ಬುಧವಾರ, ಜೂನ್ 23, 2021
30 °C

ಪಶ್ಚಿಮ ಬಂಗಾಳ ವಿಧಾನಸಭೆ: 7ನೇ ಹಂತದಲ್ಲಿ ಶೇ 75ರಷ್ಟು ಮತದಾನ; ಕೆಲವೆಡೆ ಹಿಂಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಗೆ ಸೋಮವಾರ ನಡೆದ ಏಳನೇ ಹಂತದ ಮತದಾನದ ಸಂದರ್ಭದಲ್ಲಿ ಕೆಲವೆಡೆ ಹಿಂಸಾಚಾರವಾಗಿದೆ. ಸಂಜೆ 5 ಗಂಟೆಯ ಹೊತ್ತಿಗೆ ಶೇ 75.06ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. 

ಅಸನ್ಸೋಲ್‌ ದಕ್ಷಿಣ ಕ್ಷೇತ್ರದಲ್ಲಿ ತನ್ನ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಟಿಎಂಸಿ ಅಭ್ಯರ್ಥಿ ಸಾಯನಿ ಘೋಷ್‌ ಅವರು ಸ್ಥಳಕ್ಕೆ ಧಾವಿಸಿ, ಪೊಲೀಸ್‌ ಅಧಿಕಾರಿಗಳ ಜತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. 

ಬಿಜೆಪಿ ಕಾರ್ಯಕರ್ತರು ಇಲ್ಲಿ ಮತದಾನ ಸ್ಥಗಿತಕ್ಕೆ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪವನ್ನು ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್‌ ನಿರಾಕರಿಸಿದ್ದಾರೆ.

‘ಸೋಲು ಸನ್ನಿಹಿತ ಎಂಬುದು ಖಚಿತವಾದ ಕಾರಣ ಘೋಷ್‌ ಅವರು ಇಂತಹ ಆಧಾರರಹಿತ ಆರೋಪ ಮಾಡುತ್ತಿದ್ದಾರೆ’ ಎಂದಿದ್ದಾರೆ. 

ಕೋಲ್ಕತ್ತದ ರಶ್‌ಬರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೆ. ಜ. (ನಿವೃತ್ತ) ಸುಬ್ರತಾ ಸಹಾ ಅವರ ಏಜೆಂಟ್‌ ಮೋಹನ್ ರಾವ್‌ ಅವರನ್ನು ಮತಗಟ್ಟೆಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತಗಟ್ಟೆಯೊಳಗೆ ಈ ವ್ಯಕ್ತಿಯು ತಮ್ಮ ಕೈ ಹಿಡಿದರು ಮತ್ತು ತಮ್ಮತ್ತ ಸೆಳೆದುಕೊಂಡರು ಎಂದು ಹಲವು ಮಹಿಳೆಯರು ಆರೋಪಿಸಿದ್ದಾರೆ. ರಾವ್‌ ಅವರು ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. 

ರಶ್ನಿಹರಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ. ಬಿಜೆಪಿಗೆ ಮತ ಹಾಕುವಂತೆ ಕೇಂದ್ರೀಯ ಪಡೆಗಳು ಮತದಾರರಿಗೆ ಹೇಳಿವೆ ಎಂದು ಟಿಎಂಸಿ ಆರೋಪಿಸಿದ್ದು ಈ ಸಂಘರ್ಷಕ್ಕೆ ಕಾರಣ. ಮಾಲ್ಡಾ ಜಿಲ್ಲೆಯ ಮಾಲತಿಪುರ ಕ್ಷೇತ್ರದ ಮತಗಟ್ಟೆಯ ಏಜೆಂಟ್‌ ಒಬ್ಬರಿಗೆ ಕೇಂದ್ರೀಯ ಪಡೆ ಥಳಿಸಿದೆ ಎಂದು ಟಿಎಂಸಿ ಆರೋಪಿಸಿದೆ. ತಕ್ಷಣವೇ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ, ಕೈ ಕೈ ಮಿಲಾಯಿಸಿದರು. ಕೋಲ್ಕತ್ತ ಪೋರ್ಟ್‌ ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲೆಸೆದಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 

ಮತದಾರರಿಗೆ ನೀಡಿದ ಸ್ಲಿಪ್‌ ಅನ್ನು ಕಾಂಗ್ರೆಸ್‌ ಕಾರ್ಯಕರ್ತರು ಹರಿದು ಹಾಕಿದ್ದಾರೆ ಎಂದು ಟಿಎಂಸಿಯ ಹಿರಿಯ ಮುಖಂಡ ಫಿರ್ಹಾದ್‌ ಹಕೀಮ್‌ ಆರೋಪಿಸಿದ್ದಾರೆ. ಹಾಗೆ ಹರಿದು ಹಾಕುತ್ತಿದ್ದರು ಎನ್ನಲಾದ ವ್ಯಕ್ತಿಯೊಬ್ಬರನ್ನು ಹಕೀಮ್‌ ಅವರು ಓಡಿಸಿದ್ದಾರೆ. ಆದರೆ, ಈ ಆರೋಪವನ್ನು ಕಾಂಗ್ರೆಸ್‌ ಅಲ್ಲಗಳೆದಿದೆ. 

ಮುರ್ಷಿದಾಬಾದ್‌ ಜಿಲ್ಲೆಯ ರಾಣಿನಗರ ಕ್ಷೇತ್ರದ ತನ್ನ ಅಭ್ಯರ್ಥಿಯ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆಯುಧಗಳನ್ನು ಹೊಂದಿದ್ದ ದುಷ್ಕರ್ಮಿಗಳು ಅಭ್ಯರ್ಥಿಯನ್ನು ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದ್ದರು ಎಂದೂ ಹೇಳಿದೆ. ಆದರೆ, ಇಂತಹ ಘಟನೆಯೇ ನಡೆದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಕೇಂದ್ರೀಯ ಪಡೆಗಳ ತೆರವಿಗೆ ಮಮತಾ ಆಗ್ರಹ
ಕೋಲ್ಕತ್ತ: ಕೋವಿಡ್‌ ಹರಡುವುದನ್ನು ತಡೆಯುವುದಕ್ಕಾಗಿ ಪಶ್ಚಿಮ ಬಂಗಾಳದಿಂದ ಕೇಂದ್ರೀಯ ಪಡೆಗಳನ್ನು ತೆರವು ಮಾಡಬೇಕು ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. 

‘ರಾಜ್ಯದಲ್ಲಿ ಕೇಂದ್ರೀಯ ಪಡೆಗಳ ಸುಮಾರು 2 ಲಕ್ಷ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಕೋವಿಡ್‌ ಬಾಧಿತ ರಾಜ್ಯಗಳಿಂದ ಬಂದವರು. ಅವರು ಶಾಲೆ, ಕಾಲೇಜು ಮತ್ತು ಸುರಕ್ಷಿತ ಸ್ಥಳಗಳಲ್ಲಿ ತಂಗಿದ್ದಾರೆ. ಅವರಲ್ಲಿ ಶೇ 75ರಷ್ಟು ಸಿಬ್ಬಂದಿಗೆ ಸೋಂಕು ಇರಬಹುದು. ಕೊನೆಯ ಹಂತದ ಮತದಾನದಿಂದಲಾದರೂ ಅವರನ್ನು ಹೊರಗೆ ಇಡಿ’ ಎಂದು ಮಮತಾ ಕೋರಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು