ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಚುನಾವಣೆ: ಯಾರ ಪರವೂ ಇಲ್ಲ ಅಲೆ, ಎಎಪಿ ಹೆಚ್ಚು ಸ್ಥಾನದ ನಿರೀಕ್ಷೆ

ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಸಾಹಸ
Last Updated 10 ಜನವರಿ 2022, 4:11 IST
ಅಕ್ಷರ ಗಾತ್ರ

ಚಂಡೀಗಡ: ನಿರುದ್ಯೋಗ, ಧರ್ಮಕ್ಕೆ ಅಪಮಾನ ಮಾಡಿದ ಪ್ರಕರಣಗಳಲ್ಲಿ ನ್ಯಾಯದಾನ ವಿಳಂಬ, ಮರಳು ಅಕ್ರಮ ಗಣಿಗಾರಿಕೆ ಮತ್ತು ಮಾದಕ ವಸ್ತು ಮಾಫಿಯಾ... ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿಇವು ಮುಖ್ಯ ವಿಷಯಗಳಾಗುವ ಸಾಧ್ಯತೆ ಹೆಚ್ಚು.

ಆಮ್‌ ಆದ್ಮಿ ಪಕ್ಷವು (ಎಎಪಿ) ಜನಮನ್ನಣೆಯಲ್ಲಿ ಇತರ ಪಕ್ಷಗಳಿಗಿಂತ ಮುಂದೆ ಇರುವಂತೆ ಈಗ ಕಾಣಿಸುತ್ತಿದೆ. ರೈತರ ಹಲವು ಸಂಘಟನೆಗಳು ಕೂಡ ಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಹಲವು ಸಮಸ್ಯೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟು ತೋರಿಸಲು ಈವರೆಗೆ ಸಾಧ್ಯವಾಗಿಲ್ಲ.

ಕೃಷಿ ಕಾಯ್ದೆಗಳ ವಿಚಾರದಲ್ಲಿ ಬಿಜೆಪಿ ಜತೆ ಮುನಿಸಿಕೊಂಡು ಎನ್‌ಡಿಎಯಿಂದ ಹೊರ ಬಂದ ಶಿರೋಮಣಿ ಅಕಾಲಿ ದಳವು (ಎಸ್‌ಎಡಿ) ಈಗ ಬಿಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಸುಖದೇವ್ ಸಿಂಗ್ ಧಿಂಡ್ಸಾ ಅವರ ಎಸ್‌ಎಡಿ (ಸಂಯುಕ್ತ) ಮತ್ತು ಅಮರಿಂದರ್ ಸಿಂಗ್‌ ನೇತೃತ್ವದ ಪಂಜಾಬ್‌ ಲೋಕ ಕಾಂಗ್ರೆಸ್‌ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಕ್ಕಿಳಿಸಿದ ಕಾರಣಕ್ಕೆ ಅಮರಿಂದರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಇತ್ತೀಚೆಗೆ ಹೊಸ ಪಕ್ಷ ಕಟ್ಟಿದ್ದಾರೆ.

ರಾಜ್ಯದಲ್ಲಿ ಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯ ಲಿದೆ. ಮಾರ್ಚ್‌ 10ರಂದು ಮತ ಎಣಿಕೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ್ದ ಭರವಸೆ ಏನಾಗಿದೆ ಎಂದು ಇತರ ಪಕ್ಷಗಳು ಪ್ರಶ್ನಿಸುತ್ತಿವೆ. ನಿರುದ್ಯೋಗದ ಬಗ್ಗೆಯೂ ವಿರೋಧ ಪಕ್ಷಗಳು ಸರ್ಕಾರವನ್ನು ಗುರಿ ಮಾಡಿವೆ. ವಿವಿಧ ಇಲಾಖೆಗಳಲ್ಲಿ ಇರುವ ಗುತ್ತಿಗೆ ಮತ್ತು ತಾತ್ಕಾಲಿಕ ನೌಕರರನ್ನು ಕಾಂಗ್ರೆಸ್ ಸರ್ಕಾರವು ಕಾಯಂ ಮಾಡಿಲ್ಲ ಎಂಬ ಟೀಕೆಯೂ ಇದೆ.

36 ಸಾವಿರ ಗುತ್ತಿಗೆ ನೌಕರರನ್ನು ಕಾಯಂಗೊಳಿಸುವ ಮಸೂದೆಗೆ ಅಂಗೀ ಕಾರ ನೀಡದೇ ಇದ್ದರೆ ರಾಜ್ಯಪಾಲ ಭನ್ವರಿಲಾಲ್‌ ಪುರೋಹಿತ್‌ ವಿರುದ್ಧ ಧರಣಿ ನಡೆಸುವುದಾಗಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಹೇಳಿದ್ಧಾರೆ.

ಗುರು ಗ್ರಂಥ ಸಾಹಿಬ್‌ನ ಅವಹೇಳನ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಮತ್ತು ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದವರ ಮೇಲೆ ಗೋಲಿಬಾರ್‌ ಮಾಡಿದ್ದು ಚುನಾವಣಾ ಪ್ರಚಾರದಲ್ಲಿ ಪದೇ ಪದೇ ಕೇಳಿಸಬಹುದು. ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್ ಸಿಧು ಅವರು ಮುಖ್ಯಮಂತ್ರಿಯಾಗಿದ್ದ ಅಮರಿಂದರ್‌ ಸಿಂಗ್‌ ಅವರ ವಿರುದ್ಧ ಈ ವಿಚಾರದಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸಿದ್ದರು.

ಮಾದಕ ಪದಾರ್ಥ ಮಾಫಿಯಾ, ಮರಳು ಅಕ್ರಮ ಗಣಿಗಾರಿಕೆ, ರಾಜ್ಯದ ಸಾಲ ಏರಿಕೆ ಇತ್ಯಾದಿ ಕೂಡ ಪ್ರಚಾರದಲ್ಲಿ ಪ್ರಸ್ತಾವ ಆಗಬಹುದು. ಎಸ್‌ಎಡಿ ಮುಖಂಡ ಬಿಕ್ರಮ್‌ ಸಿಂಗ್ ಮಜೀತಿಯ ಅವರ ವಿರುದ್ಧ ಡ್ರಗ್ಸ್‌ ಪ್ರಕರಣವೊಂದು ಇತ್ತೀಚೆಗೆ ದಾಖಲಾಗಿದೆ. ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಸರ್ಕಾರದ ವಿರುದ್ಧ ಎಎಪಿ ಹರಿಹಾಯ್ದಿದೆ.

ಈ ಬಾರಿ ಹಲವು ಪಕ್ಷಗಳು ಪಂಜಾಬ್‌ ಚುನಾವಣಾ ಕಣದಲ್ಲಿವೆ. ಹಾಗಾಗಿ, ಅತ್ಯಂತ ಸಣ್ಣ ಅಂತರ ಕೂಡ ಅಭ್ಯರ್ಥಿಗಳ ಅದೃಷ್ಟ ಬದಲಾಯಿಸಬಹುದು. ಯಾವುದೇ ಪಕ್ಷದ ಪರವಾಗಿ ಸ್ಪಷ್ಟವಾದ ಅಲೆ ಎಲ್ಲಿಯೂ ಕಾಣಿಸುತ್ತಿಲ್ಲ. ಹಾಗಾಗಿ, ಎಲ್ಲ ಪಕ್ಷಗಳೂ ಮುಂದಿನ ಸರ್ಕಾರ ರಚಿಸುವುದಾಗಿ ಹೇಳಿಕೊಳ್ಳುತ್ತಿವೆ.ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಸದ್ಯವೇ ಘೋಷಿಸು ವುದಾಗಿ ಎಎಪಿ ಹೇಳಿದೆ. ಕಾಂಗ್ರೆಸ್‌ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಕಡಿಮೆ.

ಕೇಜ್ರಿವಾಲ್‌ ಅವರ ದೆಹಲಿ ಮಾದರಿ ಆಡಳಿತವನ್ನು ಎಎಪಿ ನೆಚ್ಚಿ ಕೊಂಡಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಇದು ಸರ್ಕಾರ ರಚಿಸುವಷ್ಟು ಮತಗಳನ್ನು ತಂದು ಕೊಟ್ಟಿರಲಿಲ್ಲ.

ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ 32ರಷ್ಟಿದೆ. ಈ ಮತಗಳ ಮೇಲೆ ಕಣ್ಣಿಟ್ಟೇ ಎಸ್‌ಎಡಿ, ಬಿಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಈವರೆಗೆ 23 ಕ್ಷೇತ್ರಗಳಲ್ಲಷ್ಟೇ ಸ್ಪರ್ಧಿಸುತ್ತಿತ್ತು. ಈ ಬಾರಿ ಎಲ್ಲೆಡೆ ತನ್ನ ಅಸ್ತಿತ್ವ ತೋರುವ ಉಮೇದಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT