ಮಂಗಳವಾರ, ಸೆಪ್ಟೆಂಬರ್ 21, 2021
28 °C
ಜೆಪಿಸಿ ತನಿಖೆಗೆ ವಿಪಕ್ಷಗಳ ಆಗ್ರಹ

ಪೆಗಾಸಸ್: ಸಂಸತ್ತಿನಲ್ಲಿ ಪ್ರಧಾನಿಯೇ ಸ್ಪಷ್ಟನೆ ನೀಡಲಿ- ಕಾಂಗ್ರೆಸ್ ನಾಯಕ ಚಿದಂಬರಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪೆಗಾಸಸ್ ಕುತಂತ್ರಾಂಶ ಬಳಸಿಕೊಂಡು ಗೂಢಚರ್ಯೆ ನಡೆಸಲಾಗಿದೆಯೇ, ಇಲ್ಲವೇ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಒತ್ತಾಯಿಸಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಆಗ್ರಹವನ್ನು ಮುಂದಿಟ್ಟಿದ್ದಾರೆ. ‘ಮೋದಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿಲ್ಲಾ ವಿರೋಧ ಪಕ್ಷಗಳು ಒತ್ತಾಯಿಸುತ್ತಲೇ ಇವೆ. ಮೋದಿ ಅವರು ಸಂಸತ್ ಅಧಿವೇಶನದ ಮೊದಲ ದಿನವೇ ಈ ಬಗ್ಗೆ ಹೇಳಿಕೆ ನೀಡಬಹುದಿತ್ತು. ದೇಶದಲ್ಲಿ ಕೆಲವು ಸಂಸ್ಥೆಗಳು ಮಾತ್ರವೇ ಹೀಗೆ ಗೂಢಚರ್ಯೆ ನಡೆಸಲು ಶಕ್ತವಾ
ಗಿವೆ. ಆ ಎಲ್ಲಾ ಸಂಸ್ಥೆಗಳು ಪ್ರಧಾನಿಯ ಅಧೀನದಲ್ಲಿಯೇ ಬರುತ್ತವೆ. ಹೀಗಾಗಿ ಪ್ರಧಾನಿ ಮಾತ್ರವೇ ಈ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ತಮ್ಮ ಸಚಿವಾಲಯ ಮತ್ತು ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲಾ ಸಚಿವರಿಗೆ ಗೊತ್ತಿರುತ್ತದೆ. ಆದರೆ ಎಲ್ಲಾ ಸಚಿವಾಲಯ ಮತ್ತು ಇಲಾಖೆಗಳಲ್ಲಿ ಏನು ನಡೆಯುತ್ತಿದೆ ಎಂಬುದು ಪ್ರಧಾನಿ ಒಬ್ಬರಿಗೆ ಮಾತ್ರವೇ ಗೊತ್ತಿರುತ್ತದೆ. ಹೀಗಾಗಿಯೇ ಪ್ರಧಾನಿ ಮೋದಿ ಅವರು ಮುಂದೆ ಬಂದು, ಪೆಗಾಸಸ್ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಂಸತ್ತಿನಲ್ಲಿ ಸ್ಪಷ್ಟಪಡಿಸಲಿ’ ಎಂದು ಅವರು ಒತ್ತಾಯಿಸಿದ್ದಾರೆ.

ಜೆಪಿಸಿ ಮೇಲು: ‘ಪೆಗಾಸಸ್ ಗೂಢಚರ್ಯೆ ಕುರಿತು ಮಾಹಿತಿ ತಂತ್ರಜ್ಞಾನ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ತನಿಖೆ ನಡೆಸಿದರೆ ಸಾಕು ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕಿಂತಲೂ ಸಂಸತ್ತಿನ ಜಂಟಿ ಸದನ ಸಮಿತಿ (ಜೆಪಿಸಿ) ತನಿಖೆ ನಡೆಸಿದರೆ ಅದು ಹೆಚ್ಚು ಸೂಕ್ತವಾಗಿರುತ್ತದೆ’ ಎಂದು ಚಿದಂಬರಂ ಪ್ರತಿಪಾದಿಸಿದ್ದಾರೆ.

‘ಪೆಗಾಸಸ್ ಗೂಢಚರ್ಯೆ ಕುರಿತು ತನಿಖೆ ನಡೆಸಲು ಜೆಪಿಸಿ ಅವಶ್ಯಕತೆ ಇಲ್ಲ ಎಂದು ಮಾಹಿತಿ ತಂತ್ರಜ್ಞಾನ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಈ ಸಮಿತಿಯೇ ತನಿಖೆ ನಡೆಸಲು ಮುಂದೆ ಬಂದಿದೆ. ಅದನ್ನು ಸ್ವಾಗತಿಸೋಣ. ಆದರೆ, ಈ ಸಮಿತಿಗೆ ಕೆಲವು ಮಿತಿಗಳಿವೆ. ಹೊರಗಿನ ಸಾಕ್ಷ್ಯಗಳನ್ನು ಕಲೆಹಾಕಲು ಈ ಸಮಿತಿಗೆ ಅಧಿಕಾರವಿಲ್ಲ. ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸಮಿತಿಯು ತನಿಖೆಗೆ ಅವಕಾಶ ಮಾಡಿಕೊಡುತ್ತದೆಯೇ’ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

‘ಜಂಟಿ ಸದನ ಸಮಿತಿ ತನಿಖೆ ನಡೆಸಿದರೆ, ಸಂಸತ್ತಿನ ಹೊರಗಿನ ವ್ಯಕ್ತಿಗಳನ್ನು ವಿಚಾರಣೆಗೆ ಕರೆಸಲು ಅವಕಾಶವಿರುತ್ತದೆ. ಬೇರೆ ಬೇರೆ ಮೂಲಗಳಿಂದ ಸಾಕ್ಷ್ಯ ಸಂಗ್ರಹಿಸಲು ಅವಕಾಶವಿರುತ್ತದೆ. ಮರುವಿಚಾರಣೆ ನಡೆಸಲು ಜೆಪಿಸಿಗೆ ಅಧಿಕಾರವಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ಸರ್ಕಾರವು ಗೂಢಚರ್ಯೆ ವಿಚಾರವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕು. ಇಲ್ಲವೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಿ ಎಂದು ಸುಪ್ರೀಂ ಕೋರ್ಟ್ ಅನ್ನು ಕೇಳಿಕೊಳ್ಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಿ ಎಂದು ಕೋರಿ ಈಗಾಗಲೇ ಒಂದೆರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್‌ ತನಿಖೆಗೆ ಆದೇಶಿಸುವ ಮುನ್ನವೇ ಸರ್ಕಾರವೇ ನ್ಯಾಯಾಲಯವನ್ನು ಕೋರುವುದು ಸೂಕ್ತ’ ಎಂದು ಅವರು ಹೇಳಿದ್ದಾರೆ.

***

ಕಾನೂನುಬಾಹಿರ ಗೂಢಚರ್ಯೆಯಿಂದಲೇ 2019ರಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎನ್ನಲು ಸಾಧ್ಯವಿಲ್ಲವಾದರೂ, ಗೆಲುವಿಗೆ ನೆರವಾಯಿತು ಎನ್ನಬಹುದು

- ಪಿ.ಚಿದಂಬರಂ, ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ

***

ಪೆಗಾಸಸ್ ಗೂಢಚರ್ಯೆ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಲಾಗಿದೆ. ಆದರೆ ಗೂಢಚರ್ಯೆ ನಡೆಸಲಾಗಿದೆ ಎಂದು ಸರ್ಕಾರ ಒಪ್ಪಿಕೊಳ್ಳುತ್ತಲೂ ಇಲ್ಲ, ನಿರಾಕರಿಸುತ್ತಲೂ ಇಲ್ಲ

- ಜಾನ್ ಬ್ರಿಟಾಸ್, ಸಿಪಿಎಂ ರಾಜ್ಯಸಭಾ ಸದಸ್ಯ

***

ಪೆಗಾಸಸ್ ಎಂಬ ನೂತನ ತಂತ್ರಜ್ಞಾನ ನಮ್ಮನ್ನು ಜೀತಕ್ಕೆ ದೂಡಿದೆ. ಅಣು ಬಾಂಬ್‌ಗಳು ಹಿರೋಷಿಮಾ-ನಾಗಸಾಕಿಯಲ್ಲಿ ಜನರನ್ನು ಕೊಂದವು. ಪೆಗಾಸಸ್ ನಮ್ಮ ಸ್ವಾತಂತ್ರ್ಯವನ್ನು ಕೊಂದಿದೆ

- ಸಂಜಯ್ ರಾವುತ್, ಶಿವಸೇನಾ ಸಂಸದ

***

ಪೆಗಾಸಸ್ ಗೂಢಚರ್ಯೆ ಕುರಿತು ತನಿಖೆ ನಡೆಸಲು ವಿರೋಧ ಪಕ್ಷಗಳ ಸಂಸದರು ಇರುವ ಜಂಟಿ ಸದನ ಸಮಿತಿಯನ್ನು ಸರ್ಕಾರ ಕೂಡಲೇ ರಚಿಸಬೇಕು

- ಸುಖಬೀರ್ ಸಿಂಗ್ ಬಾದಲ್, ಅಕಾಲಿ ದಳ ಅಧ್ಯಕ್ಷ

***

ಈ ಆರೋಪಗಳಿಗೆ ಆಧಾರವೇ ಇಲ್ಲ. ಜನರಿಗಾಗಿ ಚರ್ಚೆ ಮಾಡಲು ವಿರೋಧ ಪಕ್ಷಗಳಿಗೆ ಬೇರೆ ವಿಷಯಗಳೇ ಇಲ್ಲ. ಹೀಗಾಗಿ ಈ ವಿಷಯವನ್ನು ಮುಂದು ಮಾಡುತ್ತಿವೆ

- ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

***

‘ಗೂಢಚರ್ಯೆ ನಿರಾಕರಿಸದ ಸರ್ಕಾರ’

‘ಪೆಗಾಸಸ್ ಕುತಂತ್ರಾಂಶ ಮೂಲಕ ಗೂಢಚರ್ಯೆ ನಡೆಸಿಲ್ಲ ಎಂದು ಸರ್ಕಾರವು ಹೇಳುತ್ತಲೇ ಇಲ್ಲ. ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈ‍ಷ್ಣವ್ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಈ ವಿಚಾರದಲ್ಲಿ ಬಹಳ ಬುದ್ಧಿವಂತಿಕೆಯಿಂದ ಉತ್ತರ ನೀಡುತ್ತಿದ್ದಾರೆ. ಇವರು ಏನು ಹೇಳುತ್ತಿದ್ದಾರೆ ಎಂಬುದಕ್ಕಿಂತ ಏನು ಹೇಳುತ್ತಿಲ್ಲ ಎಂಬುದೇ ಈಗ ಮುಖ್ಯವಾಗಿದೆ’ ಎಂದು ಚಿದಂಬರಂ ಹೇಳಿದ್ದಾರೆ.

‘ಅನಧಿಕೃತವಾಗಿ ಯಾವುದೇ ಗೂಢಚರ್ಯೆ ನಡೆದಿಲ್ಲ ಎಂದು ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ. ಅಂದರೆ ಅನಧಿಕೃತವಾಗಿ ಗೂಢಚರ್ಯೆ ನಡೆದಿದೆ ಎಂಬುದನ್ನು ಸರ್ಕಾರ ನಿರಾಕರಿಸುತ್ತಿದೆ. ಆದರೆ ಗೂಢಚರ್ಯೆ ನಡೆದಿದೆ ಎಂಬುದನ್ನೂ ಅವರು ನಿರಾಕರಿಸುತ್ತಿಲ್ಲ, ಅಧಿಕೃತವಾಗಿ ಗೂಢಚರ್ಯೆ ನಡೆಸಲಾಗಿದೆ ಎಂಬುದನ್ನೂ ಅವರು ನಿರಾಕರಿಸುತ್ತಿಲ್ಲ. ಅಧಿಕೃತ ಗೂಢಚರ್ಯೆ ಮತ್ತು ಅನಧಿಕೃತ ಗೂಢಚರ್ಯೆ ನಡುವಣ ವ್ಯತ್ಯಾಸ ಏನು ಎಂಬುದನ್ನು ಸಚಿವರು ಚೆನ್ನಾಗಿ ಅರಿತಿದ್ದಾರೆ’ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.

‘ಭಾರತದ ಕೆಲವು ಆಯ್ದ ಫೋನ್‌ ಸಂಖ್ಯೆಗಳನ್ನು ಪೆಗಾಸಸ್ ಮೂಲಕ ಗೂಢಚರ್ಯೆಗೆ ಗುರಿಪಡಿಸಲಾಗಿದೆ ಎಂಬುದನ್ನು ಗೃಹ ಸಚಿವ ಅಮಿತ್ ಶಾ ಹೇಳುತ್ತಿಲ್ಲ. ಶಾ ಏನು ಹೇಳಿದರು ಎಂಬುದಕ್ಕಿಂತ, ಅವರು ಏನು ಹೇಳಲಿಲ್ಲ ಎಂಬುದೇ ಮುಖ್ಯವಾದ ವಿಚಾರ. ಗೂಢಚರ್ಯೆ ನಡೆದಿಲ್ಲ ಎಂದು ಗೃಹ ಸಚಿವರು ಆತ್ಮವಿಶ್ವಾಸದಿಂದ ಹೇಳಲು ಸಾಧ್ಯವಾಗುತ್ತಿಲ್ಲ ಅಂದರೆ, ಈ ಗೂಢಚರ್ಯೆಗೆ ಗೃಹ ಸಚಿವರೇ ನೇರ ಹೊಣೆ’ ಎಂದು ಚಿದಂಬರಂ ಆರೋಪಿಸಿದ್ದಾರೆ.

‘ನೇರ ಪ್ರಶ್ನೆಗಳಿಗೆ ಉತ್ತರಿಸಿ’

‘ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗಿದೆಯೇ ಇಲ್ಲವೇ ಎಂದು ನಾವು ನೇರವಾಗಿ ಪ್ರಶ್ನಿಸುತ್ತಿದ್ದೇವೆ. ಸರ್ಕಾರ ಗೂಢಚರ್ಯೆ ನಡೆಸಿದೆಯೇ ಅಥವಾ ಸರ್ಕಾರದ ಸಂಸ್ಥೆಗಳು ಗೂಢಚರ್ಯೆ ನಡೆಸಿವೆಯೇ ಎಂದು ಪ್ರಶ್ನಿಸುತ್ತಿದ್ದೇವೆ. ಯಾವ ಸಂಸ್ಥೆಯು ಪೆಗಾಸಸ್‌ ಖರೀದಿಗೆ ಹಣ ಪಾವತಿ ಮಾಡಿದೆ ಮತ್ತು ಎಷ್ಟು ಹಣ ಪಾವತಿ ಮಾಡಲಾಗಿದೆ ಎಂಬ ನಾಲ್ಕು ಪ್ರಶ್ನೆಗಳನ್ನು ಸರ್ಕಾರದ ಮುಂದೆ ಇರಿಸಿದ್ದೇವೆ. ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಲಿ’ ಎಂದು ಚಿದಂಬರಂ ಒತ್ತಾಯಿಸಿದ್ದಾರೆ.

‘ಜನರು ಸಹ ಇಷ್ಟೇ ಸರಳವಾದ ಮತ್ತು ನೇರವಾದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ನೇರವಾಗಿ ಉತ್ತರಿಸುವುದನ್ನು ಬಿಟ್ಟು, ಸಚಿವರು ಬುದ್ಧಿವಂತಿಕೆಯ ಉತ್ತರ ನೀಡುತ್ತಿದ್ದಾರೆ. ಇದಕ್ಕೆ ನೇರವಾಗಿ ಉತ್ತರಿಸಿ ಅಷ್ಟೆ. ಗೊಂದಲ ಇರುವುದಿಲ್ಲ‌’ ಎಂದು ಅವರು ಹೇಳಿದ್ದಾರೆ.

‘ಸರ್ಕಾರದ ಮೌನವು ಮತ್ತಷ್ಟು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರಕ್ಕೆ ಗೊತ್ತಿಲ್ಲದಂತೆಯೇ ದೇಶದ ಯಾವುದೋ ಸಂಸ್ಥೆ ಗೂಢಚರ್ಯೆ ನಡೆಸುತ್ತಿದೆಯೇ? ಅಥವಾ ನಮ್ಮ ಸರ್ಕಾರಕ್ಕೆ ಗೊತ್ತಿಲ್ಲದಂತೆ ಬೇರೆ ದೇಶವು ಭಾರತೀಯರ ಮೇಲೆ ಗೂಢಚರ್ಯೆ ನಡೆಸುತ್ತಿದೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ. ಈ ಎರಡೂ ಸಂಗತಿಗಳು ನಿಜವಾಗಿದ್ದರೆ, ಸರ್ಕಾರವು ಗೂಢಚರ್ಯೆ ನಡೆಸಿದ್ದಕ್ಕಿಂತ ಅಪಾಯಕಾರಿ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅರ್ಥ. ಹೀಗಾಗಿ ಸರ್ಕಾರ ಈ ಬಗ್ಗೆ ಉತ್ತರ ನೀಡಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ಹೆಚ್ಚುವರಿ ಹಣ ಎಲ್ಲಿ ಹೋಯಿತು: ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

‘2016-18ನೇ ಸಾಲಿನಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ ಕಾರ್ಯಾಲಯಕ್ಕೆ ₹ 33 ಕೋಟಿ ನೀಡಲಾಗಿತ್ತು. 2017-18ರಲ್ಲಿ ₹ 333 ಕೋಟಿ ನೀಡಲಾಗಿದೆ. ಈ 300 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದು ಏಕೆ? ಈ ಏರಿಕೆ ಏಕೆ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಈ ಕಾರ್ಯಾಲಯಕ್ಕೆ ನೀಡಲಾದ ಅನುದಾನದ ಬಗ್ಗೆ ಸಂಸತ್ತಿನ ಗ್ರಂಥಾಲಯದಲ್ಲಿ ವಿವರ ಕೇಳಿದ್ದೇನೆ. ಈ ಅನುದಾನದಲ್ಲಿ 10 ಪಟ್ಟು ಏರಿಕೆಯಾಗಿದೆ. ಈ ಹೆಚ್ಚುವರಿ ₹ 300 ಕೋಟಿ ಎಲ್ಲಿಗೆ ಹೋಯಿತು ಎಂಬುದಕ್ಕೆ ಬಿಜೆಪಿ ವಕ್ತಾರರು ಸ್ಪಷ್ಟನೆ ನೀಡಬೇಕು’ ಎಂದು ಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು