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಕಲಿಸಲು ಬಿಜೆಪಿಗೆ ಮತ ನೀಡಿ ಎಂದು ಮೋದಿ ಕರೆ ನೀಡಿದ್ದಾರೆ.

ಈಚೆಗೆ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಎಲ್ಲಾ ಚುನಾವಣೆಗಳಲ್ಲೂ ಮೋದಿ ಅವರೇ ಪ್ರಚಾರ ನಡೆಸುತ್ತಾರೆ. ಮೋದಿ ಅವರೇ ನಿಮಗೇನು ರಾವಣನಂತೆ 100 ತಲೆ ಇದೆಯೇ’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ
ವ್ಯಕ್ತಪಡಿಸಿದ್ದರು.

ಗುರುವಾರ ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ, ಖರ್ಗೆ ಅವರ ಮಾತನ್ನು ಟೀಕಿಸಿದರು. 

‘ಕಾಂಗ್ರೆಸ್‌ನವರು ರಾಮನ ಅಸ್ತಿತ್ವ ವನ್ನೇ ನಂಬುತ್ತಿರಲಿಲ್ಲ. ಅಂತಹವರು ಈಗ ನನ್ನನ್ನು ತೆಗಳಲು, ರಾಮಾಯಣ ದಲ್ಲಿನ ರಾವಣನನ್ನು ತಂದಿದ್ದಾರೆ. ಗುಜರಾತ್ ರಾಮಭಕ್ತರ ನಾಡು ಎಂಬುದನ್ನು ಅವರು ಮರೆತಿದ್ದಾರೆ. ಏನೇ ಆದರೂ, ರಾಮಭಕ್ತರ ನಾಡಿನ ವ್ಯಕ್ತಿಯನ್ನು ರಾವಣನಿಗೆ ಹೋಲಿಸ
ಬಾರದಿತ್ತು’ ಎಂದು ಮೋದಿ ಹೇಳಿದ್ದಾರೆ.

‘ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಕಾಂಗ್ರೆಸ್‌ ನಾಯಕರು ದೇಶಕ್ಕೆ ನಿಷ್ಠರಾಗಿಲ್ಲ. ಬದಲಿಗೆ ಒಂದು ಕುಟುಂಬಕ್ಕೆ ನಿಷ್ಠರಾಗಿದ್ದಾರೆ. ಆ ಕುಟುಂಬವನ್ನು ಸಂತೋಷಪಡಿಸಲು ಕಾಂಗ್ರೆಸ್‌ ನಾಯಕರು ಏನು ಬೇಕಾದರೂ ಮಾಡುತ್ತಾರೆ’ ಎಂದು ಮೋದಿ ಆರೋಪಿಸಿದ್ದಾರೆ.

‘ಕೆಲವರು ನಾನು ನಾಯಿಯಂತೆ ಸಾಯುತ್ತೇನೆ ಎಂದಿದ್ದಾರೆ. ಕೆಲವರು ನಾನು ಹಿಟ್ಲರ್‌ನಂತೆ ಸಾಯುತ್ತೇನೆ ಎಂದಿದ್ದಾರೆ. ಇನ್ನೂ ಒಬ್ಬರು ಅವಕಾಶ ಸಿಕ್ಕರೆ ನನ್ನನ್ನು ಕೊಲೆ ಮಾಡುತ್ತೇನೆ ಎಂದಿದ್ದಾರೆ. ಒಬ್ಬ ಗುಜರಾತಿ ಕೆಳಮಟ್ಟದಿಂದ ಈ ಮಟ್ಟಕ್ಕೆ ಏರಿರುವುದನ್ನು ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಮೋದಿ ಆರೋಪಿಸಿದ್ದಾರೆ.

50 ಕಿ.ಮೀ. ರೋಡ್‌ಷೋ

ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ 50 ಕಿ.ಮೀ.ನಷ್ಟು ರೋಡ್‌ಷೋ ನಡೆಸಿದ್ದಾರೆ. ಗುಜರಾತ್‌ನಲ್ಲಿ ನಡೆದ ಅತ್ಯಂತ ಉದ್ದದ ಚುನಾವಣಾ ಪ್ರಚಾರದ ರೋಡ್‌ಷೋ ಇದಾಗಿದೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.

2002ರ ಗೋದ್ರಾ ಗಲಭೆಯ ಕೇಂದ್ರಗಳಲ್ಲಿ ಒಂದಾದ ನರೋಡಾ ಗಾಮ್‌ನಿಂದ ರೋಡ್‌ಷೋ ಆರಂಭವಾಯಿತು. ಒಟ್ಟು 16 ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋದ ಮೆರವಣಿಗೆಯು ಸಾಬರಮತಿಯಲ್ಲಿ ಕೊನೆಯಾಯಿತು. ರೋಡ್‌ಷೋ ಉದ್ದಕ್ಕೂ 35 ಕಡೆ ಮೋದಿ ಅವರು ಪ್ರಚಾರ ಸಭೆಗಳನ್ನು ನಡೆಸಿದರು.

ಆಂಬುಲೆನ್ಸ್‌ಗೆ ಜಾಗ: ರೋಡ್‌ಷೋ ವೇಳೆ ಆಂಬುಲೆನ್ಸ್‌ ಬಂದಿದ್ದರಿಂದ, ಮೋದಿ ಅವರು ಕೆಲಕಾಲ ತಮ್ಮ ಪ್ರಚಾರವನ್ನು ನಿಲ್ಲಿಸಿದರು. ಆಂಬುಲೆನ್ಸ್‌ ಹಾದುಹೋಗಲು ಅನುವು ಮಾಡಿಕೊಟ್ಟರು ಎಂದು ಮೂಲಗಳು ಹೇಳಿವೆ.

ಮತಗಟ್ಟೆಗೆ ಸಿಲಿಂಡರ್‌, ದನ-ಕರು 

ಗುಜರಾತ್‌ ವಿಧಾನಸಭಾ ಚುನಾವಣೆಯಮೊದಲ ಹಂತದ ಮತದಾನದ ವೇಳೆ ಹಲವು ಮತದಾರರು ಎಲ್‌ಪಿಜಿ ಸಿಲಿಂಡರ್‌, ದನ–ಕರುಗಳನ್ನು ಮತಗಟ್ಟೆಗೆ ತಂದು ಪ್ರತಿಭಟನೆ ದಾಖಲಿಸಿದರು.

ಅಡುಗೆ ಅನಿಲ ಸಿಲಿಂಡರ್‌ನ ಬೆಲೆ ಏರಿಕೆಯನ್ನು ಖಂಡಿಸಿ ಜಾಸ್ಮಿನ್ ಮರ್ಚಂಟ್‌ ಎಂಬುವವರು ಮತಗಟ್ಟೆಗೆ, ಖಾಲಿ ಎಲ್‌ಪಿಜಿ ಸಿಲಿಂಡರ್ ಅನ್ನು ಹೊತ್ತು ತಂದರು.

‘ನನ್ನ ಕನಸಿನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬಂದಿತ್ತು. ಅದೂ ಮತಹಾಕಬೇಕು ಎಂದು ತನ್ನ ಬಯಕೆ ಹೇಳಿಕೊಂಡಿತು. ಹೀಗಾಗಿ ಅದನ್ನು ಮತಗಟ್ಟೆಗೆ ಹೊತ್ತುತಂದೆ’ ಎಂದು ಅವರು
ಲೇವಡಿ ಮಾಡಿದ್ದಾರೆ. 

ಅಮ್ರೇಲಿ ಕಾಂಗ್ರೆಸ್‌ ಶಾಸಕ ಪರೇಶ್ ಧನಾನಿ ಮತ್ತು ಸಂಗಡಿಗರು ಮತಗಟ್ಟೆಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸೈಕಲ್‌ನಲ್ಲಿ ಹೊತ್ತು ತಂದರು. ‘2014ರಲ್ಲಿ ₹450, 2022ರಲ್ಲಿ ₹1,100’ ಎಂಬ ಪೋಸ್ಟರ್‌ ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗಿತ್ತು. ‘ಪೆಟ್ರೊಲ್‌ ಬೆಲೆ ಲೀಟರ್‌ಗೆ ₹100 ದಾಟಿದೆ. ಎಲ್‌ಪಿಜಿ ಸಿಲಿಂಡರ್‌ ಬೆಲೆ ₹1,100 ದಾಟಿದೆ. ಬಡವರು ಹೇಗೆ ಬದುಕಬೇಕು? ಈ ಬೆಲೆ ಏರಿಕೆಯನ್ನು ಪ್ರತಿಭಟಿಸುವ ಸಲುವಾಗಿ ಸೈಕಲ್‌ ಮೇಲೆ ಸಿಲಿಂಡರ್‌ ಹೊತ್ತು ತಂದೆವು’ ಎಂದು ಧನಾನಿ ಹೇಳಿದ್ದಾರೆ. 

ಗೋವು ಮತ್ತು ಕುರಿಗಳನ್ನು ಸಾಕುವ ಅಲೆಮಾರಿಗಳಾದ ಮಾಲಾಧಾರಿ ಸಮುದಾಯದವರೂ ತಮ್ಮ ಪ್ರತಿಭಟನೆ ದಾಖಲಿಸಲು ಮತದಾನದ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು. ಕಛ್‌ನ ಮತಗಟ್ಟೆ ಒಂದಕ್ಕೆ ಹಸು ಮತ್ತು ಕರುಗಳನ್ನು ಮಾಲಾಧಾರಿ ಜನರು ಕರೆತಂದಿದ್ದರು. ‘ನಮ್ಮ ಕಷ್ಟಗಳಿಗೆ ಸರ್ಕಾರ ಗಮನ ಕೊಡುತ್ತಿಲ್ಲ. ನಮ್ಮ ಕಷ್ಟಗಳ ಬಗ್ಗೆ ಗಮನ ನೀಡಬೇಕು ಎಂದು ಒತ್ತಾಯಿಸಲು ಹಸು–ಕರುಗಳನ್ನು ಮತಗಟ್ಟೆಗೆ ಕರೆತಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಮತ್ತು ಎಎಪಿಯ ಕಾರ್ಯಕರ್ತರು ಮತಗಟ್ಟೆಗೆ ಸೈಕಲ್‌ನಲ್ಲಿ ಬರುವ ಮೂಲಕ ಬೆಲೆ
ಏರಿಕೆಯನ್ನು ಖಂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು