ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಬಾಂಗ್ಲಾ ನಡುವಿನ ‘ಮೈತ್ರಿ ಸೇತುʼ ಉದ್ಘಾಟನೆ

ವ್ಯಾಪಾರಕ್ಕೆ ರಾಜಕೀಯ ಗಡಿಗಳು ಅಡೆತಡೆಯಾಗಬಾರದು– ಹಸೀನಾ, ಮೋದಿ
Last Updated 9 ಮಾರ್ಚ್ 2021, 11:42 IST
ಅಕ್ಷರ ಗಾತ್ರ

ನವದೆಹಲಿ: ತ್ರಿಪುರಾದಲ್ಲಿರುವ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ‘ಫೆನಿ’ ನದಿಗೆ ಭಾರತ ನಿರ್ಮಿಸಿರುವ ‘ಮೈತ್ರಿ ಸೇತು‘ವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಮಂಗಳವಾರ ವಿಡಿಯೊ ಕಾನ್‌ಫರೆನ್ಸ್‌ ಮೂಲಕ ಉದ್ಘಾಟಿಸಿದರು.

‘ಈ ಸೇತುವೆ ಉಭಯ ದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುತ್ತದೆ‘ ಎಂದು ಪ್ರಧಾನಿ ಮೋದಿ ಹೇಳಿದರೆ, ‌‘ವ್ಯಾಪಾರ ವಹಿವಾಟಿಗೆ ರಾಜಕೀಯ ಗಡಿಗಳು ಭೌತಿಕ ಅಡೆತಡೆಗಳಾಗಿರಬಾರದು‘ ಎಂದು ಹಸೀನಾ ಅಭಿಪ್ರಾಯಪಟ್ಟರು.

‘ನಾವು ಭಾರತದೊಂದಿಗೆ ಸಂಪರ್ಕ ಬೆಳೆಸುವ ಮೂಲಕ ದಕ್ಷಿಣ ಏಷ್ಯಾದಲ್ಲಿ ಹೊಸ ಯುಗವನ್ನು ಸೃಷ್ಟಿ ಮಾಡುತ್ತಿದ್ದೇವೆ‘ ಎಂದು ಹಸೀನಾ ತಿಳಿಸಿದರು.

‘ಮೈತ್ರಿ ಸೇತು‘ವೆಯಿಂದಾಗಿ ನಮ್ಮ ದೇಶ ನೇಪಾಳ ಮತ್ತು ಭೂತಾನ್‌ನೊಂದಿಗಿನ ವ್ಯಾಪಾರ ವಹಿವಾಟಿಗೆ ನೆರವಾಗುತ್ತದೆ. ಈ ಪ್ರದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ವಿಸ್ತಾರಗೊಳ್ಳುತ್ತವೆ‘ ಎಂದೂ ಅವರು ಹೇಳಿದರು.

ಈ 1.9 ಕಿ.ಮೀ.ಉದ್ದದ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ₹ 133 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಇದು ಭಾರತದ ಸಬ್ರೂಮ್ ಮತ್ತು ಬಾಂಗ್ಲಾದೇಶದ ರಾಮಗಡವನ್ನು ಸಂಪರ್ಕಿಸುತ್ತದೆ. ಸಬ್ರೂಮ್‌ ಮತ್ತು ಬಾಂಗ್ಲಾದ ಚಿತ್ತಗಾಂಗ್ ಬಂದರಿನ ನಡುವಿನ ಅಂತರ ಇದೀಗ 80 ಕಿ.ಮೀ.ಗೆ ಇಳಿಕೆಯಾಗಿದೆ.

ಡಬ್ಬಲ್‌ ಎಂಜಿನ್‌ ಸರ್ಕಾರ:‘ಡಬ್ಬಲ್ ಎಂಜಿನ್‌ ಸರ್ಕಾರ ಇಲ್ಲದಿರುವ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ನೀವು ನೆರೆ–ಹೊರೆಯ ರಾಜ್ಯಗಳತ್ತ ನೋಡಬಹುದು. ಆ ರಾಜ್ಯಗಳಲ್ಲಿ ಬಡವರು, ರೈತರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವಂತಹ ನೀತಿಗಳಿಲ್ಲ. ಇದ್ದರೂ ಬಹಳ ನಿಧಾನವಾಗಿ ಅನುಷ್ಠಾನವಾಗುತ್ತಿವೆ‘ ಎಂದು ಪ್ರಧಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT