ಶನಿವಾರ, ಮೇ 28, 2022
31 °C
ಚುನಾವಣೆ ಸಂದರ್ಭದಲ್ಲಿ ಕಾರ್ಯಾಚರಣೆ: ಐದು ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ

ಪಂಜಾಬ್‌: ಮುಖ್ಯಮಂತ್ರಿ ಚನ್ನಿ ಸಂಬಂಧಿಗೆ ಇ.ಡಿ ಶೋಧದ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೆಲವೇ ವಾರಗಳಲ್ಲಿ ವಿಧಾನಸಭೆಗೆ ಮತದಾನ ನಡೆಯಲಿರುವ ಪಂಜಾಬ್‌ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಅವರ ಸಂಬಂಧಿಕರೊಬ್ಬರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ನಡೆಸಿದ ಶೋಧವು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. 

‘ದೇಶದ ಏಕೈಕ ದಲಿತ ಮುಖ್ಯಮಂತ್ರಿ’ಯನ್ನು ಐದು ವರ್ಷ ಹಿಂದಿನ ಪ್ರಕರಣವನ್ನು ಮುಂದಿಟ್ಟುಕೊಂಡು ಹೆದರಿಸಲು ಬಿಜೆಪಿ ಯತ್ನಿಸುತ್ತಿದೆ. ಆದರೆ, ಅದು ಫಲ ನೀಡದು ಎಂದು ಕಾಂಗ್ರೆಸ್ ಹೇಳಿದೆ.

ಪಂಜಾಬ್‌ನಲ್ಲಿ ‘ಮರಳು ಮಾಫಿಯಾ’ ಮತ್ತು ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಕಂಪನಿಗಳಿಗೆ ಸೇರಿದ ಚಂಡೀಗಡ ಮತ್ತು ಮೊಹಾಲಿಯ  ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಇ.ಡಿ ಹೇಳಿದೆ. 

ಇ.ಡಿ ಶೋಧ ನಡೆಸಿದ ಸ್ಥಳಗಳಲ್ಲಿ ಭೂಪೀಂದರ್‌ ಸಿಂಗ್ ಅಲಿಯಾಸ್‌ ಹನಿ ಅವರ ಸ್ಥಳವೂ ಸೇರಿದೆ. ಭೂಪೀಂದರ್‌ ಅವರು ಚನ್ನಿ ಅವರ ಸಂಬಂಧಿ. ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಚನ್ನಿ ಹೇಳಿದ್ದಾರೆ. ಪಂಜಾಬ್‌ ಪೊಲೀಸರು ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ 2018ರಲ್ಲಿ ದಾಖಲಿಸಿಕೊಂಡಿದ್ದ ಎಫ್ಐಆರ್‌ ಆಧಾರದಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.  ಶೋಧದಲ್ಲಿ ₹6 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಭೂಪೀಂದರ್‌ ಅವರಿಗೆ ಸಂಬಂಧಿಸಿದ ಸ್ಥಳದಲ್ಲಿಯೇ ₹4 ಕೋಟಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಂಜಾಬ್‌ ವಿಧಾನಸಭೆ ಚುನಾವಣೆಯ ಮತದಾನವು ಫೆಬ್ರುವರಿ 20ರಂದು ನಡೆಯಲಿದೆ. ಇಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಎಎಪಿ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಬಿಜೆಪಿಗೆ ಇಲ್ಲಿ ಪ್ರಬಲ ನೆಲೆ ಇಲ್ಲ. ಹಾಗಿದ್ದರೂ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಹೊಸ ಪಕ್ಷ ಮತ್ತು ಅಕಾಲಿ ದಳದಿಂದ ಸಿಡಿದು ಬೇರೆಯಾದ ಇನ್ನೊಂದು ಪಕ್ಷದ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ.

ಇ.ಡಿಯ ಕ್ರಮವನ್ನು ಕಾಂಗ್ರೆಸ್‌ ಖಂಡಿಸಿದೆ. ಇ.ಡಿ ಎಂದರೆ, ಬಿಜೆಪಿಯ ‘ಎಲೆಕ್ಷನ್‌ ಡಿಪಾರ್ಟ್‌ಮೆಂಟ್‌’ ಎಂದು ಕಾಂಗ್ರೆಸ್ ಹೇಳಿದೆ. 

‘ದೇಶದ ಏಕೈಕ ದಲಿತ ಮುಖ್ಯಮಂತ್ರಿಯನ್ನು ಬೆದರಿಸುವ ಕೆಲಸ ನಡೆಯುವುದಿಲ್ಲ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಬಿಜೆಪಿಯ ಜತೆ ಶಾಮೀಲಾಗಿ ಚನ್ನಿ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್‌  ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ. 

ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಜ್ರಿವಾಲ್ ಅವರು, ‘ಮುಖ್ಯಮಂತ್ರಿಯ ಸಂಬಂಧಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆದಿರುವುದು ಬೇಸರದ ಸಂಗತಿ’ ಎಂದಿದ್ದಾರೆ. 

2018ರ ಎಫ್‌ಐಆರ್‌ನಲ್ಲಿ ಚನ್ನಿ ಅವರ ಸಂಬಂಧಿಕರ ಹೆಸರು ಇಲ್ಲ. ಎಫ್‌ಐಆರ್‌ನಲ್ಲಿ ಇರುವ ವ್ಯಕ್ತಿಯು ಚನ್ನಿ ಸಂಬಂಧಿಯ ಗೆಳೆಯಯ ಎಂಬ ಕಾರಣಕ್ಕೆ ಗುರಿ ಮಾಡಲಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

‘ಇವೆಲ್ಲ ಆಧಾರರಹಿತ ಆರೋಪಗಳು. ಎಎಪಿ ಮತ್ತು ಬಿಜೆಪಿ ಹೇಗೆ ಜತೆಯಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಇದು ತೋರಿಸುತ್ತಿದೆ. ಇ.ಡಿ ಶೋಧದ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಆದರೆ, ಅದಕ್ಕೆ ಮೊದಲು ಪ್ರತಿಕ್ರಿಯೆ ಕೊಟ್ಟವರು ಕೇಜ್ರಿವಾಲ್‌. ಗೋವಾ, ಉತ್ತರಾಖಂಡ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಎಎಪಿ ಮತ್ತು ಬಿಜೆಪಿ ಒಂದಾಗಿವೆ’ ಎಂದು ಸುರ್ಜೇವಾಲಾ ಆಪಾದಿಸಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ದಾಳಿ ಹೊಸತಲ್ಲ

ಕೇಂದ್ರದ ತನಿಖಾ ಸಂಸ್ಥೆಗಳು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ಈ ಹಿಂದೆಯೂ ಇಂತಹ ಶೋಧ ನಡೆಸಿವೆ ಎಂದು ವಿರೋಧ ಪಕ್ಷಗಳು ಹೇಳಿವೆ. 

ಎಸ್‌‍ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರ ಆಪ್ತರ ಮನೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಶೋಧ ನಡೆಸಿದ್ದರು. 

ಲೋಕಸಭಾ ಚುನಾವಣೆಗೆ ಮೊದಲು, ಕರ್ನಾಟಕ, ಛತ್ತೀಸಗಡ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದಲ್ಲಿ ಇಂತಹುದೇ ಶೋಧ ಕಾರ್ಯಾಚರಣೆಗಳು ನಡೆದಿದ್ದವು. ರಾಜಕೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿಯೂ ತನಿಖಾ ಸಂಸ್ಥೆಗಳು ದಾಳಿ ನಡೆಸಿದ ನಿದರ್ಶನಗಳು ಇವೆ. 

‘ಇ.ಡಿ ದಾಳಿಗಳನ್ನು ನಡೆಸುವುದು ಬಿಜೆಪಿಯ ಅತ್ಯಂತ ನೆಚ್ಚಿನ ಅಸ್ತ್ರ. ಏಕೆಂದರೆ, ಅಡಗಿಸಿಡಬೇಕಾದ ವಿಚಾರಗಳು ಅವರಲ್ಲಿಯೇ ಇವೆ. ಎಲ್ಲರೂ ನಿಮ್ಮ ಹಾಗೆ ಅಲ್ಲ. ನಮಗೆ ಭೀತಿ ಇಲ್ಲ’ ಎಂದು ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ. 

ಚುನಾವಣೆ ಸಂದರ್ಭದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಶೋಧಕ್ಕೆ ಒಳಗಾದವರಲ್ಲಿ ಎನ್‌ಸಿಪಿಯ ಶರದ್‌ ಪವಾರ್‌ ಮತ್ತು ಅಜಿತ್‌ ಪವಾರ್‌, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್‌ನ ಕಮಲನಾಥ್‌ ಮತ್ತು ಡಿ.ಕೆ. ಶಿವಕುಮಾರ್‌, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್ ಅವರ ಆಪ್ತರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರ ಮಗಳು ಸೆಂತಾಮರೈ, ಡಿಎಂಕೆ ಸಂಸದೆ ಕನಿಮೊಳಿ, ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಮತ್ತು ಇತರರು ಸೇರಿದ್ದಾರೆ. 

ಶೋಧಗಳು ಮತ್ತು ಚುನಾವಣೆಗೆ ಯಾವುದೇ ಸಂಬಂಧ ಇಲ್ಲ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು‍ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. 

2021ರ ಏಪ್ರಿಲ್‌–ಮೇಯಲ್ಲಿ ವಿವಿಧ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರ ಹೆಂಡತಿ ಮತ್ತು ಅವರ ಸಹೋದರಿಗೆ ಕಲ್ಲಿದ್ದಲು ಕಳವು ಪ್ರಕರಣದಲ್ಲಿ ನೋಟಿಸ್‌ ಜಾರಿಗೊಳಿಸಲಾಗಿತ್ತು. ಮುಖಂಡರಾದ ಪಾರ್ಥ ಚಟರ್ಜಿ, ಮದನ್‌ ಮಿತ್ರಾ, ಕುನಾಲ್‌ ಘೋಷ್‌ ಮತ್ತು ವಿವೇಕ್‌ ಗುಪ‍್ತಾ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. 

ತಮಿಳುನಾಡು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ (2011 ಏಪ್ರಿಲ್‌) ‘ಹಣ ಹಂಚಿಕೆಯ ದೂರು’ ಆಧಾರದಲ್ಲಿ ಸೆಂತಾಮರೈ ಅವರ ಮನೆಯಲ್ಲಿ ಶೋಧ ನಡೆಸಲಾಗಿತ್ತು. 

2017ರಲ್ಲಿ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುಖಂಡ ಅಹ್ಮದ್‌ ಪಟೇಲ್‌ ಅವರ ಗೆಲುವನ್ನು ಖಾತರಿಪಡಿಸುವುದಕ್ಕಾಗಿ ಗುಜರಾತ್‌ ಕಾಂಗ್ರೆಸ್‌ ಶಾಸಕರನ್ನು ತಮ್ಮ  ಸುಪರ್ದಿಯಲ್ಲಿ ಇರಿಸಿಕೊಂಡಿದ್ದ ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಇ.ಡಿ ಮತ್ತು ಆದಾಯ ತೆರಿಗೆ ದಾಳಿ ಆಗಿತ್ತು. 2019ರಲ್ಲಿ ಅವರ ಬಂಧನವೂ ಆಗಿತ್ತು. 

***

ಗುಜರಾತ್‌ನಿಂದ ಈಶಾನ್ಯ ರಾಜ್ಯಗಳವರೆಗೆ ನಮ್ಮ ವಿರುದ್ಧ ಇ.ಡಿಯನ್ನು ಬಿಜೆಪಿ ಬಳಸಿದ ತಂತ್ರವನ್ನು ನೋಡಿದ್ದೇವೆ. ಆದರೆ, ನಾವು ಹೆದರುವವರಲ್ಲ, ಬಾಗುವವರಲ್ಲ

-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ನ ಮುಖ್ಯ ವಕ್ತಾರ

***

ಮುಖ್ಯಮಂತ್ರಿ ಮತ್ತು ಅವರ ಕುಟುಂಬದವರು ಮರಳು ಅಕ್ರಮ ಗಣಿಗಾರಿಕೆಯಲ್ಲಿ ಇರುವುದು ಸ್ಪಷ್ಟವಾಗಿದೆ. ಇಂಥ ವ್ಯಕ್ತಿಯಿಂದ ಪಂಜಾಬ್‌ನ ಭವಿಷ್ಯಕ್ಕೆ ಏನನ್ನು ನಿರೀಕ್ಷಿಸಬಹುದು?

-ರಾಘವ್‌ ಛಡ್ಡಾ, ಎಎಪಿ ವಕ್ತಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು