ಸೋಮವಾರ, ಸೆಪ್ಟೆಂಬರ್ 27, 2021
22 °C

ಪಂಜಾಬ್‌ ಕಾಂಗ್ರೆಸ್: ರಾಹುಲ್, ಪ್ರಿಯಾಂಕಾ ಭೇಟಿಯಾಗಲಿರುವ ನವಜೋತ್‌ ಸಿಂಗ್‌ ಸಿಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಢ: ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು, ಪಕ್ಷದ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮಂಗಳವಾರ (ಜೂನ್‌ 29) ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಎದುರಾಗಿರುವ ಆಂತರಿಕ ಕಲಹ ಪರಿಸ್ಥಿತಿಯ ನಡುವೆ ನವಜೋತ್‌ ಸಿಂಗ್‌ ಸಿಧು ಅವರ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. 2022ರಲ್ಲಿ ಪಂಜಾಬ್‌ನ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ರಾಹುಲ್‌ ಗಾಂಧಿ, ಪಕ್ಷದ ನಾಯಕರಿಂದ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಜೂನ್‌ 25ರಂದು ಸಚಿವರಾದ ಬ್ರಹ್ಮ ಮೊಹಿಂದ್ರಾ, ವಿಜಯ್‌ ಇಂದರ್ ಸಿಂಗ್ಲಾ, ಬಲ್ಬೀರ್‌ ಸಿಂಗ್‌ ಸಿಧು ಹಾಗೂ ರಾಜ್ಯ ಸಭಾ ಸದಸ್ಯ ಶಮ್ಶೀರ್‌ ಸಿಂಗ್‌ ದಲ್ಲೋ ಹಾಗೂ ಶಾಸಕ ಲಖವೀರ್‌ ಸಿಂಗ್‌ ಲಾಖಾ ಅವರೊಂದಿಗೆ ರಾಹುಲ್‌ ಗಾಂಧಿ ಪ್ರತ್ಯೇಕ ಸಭೆ ನಡೆಸಿದ್ದರು.

ಇದನ್ನೂ ಓದಿ: ನಾನು ಪ್ರದರ್ಶನ ಬೊಂಬೆಯಲ್ಲ: ಪಂಜಾಬ್‌ ಸಿಎಂ ವಿರುದ್ಧ ನವಜೋತ್ ಸಿಂಗ್ ಸಿಧು ಕಿಡಿ | Prajavani

ಈಗಾಗಲೇ ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸುನಿಲ್‌ ಜಖಾರ್‌ ಮತ್ತು ರಾಜ್ಯ ಸಭಾ ಸಂಸದ ಪ್ರತಾಪ್‌ ಸಿಂಗ್‌ ಬಾಜ್ವಾ ಅವರ ಭೇಟಿಯಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿತ್ತು. ಇದಕ್ಕೆ ಸಿಧು ಅವರ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದ ಅಮರಿಂದರ್ ಸಿಂಗ್, ಪ್ರಮುಖ ಖಾತೆಗಳನ್ನು ಅವರ ಬಳಿಯಿಂದ ವಾಪಸ್ ಪಡೆದಿದ್ದರು. ಬಳಿಕ ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ್ದರು.

ಪಕ್ಷದ ಒಳಜಗಳ ಸರಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಈ ಸಮಿತಿಯು ಸಿಧು ಅವರ ಪರ ನಿಲುವು ತಳೆದಿದ್ದಲ್ಲದೆ ಅವರಿಗೆ ಅವಕಾಶ ಕಲ್ಪಿಸಿ ಸಂಪುಟ ಪುನಾರಚನೆ ಮಾಡುವಂತೆ ಸೂಚಿಸಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಮತ್ತು ಮಾಜಿ ಸಂಸದ ಜೆ.ಪಿ.ಅಗರ್ವಾಲ್‌ ಅವರು ಸಮಿತಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು