ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಶೂಟೌಟ್: ಪಾಕ್ ಸ್ಮಗ್ಲರ್‌ಗಳಿಂದ 47ಕೆ.ಜಿ ಹೆರಾಯಿನ್ ಬಿಎಸ್‌ಎಫ್ ವಶಕ್ಕೆ

Last Updated 28 ಜನವರಿ 2022, 5:26 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನಲ್ಲಿ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ನಡೆದ ಶೂಟೌಟ್‌ನಲ್ಲಿ ಕಳ್ಳಸಾಗಣೆಯ ಪ್ರಮುಖ ಯತ್ನವನ್ನು ವಿಫಲಗೊಳಿಸಿರುವ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್), ಪಾಕಿಸ್ತಾನದ ಸ್ಮಗ್ಲರ್‌ಗಳಿಂದ 47 ಕೆ.ಜಿ ಹೆರಾಯಿನ್, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಪಂಜಾಬ್‌ನ ಗುರುದಾಸಪುರ ಸೆಕ್ಟರ್‌ನ ಭಾರತ-ಪಾಕ್ ಅಂತರರಾಷ್ಟ್ರೀಯ ಗಡಿ ಬಳಿಯಲ್ಲಿ ನಡೆದ ಘಟನೆಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಗಾಯಗೊಂಡಿದ್ದಾರೆ.

ಶುಕ್ರವಾರ ಮುಂಜಾನೆ 5.10ರ ಸುಮಾರಿಗೆ ಚಂದು ವಡಾಲಾ ಬಾರ್ಡರ್ ಪೋಸ್ಟ್ ಬಳಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್ ತಂಡವು ಅನುಮಾನಾಸ್ಪದ ಚಲನವಲನವನ್ನು ಗಮನಿಸಿ ಕಳ್ಳಸಾಗಣೆಯನ್ನು ತಡೆಯಲು ಯಶಸ್ವಿಯಾಗಿದೆ ಎಂದು ಬಿಎಸ್‌ಎಫ್ ಡಿಐಜಿ ಪ್ರಭಾಕರ ಜೋಶಿ ತಿಳಿಸಿದ್ದಾರೆ.

ಕಳ್ಳರು ಪಲಾಯನಗೈಯಲು ಯತ್ನಿಸಿದಾಗ ಯೋಧರು ಗುಂಡಿನ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಸ್ಮಗ್ಲರ್‌ಗಳು ನಡೆಸಿದ ಗುಂಡಿನ ದಾಳಿಗೆ ಬಿಎಸ್‌ಎಫ್ ಯೋಧ ಗಿಯಾನ್ ಸಿಂಗ್ ಯಾದವ್ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೆರಾಯಿನ್ ಜತೆಗೆ 0.30 ಕ್ಯಾಲಿಬರ್‌ನ 44 ರೌಂಡ್ ಮದ್ದುಗುಂಡು, 1 ಚೀನಾ ಪಿಸ್ತೂಲ್, 2 ಮ್ಯಾಗಜೀನ್, ಒಂದು ಬೆರೆಟ್ಟಾ ಪಿಸ್ತೂಲ್ ಮತ್ತು ಎಕೆ 47ನ 4 ಮ್ಯಾಗಜೀನ್ ವಶಪಡಿಸಿಕೊಳ್ಳಲಾಗಿದೆ.

ಗಡಿಯಾಚೆಗಿನ ಕಳ್ಳಸಾಗಣೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಎಸ್‌ಎಫ್, ಪಾಕಿಸ್ತಾನ ರೇಂಜರ್ಸ್ ಪಾಲುದಾರಿಕೆಯ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT