ಬುಧವಾರ, ಅಕ್ಟೋಬರ್ 21, 2020
21 °C

ದೇಗುಲ ಭೂ ಕಬಳಿಕೆಗೆ ದುಷ್ಕರ್ಮಿಗಳ ಯತ್ನ: ರಾಜಸ್ಥಾನದಲ್ಲಿ ಅರ್ಚಕ ಸಜೀವ ದಹನ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನದ ಕರೌಲಿ ಜಿಲ್ಲೆಯ ದೇವಾಲಯದ ಭೂಮಿಯನ್ನು ಅತಿಕ್ರಮಿಸಲು ಮುಂದಾಗಿದ್ದ ಐವರು ಆರೋಪಿಗಳು ಬೆಂಕಿ ಹಚ್ಚಿದ್ದ ಅರ್ಚಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬುಕ್ನಾ ಗ್ರಾಮದಲ್ಲಿ ಬುಧವಾರ ಐವರು ಆರೋಪಿಗಳು ಅರ್ಚಕ ಬಾಬು ಲಾಲ್ ವೈಷ್ಣವ್ ಎಂಬುವವರ ಮೇಲೆ ಪೆಟ್ರೊಲ್ ಎರಚಿ ಬೆಂಕಿ ಹಚ್ಚಿದ್ದರು. ಗಂಭೀರ ಪರಿಸ್ಥಿತಿಯಲ್ಲಿದ್ದ ಅರ್ಚಕರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಗುರುವಾರ ರಾತ್ರಿ ವೈಷ್ಣವ್ ಮೃತಪಟ್ಟರು.

ಈ ಸಂಬಂಧ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಕರೌಲಿಯ ಎಸ್‌ಪಿ ಮೃದುಲ್ ಕಚವಾ ತಿಳಿಸಿದ್ದಾರೆ.

ದೇವಾಲಯದ ಭೂಮಿಯನ್ನು ಅತಿಕ್ರಮಿಸಲು ಆರೋಪಿಗಳು ಬಯಸಿದ್ದರು. ಅವರ ವಿರುದ್ಧ ನಿನ್ನೆ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿತ್ತು. ಅರ್ಚಕರ ಮರಣದ ನಂತರ ಅದನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ವಿರೋಧ ಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದೆ.

ಮುಕ್ತವಾಗಿ ಸಂಚರಿಸುತ್ತಿರುವ ಅಪರಾಧಿಗಳಲ್ಲಿ ಕಾನೂನಿನ ಭಯವಿಲ್ಲ. ಆದರೆ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಮುಖ್ಯಮಂತ್ರಿಯೇ ಗೃಹ ಖಾತೆಯನ್ನು ಹಿಡಿದಿಟ್ಟುಕೊಂಡಿರುವುದರಿಂದ ಇಂಥ ಪರಿಸ್ಥಿತಿ ಉದ್ಭವವಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಸತೀಶ್ ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ರೀತಿಯನ್ನು ನೋಡಿದರೆ ರಾಜ್ಯದಲ್ಲಿ ಯಾವುದೇ ಮಹಿಳೆ, ಮಗು, ವೃದ್ಧರು ಅಥವಾ ದಲಿತರು ಸುರಕ್ಷಿತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದಿದ್ದಾರೆ.

'ಪೊಲೀಸರು ಈಗಾಗಲೇ ಪ್ರಮುಖ ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ' ಎಂದು ರಾಜಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ದೊತಸ್ರಾ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು