ಗುರುವಾರ , ಜೂನ್ 17, 2021
23 °C
ಟಿಕ್ರಿ, ಘಾಜಿಪುರದಲ್ಲಿ ಲಸಿಕಾ ಕೇಂದ್ರ ತೆರೆಯಲು ಒತ್ತಾಯ

ಕೋವಿಡ್ ಭೀತಿ: ಕಷಾಯ, ಪಾನಕಕ್ಕೆ ಮೊರೆಹೋಗಿರುವ ಪ್ರತಿಭಟನಾನಿರತ ರೈತರು

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಸಿ ಕಷಾಯ ಮತ್ತು ಲಿಂಬೆಹಣ್ಣಿನ ಪಾನಕ– ಇವು ದೆಹಲಿಯ ಮೂರು ಗಡಿಗಳಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ರೈತರು ನೆಚ್ಚಿಕೊಂಡಿರುವ ಪೇಯಗಳಾಗಿವೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸುಮಾರು ಆರು ತಿಂಗಳಿಂದ ಹೋರಾಟ ನಡೆಸುತ್ತಿರುವ ರೈತರು ಈಗ ಕೋವಿಡ್‌ ಸಾಂಕ್ರಾಮಿಕ ಅಬ್ಬರಿಸುತ್ತಿರುವ ಸನ್ನಿವೇಶದಲ್ಲಿ ದೇಹಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುವುದಕ್ಕೆ ಆದ್ಯತೆ ನೀಡಿದ್ದಾರೆ.

ಸೋಂಕಿಗೆ ಕೆಲವರು ಜೀವಕಳೆದುಕೊಂಡಿದ್ದಾರೆ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಪ್ರತಿಭಟನಾನಿರತ ರೈತರಲ್ಲಿ ಹೆಚ್ಚಿನವರು ಸೋಂಕಿನ ವಿರುದ್ಧ ಪ್ರತಿರೋಧ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಪೇಯಗಳ ಜೊತೆ ಮಲ್ಟಿ ವಿಟಾಮಿನ್‌ ಮತ್ತು ಸತುವಿನ ಅಂಶದ ಟ್ಯಾಬ್ಲೆಟ್‌ಗಳನ್ನು ಸೇವಿಸುತ್ತಿದ್ದಾರೆ.

ಓದಿ: 

ಮೂರು ಕೃಷಿ ಕಾಯ್ದೆಗಳನ್ನು ತೆಗೆದುಹಾಕಬೇಕೆಂಬ ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಕದಲದಿರಲೂ ಅವರು ಪಣ ತೊಟ್ಟಿದ್ದಾರೆ. ಜೊತೆಗೆ ಲಸಿಕೆ ತೆಗೆದುಕೊಳ್ಳುವುದಕ್ಕೆ ತಾವು ಸಿದ್ಧರಿದ್ದೇವೆ ಎಂದೂ ಹೇಳುತ್ತಿದ್ದಾರೆ. ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟ ಕೆಲವರನ್ನು ಅಲ್ಲಿಂದ ಬಲವಂತವಾಗಿ ಕಳುಹಿಸಲಾಗಿದೆ. ಲಕ್ಷಣಗಳಿರುವ ಕೆಲವರು ಚಿಕಿತ್ಸೆಗೆ ಒಳಗಾಗಿದ್ದಾರೆ.

ಇನ್ನೂ ನೂರಾರು ಮಂದಿ ರೈತರು ಪ್ರತಿಭಟನಾ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ಹೆಚ್ಚಿನವರು ಪಂಜಾಬ್‌ಗೆ ಸೇರಿದವವರು. ಇವರ ಜೊತೆಗೆ ಹರಿಯಾಣ, ಉತ್ತರಪ್ರದೇಶದ ರೈತರೂ ಸೇರಿಕೊಂಡಿದ್ದಾರೆ.

ಓದಿ: 

‘ಸಿಂಘು ಗಡಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಲ್ಲ. ರೈತರು ಕಷಾಯ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಚಿಂತೆಗೆ ಕಾರಣವಾಗುವ ವಿಷಯಗಳೇನೂ ಇಲ್ಲ’ ಎಂದು ರೈತ ಸುಕ್ವಿಂದರ್‌ ಸಿಂಗ್‌ ತಿಳಿಸಿದರು.

ಸಿಂಘು ಗಡಿಯ ಬಳಿಯಿರುವ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಪಂಜಾಬ್‌ನ ರೈತ ಕುಲವಂತ್‌ ಸಿಂಗ್‌ ಹೇಳಿದರು.

‘ನಮ್ಮ ಮುಖಂಡರೊಬ್ಬರಿಗೆ ಕೋವಿಡ್‌ ದೃಢಪಟ್ಟಿತ್ತು. ಈಗ ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಲಕ್ಷಣ ಕಂಡುಬರುವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರೈತರು ಆರೋಗ್ಯಯುತ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ. ಕೆಲವರು ಲಸಿಕೆ ಪಡೆಯುತ್ತಿದ್ದಾರೆ. ನಾನೂ ಮೊದಲ ಡೋಸ್‌ ಪಡೆದಿದ್ದೇನೆ’ ಎಂದು ಕುಲವಂತ್ ವಿವರಿಸಿದರು.

ಟಿಕ್ರಿ ಮತ್ತು ಘಾಜಿಪುರದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ರೈತರು ಲಸಿಕಾ ಕೇಂದ್ರದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಗೆ ಸರ್ಕಾರ ಪ್ರತಿಕ್ರಿಯಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

‘ಟಿಕ್ರಿ ಗಡಿಯಲ್ಲಿ ಲಸಿಕಾ ಕೇಂದ್ರ ತೆರೆಯುವಂತೆ ನಾವು ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ. ಆದರೆ ಇದುವರೆಗೆ ಏನೂ ಆಗಿಲ್ಲ’ ಎಂದು ಮತ್ತೊಬ್ಬ ರೈತ ನಾಯಕ ಬೂಟಾ ಸಿಂಗ್‌ ಹೇಳಿದರು. ಟಿಕ್ರಿಯಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದರು.

ಓದಿ: 

ದೆಹಲಿ –ಉತ್ತರಪ್ರದೇಶ ಗಡಿಯಲ್ಲಿರುವ ಘಾಜಿಪುರದಲ್ಲೂ ಪ್ರತಿಭಟನೆ ನಡೆಯುತ್ತಿದೆ. ಇಲ್ಲಿ ಹೋರಾಟದ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು), ಅಂತರ ಕಾಪಾಡುವ ಉದ್ದೇಶದಿಂದ 500 ಮಂಚಗಳ ವ್ಯವಸ್ಥೆ ಮಾಡಿದೆ. ಪ್ರತಿಭಟನಕಾರರು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕಷಾಯ ಸೇವನೆ ಮಾಡುತ್ತಿದ್ದಾರೆ.

‘ಇಲ್ಲಿ ಇದುವರೆಗೆ ಕೋವಿಡ್‌ ಪ್ರಕರಣಗಳು ಕಂಡುಬಂದಿಲ್ಲ. ಕೆಲವರಿಗೆ ಆರೋಗ್ಯಸಮಸ್ಯೆ ಕಂಡುಬಂದರೂ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಎಲ್ಲರೂ ಕಷಾಯ, ಶರಬತ್ತು ಕುಡಿಯುತ್ತಿದ್ದಾರೆ’ ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಮಲಿಕ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು