ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದ ಹಿಮನದಿ ಹಿಮನದಿ ಕುಸಿತ: ಇಲ್ಲಿವೆ ನಂತರದ ಬೆಳವಣಿಗೆಯ ಪ್ರಮುಖಾಂಶ

Last Updated 8 ಫೆಬ್ರುವರಿ 2021, 9:42 IST
ಅಕ್ಷರ ಗಾತ್ರ

ಡೆಹ್ರಾಡೂನ್: ಭಾನುವಾರ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಬಳಿ ಸಂಭವಿಸಿದ ಹಿಮನದಿ ಸ್ಫೋಟದಲ್ಲಿ ಅಲಕನಂದಾ ಮತ್ತು ಧೌಲಿಗಂಗಾ ನದಿಗಳಲ್ಲಿ ಪ್ರವಾಹ ಉಂಟಾಗಿದೆ. 7 ಮಂದಿ ಮೃತಪಟ್ಟಿದ್ದು, 17ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ.

ಪ್ರವಾಹದಲ್ಲಿ ಐದು ಸೇತುವೆಗಳು ಕೊಚ್ಚಿಹೊಗಿದ್ದು, ಮನೆಗಳು ಮತ್ತು ಎನ್‌ಟಿಪಿಸಿ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿದೆ. ಸಮೀಪದ ಹಳ್ಳಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಋಷಿಗಂಗಾದ ಸಣ್ಣ ವಿದ್ಯುತ್ ಯೋಜನೆಯು ಕೊಚ್ಚಿಹೋಗಿವೆ. ರಾಷ್ಟ್ರೀಯ ಮತ್ತು ರಾಜ್ಯದ ವಿಪತ್ತು ನಿರ್ವಹಣಾ ದಳ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಭಾರತವು ಉತ್ತರಾಖಂಡದ ಜೊತೆಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಟ್ವಿಟ್ ಮಾಡಿದ್ಧಾರೆ.

ಉತ್ತರಾಖಂಡದ ಹಿಮನದಿ ಸ್ಫೋಟ ಮತ್ತು ನಂತರದ ಬೆಳವಣಿಗೆಯ ಪ್ರಮುಖಾಂಶ ಇಲ್ಲಿವೆ.

1. ಎನ್‌ಟಿಪಿಸಿ ಸ್ಥಾವರದಲ್ಲಿ 148 ಮತ್ತು ಋಷಿಗಂಗಾದಲ್ಲಿ ಕೆಲಸ ಮಾಡುತ್ತಿದ್ದ 22 ಮಂದಿ ಉದ್ಯೋಗಿಗಳು ಸೇರಿ ಒಟ್ಟು 170 ಜನರು ನಾಪತ್ತೆಯಾಗಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಸಿಕ್ಕಿಬಿದ್ದ 12 ಜನರನ್ನು ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಗಳು ರಕ್ಷಿಸಿವೆ. ಸುಮಾರು ಮೂವತ್ತು ಮಂದಿ ಎರಡನೇ ಸುರಂಗದಲ್ಲಿ ಸಿಕ್ಕಿಬಿದ್ದಿದ್ದಾರೆ, ಈ ಸುರಂಗ ಸುಮಾರು 2.5 ಕಿ.ಮೀ ಉದ್ದವಿದೆ ಎಂದು ವರದಿಯಾಗಿದೆ. ರಕ್ಷಣಾ ತಂಡಗಳು ರಾತ್ರಿಯಿಡೀ ಅವರನ್ನು ಉಳಿಸಲು ಕಾರ್ಯಾಚರಣೆ ನಡೆಸಿವೆ.

2. ಈವರೆಗೆ 14 ಮೃತದೇಹಗಳು ಪತ್ತೆಯಾಗಿವೆ. ಭಾನುವಾರ ಚಮೋಲಿ ಜಿಲ್ಲೆಗೆ ಭೇಟಿ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ರಕ್ಷಣಾ ತಂಡಗಳು "ಕಾರ್ಮಿಕರ ಪ್ರಾಣ ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿವೆ" ಎಂದು ಹೇಳಿದ್ಧಾರೆ. ಹಿಮಸ್ಫೋಟದ ಬಳಿಕ ವಿಪತ್ತಿನ ನಿಖರವಾದ ಕಾರಣವನ್ನು ಪತ್ತೆ ಮಾಡಲು ವೈಜ್ಞಾನಿಕ ತಜ್ಞರ ತಂಡವು ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

3. ಮೃತರ ಕುಟುಂಬಕ್ಕೆ ₹ 4 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ರಾವತ್ ಘೋಷಿಸಿದ್ಧರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಹೆಚ್ಚುವರಿ ₹ 2 ಲಕ್ಷ ನೀಡಲಾಗುವುದು, ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹ 50,000 ಪರಿಹಾರ ನೀಡಲಾಗುತ್ತದೆ.

4. ದುರಂತದ ಬಗ್ಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಜೊತೆ ಮಾತನಾಡಿದ್ದೇನೆ ಎಂದು ಪ್ರಧಾನಿ ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ. "ದುರದೃಷ್ಟಕರ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದೇನೆ. ಭಾರತವು ಉತ್ತರಾಖಂಡದೊಂದಿಗೆ ನಿಂತಿದೆ. ಅಲ್ಲಿನ ಎಲ್ಲ ಜನರ ಸುರಕ್ಷತೆಗಾಗಿ ರಾಷ್ಟ್ರವು ಪ್ರಾರ್ಥಿಸುತ್ತದೆ" ಎಂದು ಹೇಳಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದು, ಮೋದಿ ಸರ್ಕಾರವು ಉತ್ತರಾಖಂಡದ ಜನರೊಂದಿಗೆ ಹೆಗಲು ಕೊಟ್ಟು ನಿಂತಿದೆ ಎಂದು ಹೇಳಿದ್ದಾರೆ.

5. ಭಾನುವಾರ ಸಭೆ ಸೇರಿದ್ದ ಎನ್‌ಸಿಎಂಸಿ (ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ) ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಪ್ರಕಾರ, ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ ಮತ್ತು ಈ ಹಂತದಲ್ಲಿ ಕೆಳಹಂತದ ಪ್ರದೇಶಗಳಲ್ಲಿ ಪ್ರವಾಹದ ಅಪಾಯವಿಲ್ಲ ಎಂದು ಹೇಳಿದೆ. ನೆರೆಯ ಹಳ್ಳಿಗಳಿಗೂ ಯಾವುದೇ ಆತಂಕ ಬೇಡ ಎಂದು ಎನ್‌ಸಿಎಂಸಿ ಸಭೆ ಬಳಿಕ ತಿಳಿಸಿದೆ.

6. ನೆರೆ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಜೋಶಿಮಠದಲ್ಲಿ 30 ಹಾಸಿಗೆಗಳ ಆಸ್ಪತ್ರೆಯನ್ನು ಸಿದ್ಧಪಡಿಸಲಾಗಿದೆ. ಶ್ರೀನಗರ,ಋಷಿಕೇಶ, ಜಾಲಿಗ್ರಾಂಟ್ ಮತ್ತು ಡೆಹ್ರಾಡೂನ್‌ನ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

7. ಮೊದಲಿಗೆ ಐದು ಎನ್‌ಡಿಆರ್‌ಎಫ್ ತಂಡಗಳನ್ನು ಸಜ್ಜುಗೊಳಿಸಲಾಗಿತ್ತು. ಭಾನುವಾರ ಸಂಜೆ ವೇಳೆಗೆ ಗಾಜಿಯಾಬಾದ್‌ನ ಹಿಂಡನ್ ವಾಯುಪಡೆಯ ನೆಲೆಯಿಂದ ಐದು ಟನ್ ಪರಿಹಾರ ಸಾಧನಗಳೊಂದಿಗೆ ಇನ್ನೂ ಮೂರು ತಂಡಗಳನ್ನು ಕಳುಹಿಸಲಾಗಿದೆ. ಡೆಹ್ರಾಡೂನ್‌ನಿಂದ ಜೋಶಿಮಠಕ್ಕೂ ವಿಮಾನದಲ್ಲಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಎರಡು ಐಟಿಬಿಪಿ ತಂಡಗಳು ಮತ್ತು ಹಲವಾರು ಎಸ್‌ಡಿಆರ್‌ಎಫ್ ತಂಡಗಳನ್ನು ಸಹ ಸಜ್ಜುಗೊಳಿಸಲಾಗಿದೆ. ಸೇನೆಯು ಆರು ಕಾಲಮ್‌ಗಳನ್ನು ಕಳುಹಿಸಿದ್ದು, ಪ್ರತಿಯೊಂದರಲ್ಲೂ 100 ಸೈನಿಕರು, ಜೊತೆಗೆ ವೈದ್ಯಕೀಯ ತಂಡಗಳು ಮತ್ತು ಅರ್ಥ್ ಮೂವಿಂಗ್ ಸಾಧನಗಳು, ಎಂಜಿನಿಯರಿಂಗ್ ಕಾರ್ಯಪಡೆ. ನೌಕಾಪಡೆಯ ಏಳು ಡೈವಿಂಗ್ ತಂಡಗಳನ್ನು ಸಹ ನಿಯೋಜಿಸಲಾಗಿದೆ.

8. ವಿದ್ಯುತ್ ಸ್ಥಾವರಕ್ಕಿಂತ ಕೆಳಗಿರುವ ಕಿರಿದಾದ ಕಣಿವೆಯ ಮೂಲಕ ಬೃಹತ್ ಪ್ರಮಾಣದ ನೀರು ಹರಿದುಹೋಗುವ ದೃಶ್ಯ ವಿಡಿಯೊ ಮತ್ತು ಚಿತ್ರಗಳಲ್ಲಿ ಕಂಡುಬಂದಿವೆ. ಈ ಪ್ರವಾಹದಲ್ಲಿ ರಸ್ತೆಗಳು ಮತ್ತು ಸೇತುವೆಗಳು ನಾಶವಾಗಿವೆ. ಪ್ರವಾಹದ ನೀರು ಋಷಿಕೇಶ ಮತ್ತು ಹರಿದ್ವಾರ ತಲುಪುವುದನ್ನು ತಡೆಯುವ ಉದ್ದೇಶದಿಂದ ಅಧಿಕಾರಿಗಳು ಎರಡು ಅಣೆಕಟ್ಟುಗಳನ್ನು ಖಾಲಿ ಮಾಡಿದ್ದಾರೆ. ಜನರಿಗೆ ಗಂಗಾ ನದಿ ತೀರಗಳ ಬಳಿ ಹೋಗದಂತೆ ನಿರ್ಬಂಧಿಸಲಾಗಿದೆ.

9. ಜೂನ್ 2013 ರಲ್ಲಿ ಮೇಘಸ್ಫೋಟದ ಪರಿಣಾಮ ಉತ್ತರಾಖಂಡದ ಕೇದಾರನಾಥದಲ್ಲಿ ಭಾರಿ ಪ್ರಮಾಣದ ಕ್ಷಿಪ್ರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿದವು. 2004 ರ ಸುನಾಮಿಯ ನಂತರ ದೇಶದ ಭೀಕರ ನೈಸರ್ಗಿಕ ವಿಕೋಪದಲ್ಲಿ 5,700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

10. ಏರುತ್ತಿರುವ ಜಾಗತಿಕ ತಾಪಮಾನದಿಂದಾಗಿ 21 ನೇ ಶತಮಾನದ ಆರಂಭದಿಂದ ಹಿಮಾಲಯದ ಹಿಮನದಿಗಳ ಕರಗುವಿಕೆಯು ದ್ವಿಗುಣಗೊಂಡಿದೆ ಎಂದು 2019 ರಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ. ಭಾರತ, ಚೀನಾ, ನೇಪಾಳ ಮತ್ತು ಭೂತಾನ್‌ನಾದ್ಯಂತ 40 ವರ್ಷಗಳ ಆದ ಬದಲಾವಣೆಯನ್ನು ಉಪಗ್ರಹಗಳ ಮೂಲಕ ವೀಕ್ಷಣೆ ಮಾಡಿ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ, ಹವಾಮಾನ ಬದಲಾವಣೆಯು ಹಿಮಾಲಯದ ಹಿಮನದಿಗಳನ್ನು ಕರಗಿಸುತ್ತಿದೆ ಎಂದು ಅದು ಸೂಚಿಸುತ್ತದೆ. ಇದು ದೇಶಗಳಲ್ಲಿನ ಲಕ್ಷಾಂತರ ಜನರಿಗೆ ನೀರು ಸರಬರಾಜಿಗೆ ಆತಂಕವನ್ನು ತಂದೊಡ್ಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT