ಸಿಎಂ ಮಮತಾರನ್ನು ಕೆಳಗಿಳಿಸಲು ರಾವತ್ ರಾಜೀನಾಮೆಯೆಂಬ ಬಿಜೆಪಿಯ ನೈತಿಕ ದಾಳ?

ನವದೆಹಲಿ: ರಾಜ್ಯ ವಿಧಾನಸಭೆಗೆ ನಿಗದಿತ ಅವಧಿಯಲ್ಲಿ ನಿಯಮಾನುಸಾರ ಆಯ್ಕೆಯಾಗದ ಕಾರಣ ತೀರತ್ ಸಿಂಗ್ ರಾವತ್ ಅವರು ನಾಲ್ಕೇ ತಿಂಗಳಲ್ಲಿ ಉತ್ತಾರಖಂಡದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ ಎಲ್ಲರ ಚಿತ್ತವೀಗ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಮಮತಾ ಬ್ಯಾನರ್ಜಿ ರಾಜ್ಯ ಸರ್ಕಾರದ ಪ್ರಮುಖ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದವರಿಯಬೇಕಿದ್ದರೆ ಮಮತಾ ಇನ್ನು ನಾಲ್ಕು ತಿಂಗಳಲ್ಲಿ ಉಪಚುನಾವಣೆ ಎದುರಿಸಿ ಆಯ್ಕೆಯಾಗಬೇಕಿದೆ.
ಉತ್ತರಾಖಂಡದಲ್ಲಿ ಕೋವಿಡ್-19 ಹಿನ್ನೆಲೆ ಚುನಾವಣಾ ಆಯೋಗವು ಉಪಚುನಾವಣೆ ನಡೆಸುವ ಸಾಧ್ಯತೆಗಳು ಕಡಿಮೆಯಾಗಿರುವುದರಿಂದ ರಾವತ್ ರಾಜೀನಾಮೆ ನೀಡಬೇಕಾದ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿತ್ತು. ಮಾರ್ಚ್ 10ರಂದು ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ರಾವತ್ ಸೆಪ್ಟಂಬರ್ 10ರೊಳಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಬೇಕಿತ್ತು.
ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಅಂತರದಲ್ಲಿ ಜಯ ಸಾಧಿಸಿತ್ತು. ಆದರೆ ಸಿಎಂ ಅಭ್ಯರ್ಥಿಯಾಗಿದ್ದ ಮಮತಾ ಬ್ಯಾನರ್ಜಿ ಅವರೇ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮದಲ್ಲಿ ಸೋಲನುಭವಿಸಿದ್ದರು. ಪರಾಭವದ ನಡುವೆಯೇ ಪಕ್ಷವನ್ನು ಅಧಿಕಾರಕ್ಕೆ ತಂದ ಹಿರಿಮೆಯಲ್ಲಿ ಮಮತಾ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು.
Explainer: ಐಎಂಡಿಬಿ ಟಾಪ್ 250ರ ಪಟ್ಟಿಯಲ್ಲಿ ಇರೋದೇ ಕನ್ನಡದ ಎರಡು ಚಿತ್ರಗಳು!
ನಿಯಮಾನುಸಾರ ಮುಂದಿನ 6 ತಿಂಗಳ ಅವಧಿಯಲ್ಲಿ ತಮ್ಮ ಸ್ವಕ್ಷೇತ್ರ ಭವಾನಿಪುರದಲ್ಲಿ ಸ್ಪರ್ಧಿಸಲು ಮಮತಾ ಸಿದ್ಧತೆ ನಡೆಸಿದ್ದಾರೆ. ಅಲ್ಲಿನ ಶಾಸಕ ಶೋಭಾನ್ ದೇವ್ ಚಟ್ಟೋಪಾಧ್ಯಾಯ ರಾಜೀನಾಮೆ ನೀಡುವ ಮೂಲಕ ತಮ್ಮ ನೆಚ್ಚಿನ ನಾಯಕಿಗಾಗಿ ಕ್ಷೇತ್ರವನ್ನೂ ಬಿಟ್ಟುಕೊಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಒಟ್ಟು 7 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಿದೆ. ಉಪಚುನಾವಣೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರ ಒತ್ತಾಯಿಸುತ್ತಿದೆ. ಚುನಾವಣಾ ಪ್ರಕ್ರಿಯೆ ವೇಳೆ ಕೋವಿಡ್-19 ನಿಯಮಗಳನ್ನು ಪಾಲಿಸುವುದಾಗಿಯೂ ಭರವಸೆ ನೀಡಿದೆ.
ಬಾಲಿವುಡ್ ನಟ ಅಮೀರ್ ಖಾನ್-ಕಿರಣ್ ರಾವ್ ದಂಪತಿ ವಿಚ್ಛೇದನಕ್ಕೆ ನಿರ್ಧಾರ
ರಾವತ್ ರಾಜೀನಾಮೆ ಎಂಬ ನೈತಿಕತೆಯ ದಾಳ:
ಉತ್ತರಾಖಂಡದಲ್ಲಿ ರಾವತ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತು. ಆದರೆ ಮಮತಾ ಬ್ಯಾನರ್ಜಿ ಅವರು ನಿಯಮಾನುಸಾರ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದನ್ನು ತಪ್ಪಿಸಲು ಬಿಜೆಪಿ ರಾವತ್ ಅವರ ರಾಜೀನಾಮೆ ಎಂಬ ನೈತಿಕತೆಯ ದಾಳ ಉರುಳಿಸಿದೆ ಎಂದು ಕಾಂಗ್ರೆಸ್‌ನ ಕರಣ್ ಮಹರಾ ವಿಶ್ಲೇಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಸವಾಲು ಹಾಕಿದ್ದರು. ಯಾವದೇ ಸವಾಲುಗಳನ್ನು ಪ್ರಧಾನಿ ಸಹಿಸಿಕೊಳ್ಳುವುದಿಲ್ಲವೆಂದು ಗೊತ್ತಿದೆ. ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ಏನಾಯಿತು ಎಂಬುದು ಗೊತ್ತಿದೆ ಎಂದು ಮಹರಾ ತಿಳಿಸಿದ್ದಾರೆ.
ಮಮತಾಗೆ ಮುಖಭಂಗವನ್ನುಂಟು ಮಾಡುವ ತಂತ್ರ:
ಮಮತಾ ಬ್ಯಾನರ್ಜಿ ಅವರಿಗೆ ಮುಖಭಂಗವನ್ನುಂಟು ಮಾಡಲು ಬಿಜೆಪಿ ತಂತ್ರ ರೂಪಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೋವಿಡ್-19 ಕಾರಣ ಕೊಟ್ಟು ಉಪ ಚುನಾವಣೆಯನ್ನು ಮುಂದೂಡಿದರೆ ಮಮತಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಉಪಚುನಾವಣೆ ನಡೆದರೆ ಮಮತಾ ಮರು ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಉಪಚುನಾವಣೆಯೇ ನಡೆಯದಂತೆ ಮಾಡಲು ಕೋವಿಡ್-19 ಮತ್ತು ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಭಾರತದ ಬಹು ನಿರೀಕ್ಷಿತ ಚಿತ್ರ: 1ನೇ ಸ್ಥಾನಕ್ಕೇರಿದ 'ಪುಷ್ಪ'
ಕಾನೂನು ಏನು ಹೇಳುತ್ತದೆ?
ಸಂವಿಧಾನದ ಆರ್ಟಿಕಲ್ 164(4) ಪ್ರಕಾರ ವಿಧಾನಸಭೆಯ ಸದಸ್ಯನಾಗಿರದೆ ಆರು ತಿಂಗಳು ಯಾವುದೇ ಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅವಕಾಶವಿದೆ. ಆ ಅವಧಿ ಪೂರ್ಣಗೊಂಡರೆ ಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು. 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 'ಎ' ಅನ್ವಯ ಸಂಸತ್ ಅಥವಾ ರಾಜ್ಯ ವಿಧಾನಸಭೆಗಳ ಖಾಲಿ ಉಳಿದಿರುವ ಸ್ಥಾನಗಳನ್ನು 6 ತಿಂಗಳ ಒಳಗೆ ಉಪಚುನಾವಣೆ ಮೂಲಕ ಭರ್ತಿ ಮಾಡಬೇಕು. ಇದರಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಗೊಂಡು ಮಂತ್ರಿ ಸ್ಥಾನದಲ್ಲಿ ಮುಂದುವರಿಯಬಹುದು. ಆದರೆ ಆಯ್ಕೆಯಾದ ಮೇಲೆ ಒಂದು ವರ್ಷದ ಒಳಗಾಗಿ ಸಾರ್ವತ್ರಿಕ ಚುನಾವಣೆಗಳು ಇರಬಾರದು ಎಂಬ ನಿಯಮವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.