ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿರೋಧ ಎದುರಿಸಿದ್ದ ಮೂರೂ ಕೃಷಿ ಕಾಯ್ದೆಗಳು ರದ್ದು: ಪ್ರಧಾನಿ ಮೋದಿ ಘೋಷಣೆ

Last Updated 19 ನವೆಂಬರ್ 2021, 5:13 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ರೈತರ ಹೋರಾಟ, ಪ್ರತಿಭಟನೆಗಳನ್ನು ಎದುರಿಸಿರುವ ಕೇಂದ್ರ ಸರ್ಕಾರದ ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು. ಸುಮಾರು ಒಂದು ವರ್ಷದಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ.

'ಮೂರು ಕೃಷಿ ಕಾಯ್ದೆಗಳ ಮೂಲಕ ಸರ್ಕಾರವು ಸಣ್ಣ ರೈತರ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿತ್ತು. ಅವರು ಬೆಳೆಯುವ ಬೆಳೆಗೆ ಒಳ್ಳೆಯ ಬೆಲೆ ಸಿಗುವಂತೆ ಮಾಡಲು ಉದ್ದೇಶಿಸಲಾಗಿತ್ತು. ರೈತರು ಮತ್ತು ಕೃಷಿ ವಿಜ್ಞಾನಿಗಳು ಈ ಕಾಯ್ದೆಗಳಿಗಾಗಿ ಹಲವು ವರ್ಷಗಳಿಂದ ಕೇಳುತ್ತಿದ್ದರು. ಹಲವು ಸರ್ಕಾರಗಳು ಈ ಕಾಯ್ದೆಯನ್ನು ತರುವ ಬಗ್ಗೆ ಆಲೋಚಿಸುತ್ತಿದ್ದವು, ಆದರೆ ನಾವು ಕಾಯ್ದೆಯನ್ನು ಜಾರಿಗೆ ತಂದೆವು. ಕೋಟ್ಯಂತರ ರೈತರು ಈ ಮೂರೂ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿದರು ಹಾಗೂ ಬೆಂಬಲ ನೀಡಿದರು. ಆ ಎಲ್ಲರಿಗೂ ನನ್ನ ಧನ್ಯವಾದಗಳು' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಕೃಷಿ ಕಾಯ್ದೆಗಳಿಂದ ಆಗುವ ಅನುಕೂಲಗಳ ಬಗ್ಗೆ ಒಂದು ಭಾಗದ ರೈತರ ಮನವೊಲಿಸಲು ನಮಗೆ ಸಾಧ್ಯವಾಗಲಿಲ್ಲ. ಹಲವು ವಿಜ್ಞಾನಿಗಳು ಮಾಧ್ಯಮಗಳ ಮೂಲಕ ಅವರಿಗೆ ವಿವರಿಸಲು ಪ್ರಯತ್ನಿಸಿದರು. ನಾವು ರೈತರ ಮಾತುಗಳನ್ನು ಆಲಿಸಲು, ಅವರ ವಿಚಾರಗಳನ್ನು ತಿಳಿಯಲು ಪ್ರಯತ್ನ ಮಾಡಿದೆವು. ಆದರೆ, ಒಂದು ಭಾಗದ ರೈತರಿಗೆ ಅದನ್ನು ಅರ್ಥ ಮಾಡಿಸಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.

'ನಾನು ಏನೇ ಮಾಡಿದ್ದರೂ ಅದು ರೈತರಿಗಾಗಿಯೇ ಮಾಡಿದ್ದು. ನಾನು ಈಗ ಮಾಡುತ್ತಿರುವುದು ದೇಶಕ್ಕೋಸ್ಕರ. ನಾನು ಇವತ್ತು ಭರವಸೆ ನೀಡುತ್ತೇನೆ, ನಾನು ಮತ್ತಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸುತ್ತೇನೆ. ಅದರಿಂದ ನಿಮ್ಮ ಕನಸುಗಳು, ರಾಷ್ಟ್ರದ ಕನಸುಗಳು ಸಾಕಾರಗೊಳಿಸುವಂತಾಗಲಿದೆ' ಎಂದು ಹೇಳಿದರು.

'ಎಲ್ಲ ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ನಾವು ನಿರ್ಧರಿಸಿದ್ದೇವೆ. ಆ ಬಗೆಗಿನ ಪ್ರಕ್ರಿಯೆಗಳನ್ನು ಸಂಸತ್ತಿನ ಅಧಿವೇಶನದ ವೇಳೆ ಆರಂಭಿಸಲಿದ್ದೇವೆ. ರೈತರು ತಮ್ಮ ಕುಟುಂಬಗಳಿಗೆ ಮರಳುವಂತೆ ಮನವಿ ಮಾಡುತ್ತೇನೆ, ಎಲ್ಲವೂ ಹೊಸದಾಗಿ ಆರಂಭಿಸೋಣ...' ಎಂದು ರೈತರ ಕುರಿತು ಪ್ರಧಾನಿ ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT