ಗುರುವಾರ , ಅಕ್ಟೋಬರ್ 29, 2020
21 °C

PV Web Exclusive: ‘ದಾಳಿ’ಯ ದಾಳ ಹಿಡಿದು...

ಅಮೃತ ಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಶೋಧ ನಡೆಸಿ ವಾಪಸಾಗಿದ್ದಾರೆ. ಉಪಚುನಾವಣೆಯ ಹೊತ್ತಿನಲ್ಲಿ ನಡೆದಿರುವ ಈ ದಾಳಿ ರಾಜಕೀಯ ಪ್ರೇರಿತ ಎಂಬುದು ಕಾಂಗ್ರೆಸ್ ವಾದ. ಚುನಾವಣೆಗಳು ಇದ್ದಾಗ ಸಿಬಿಐ, ಐಟಿ ಅಥವಾ ಇ.ಡಿ. ದಾಳಿಗಳು ಹೊಸತೇನಲ್ಲ. ರಾಷ್ಟ್ರ ರಾಜಕಾರಣದಲ್ಲಿ ಇಂತಹ ಹಲವು ಘಟನೆಗಳು ಜರುಗಿವೆ. ಅವುಗಳ ಹಿನ್ನೋಟ ಇಲ್ಲಿದೆ..  

ಶರದ್ ಪವಾರ್‌

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣ ಸಂಬಂಧ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕರೆದಿತ್ತು. ಇದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ನಡೆದ ಬೆಳವಣಿಗೆ. ಶರದ್ ಪವಾರ್ ಅವರ ಸಂಬಂಧ ಅಜಿತ್ ಪವಾರ್ ಅವರು ಪ್ರಕರಣದ ಆರೋಪಿ. ಆದರೆ ಚುನಾವಣೆಯ ಸಮಯದಲ್ಲಿ ವಿಚಾರಣೆಗೆ ಕರೆದಿರುವ ಇ.ಡಿ. ನಿರ್ಧಾರವನ್ನು ಪವಾರ್ ಪ್ರಶ್ನಿಸಿದ್ದರು. ‘ಶಿವಾಜಿ ಮಹಾರಾಜರ ಆದರ್ಶನಗಳನ್ನು ಪಾಲಿಸುವ ನಾವು ಎಂದಿಗೂ ದೆಹಲಿಯ ಪ್ರಭುತ್ವದ ಎದುರು ಮಂಡಿಯೂರುವುದಿಲ್ಲ’ ಎಂದಿದ್ದರು. ಚುನಾವಣೆ ಇದ್ದರೂ ಸಹ, ನೋಟಿಸ್ ಅನುಸಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ದಿಟ್ಟತನ ಪ್ರದರ್ಶಿಸಿದ್ದರು.

ಕನಿಮೋಳಿ

ಕಳೆದ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆ ವೇಳೆ ತಮಿಳುನಾಡಿಗೆ ಕೇಂದ್ರದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿಯಿಟ್ಟಿದ್ದರು. ತೂತ್ತುಕುಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿಎಂಕೆ ನಾಯಕಿ ಕನಿಮೋಳಿ ಅವರ ನಿವಾಸದಲ್ಲಿ 2019ರ ಏಪ್ರಿಲ್‌ನಲ್ಲಿ ಶೋಧ ನಡೆದಿತ್ತು. ಚುನಾವಣೆಯಲ್ಲಿ ಹಂಚಲು ಕನಿಮೋಳಿ ಮನೆಯಲ್ಲಿ ಅಪಾರ ಪ್ರಮಾಣದ ಹಣ ದಾಸ್ತಾನು ಮಾಡಲಾಗಿದೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ಆದರೆ ಅಧಿಕಾರಿಗಳು ಬರಿಗೈನಲ್ಲಿ ವಾಪಸಾಗಿದ್ದರು.

‘ಆದಾಯ ತೆರಿಗೆ ಇಲಾಖೆ, ಚುನಾವಣಾ ಆಯೋಗಗಳು ಪ್ರಧಾನಿ ಮೋದಿ ಅವರ ಕೈಗೊಂಬೆಯಾಗಿವೆ. ಭೀತಿ ಹುಟ್ಟಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಕನಿಮೋಳಿ ಆಕ್ರೋಶ ವ್ಯಕ್ತಪಡಿಸಿದ್ದರು.

ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳು, 18 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದ್ದ ವೇಳೆ ಈ ಶೋಧ ನಡೆದಿದ್ದು ಗಮನಾರ್ಹ.

ಸಿಬಿಐ ದಾಳಿ: 2019ರ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಡಿಎಂಕೆ ಖಜಾಂಚಿ ದುರೈ ಮುರುಗನ್ ಅವರ ಮಗ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದಾಯ ತೆರಿಗೆ ಅಧಿಕಾರಿಗಳು ಡಿಎಂಕೆ ಮುಖಂಡರೊಬ್ಬರಿಗೆ ಸೇರಿದ ಸಿಮೆಂಟ್ ಗೋದಾಮಿನಲ್ಲಿ ಸಂಗ್ರಹಿಸಿದ್ದ ಸುಮಾರು ₹11 ಕೋಟಿ ನಗದು ವಶಪಡಿಸಿಕೊಂಡಿದ್ದರು. ಹೀಗಾಗಿ ಕ್ಷೇತ್ರದ ಚುನಾವಣೆವನ್ನು ಆಯೋಗ ರದ್ದುಪಡಿಸಿತ್ತು. ಹಣ ಹಂಚಕೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಸೆಪ್ಟೆಂಬರ್‌ನಲ್ಲಿ ಕೆನರಾಬ್ಯಾಂಕ್‌ನ ಮಾಜಿ ಮ್ಯಾನೇಜರ್ ಎಂ. ದಯಾನಿಧಿ, ಡಿಎಂಕೆ ಕಾರ್ಯಕರ್ತ ಶ್ರೀನಿವಾಸನ್ ಹಾಗೂ ದಾಮೋದರನ್ ಎಂಬುವರ ಮನೆಗಳಲ್ಲಿ ಶೋಧ ನಡೆಸಿತ್ತು. ದಾಳಿ ರಾಜಕೀಯ ಪ್ರೇರಿತ ಎಂದು ಡಿಎಂಕೆ ಆರೋಪಿಸಿತ್ತು.

ಕೇಜ್ರಿವಾಲ್ ಕಚೇರಿ

2015ರ ಡಿಸೆಂಬರ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಕಚೇರಿಯಲ್ಲಿ ಸಿಬಿಐ ಶೋಧ ನಡೆಸಿತ್ತು. ಆದರೆ ಆ ನಂತರ ಇದನ್ನು ಅಲ್ಲಗಳೆದಿದ್ದ ಸಿಬಿಐ, ಭ್ರಷ್ಟಾಚಾರ ಆರೋಪದ ಮೇಲೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ, ಶೋಧ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿತ್ತು.

‘ಅರುಣ್ ಜೇಟ್ಲಿ ಅವರಿಗೆ ಸಂಬಂಧಿಸಿದ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ದಾಖಲೆಗಳಿಗಾಗಿ ಸಿಬಿಐ ಹುಡುಕಾಟ ನಡೆಸಿದೆ. ಪ್ರಧಾನಿ ಮೋದಿ ಒಬ್ಬ ಹೇಡಿ’ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಈ ಶೋಧವು ಬಿಜೆಪಿ ಹಾಗೂ ಎಎಪಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. 

ಶಾರದಾ ಚಿಟ್‌ಫಂಡ್ ಪ್ರಕರಣ: 

ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣ ಸಂಬಂಧ ಕೋಲ್ಕತ್ತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರು ಹುದ್ದೆಯಿಂದ ತೆರವಾದ ಬಳಿಕ ಅವರ ಮನೆಯಲ್ಲಿ ಸಿಬಿಐ ಶೋಧ ನಡೆಸಿತ್ತು. ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಿದ ಆರೋಪ ಅವರ ಮೇಲಿತ್ತು. ರಾಜೀವ್ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ದ ಅಧಿಕಾರಿಗಳು, ಕಚೇರಿಗೆ ಹಾಜರಾಗುವಂತೆ ರಾಜೀವ್‌ ಕುಮಾರ್‌ ಅವರಿಗೆ ನೋಟಿಸ್ ನೀಡಿ ಹಿಂದಿರುಗಿದ್ದರು. ಸಿಬಿಐ ಬಂಧನಕ್ಕೆ ತಡೆ ನೀಡುವಂತೆ ಕೋರಿ ರಾಜೀವ್ ಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದರು. ರಾಜೀವ್ ಅವರನ್ನು ವಿಚಾರಣೆಗೆ ಒಳಪಡಿಸುವುದು ಹಾಗೂ ಬಂಧಿಸುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರವಾಗಿ ವಿರೋಧಿಸಿದ್ದರು.

ಕಮಲ್‌ನಾಥ್ ಸಂಬಂಧಿ ರತುಲ್ ಪುರಿ

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ, ಅಂದಿನ ಮುಖ್ಯಮಂತ್ರಿ ಕಮಲನಾಥ್ ಅವರ ಸಂಬಂಧಿ ರತುಲ್ ಪುರಿ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ್ದರು. ₹354 ಕೋಟಿ ಮೊತ್ತದ ಬ್ಯಾಂಕ್ ಹಗರಣದಲ್ಲಿ ಪುರಿ ಅವರನ್ನು ಬಂಧಿಸಲಾಯಿತು. ಪುರಿ ಅವರ ಯಾವುದೇ ವ್ಯವಹಾರದಲ್ಲಿ ತಾವು ಭಾಗಿಯಾಗಿಲ್ಲ ಎಂದು ಕಮಲನಾಥ್ ಸ್ಪಷ್ಟನೆ ನೀಡಿದ್ದರು. ಮುಖ್ಯಮಂತ್ರಿಗಳು ತಮ್ಮ ಸಂಬಂಧಿ ಪುರಿ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಆರೋಪಿಸಿದ್ದರು.

ಅಹ್ಮದ್ ಪಟೇಲ್

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (ಪಿಎಂಎಲ್‌ಎ) ಸಂಬಂಧಿಸಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯದ (ಇ.ಡಿ) ತಂಡ ಕಾಂಗ್ರೆಸ್‌ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಅವರ ನಿವಾಸದಲ್ಲಿ ಕಳೆದ ಜೂನ್‌ನಲ್ಲಿ ಶೋಧ ನಡೆಸಿತ್ತು. ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್‌ನಿಂದ ಬ್ಯಾಂಕ್‌ಗೆ ಬಹುಕೋಟಿ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. 

ರಾಜ್ಯಸಭಾ ಚುನಾವಣೆಗೂ ಮುನ್ನ ‘ಶಾಸಕರ ಖರೀದಿ’ ನಡೆಯಬಹುದೆಂಬ ಶಂಕೆಯಿಂದ ಕಾಂಗ್ರೆಸ್‌ ಪಕ್ಷವು ಗುಜರಾತ್‌ನ 42 ಮಂದಿ ಶಾಸಕರನ್ನು ಕರ್ನಾಟಕದ ರೆಸಾರ್ಟ್‌ ಒಂದರಲ್ಲಿ ಇರಿಸಿತ್ತು. ಈ ಕಾರ್ಯಾಚರಣೆಯ ನೇತೃತ್ವವನ್ನು ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌ ವಹಿಸಿದ್ದರು. ಇದಾದ ನಂತರ ಪಟೇಲ್‌ ಅವರ ಹೆಸರು ಮತ್ತೆ ದೂರಿನಲ್ಲಿ ಕಾಣಿಸಿಕೊಂಡಿತ್ತು.

ಇತರ ಪ್ರಕರಣಗಳು: 

ಕಳೆದ ಜನವರಿಯಲ್ಲಿ ಹರಿಯಾಣದ ಜಿಂದ್‌ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಕಾಂಗ್ರೆಸ್‌ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡ ಮೇಲೆ ಸಿಬಿಐ ದಾಳಿ ನಡೆಯಿತು. ಭೂಸ್ವಾಧೀನ ಹಗರಣದಲ್ಲಿ ಭ್ರಷ್ಟಾಚಾರ ಮತ್ತು ವಂಚನೆ ನಡೆಸಿದ ಆರೋಪದಡಿ ದೂರು ದಾಖಲಾಗಿತ್ತು.   

ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಹಾಗೂ ಬಿಎಸ್‌ಪಿ ಮಧ್ಯೆ ಮೈತ್ರಿ ಮಾತುಕತೆ ವಿವರಗಳು ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಒಂದು ವಾರ ಮೊದಲು ಉತ್ತರಪ್ರದೇಶದ ಹಲವು ಕಡೆಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿತು. ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ (2012–16) ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ಶೋಧ ನಡೆಸಲಾಗಿತ್ತು.

ಇದಲ್ಲದೆ, 2019ರ ಜನವರಿ ತಿಂಗಳಲ್ಲಿ ‘ಸ್ಮಾರಕ ಹಗರಣ’ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಲಖನೌದ ಕೆಲವು ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು. ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿವಿಧ ಸ್ಮಾರಕಗಳನ್ನು ಸ್ಥಾಪಿಸುವ ವಿಚಾರದಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆಯ ಆರೋಪಕ್ಕೆ ಸಂಬಂಧಿಸಿ ಈ ದಾಳಿ ನಡೆಸಲಾಗಿತ್ತು.

2017ರಲ್ಲಿ ಒಡಿಶಾದಲ್ಲಿ ಪಂಚಾಯಿತಿ ಚುನಾವಣೆಗಳ ಮುನ್ನಾದಿನ ಬಿಜೆಡಿಯ ಶಾಸಕರು ಮತ್ತು ಸಂಸರದ ಮನೆಗಳಲ್ಲಿ ಮತ್ತು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಕಚೇರಿಯ ಸಿಬ್ಬಂದಿಯ ಮನೆಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದರು. ಸುಮಾರು ₹ 500 ಕೋಟಿ ಮೌಲ್ಯದ ಚಿಟ್‌ಫಂಡ್‌ ಹಗರಣದಲ್ಲಿ ಈ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೈವಾಡ ಇರಬಹುದು ಎಂಬ ಶಂಕೆಯಿಂದ ಈ ಶೋಧ ನಡೆಸಲಾಗಿತ್ತು.

ಕಳೆದ ತಿಂಗಳಷ್ಟೇ ಒಡಿಶಾದ ಆಡಳಿತಾರೂಢ ಬಿಜೆಡಿಯ ಶಾಸಕ, ರಾಜ್ಯದ ಪ್ರವಾಸೋದ್ಯಮ ಖಾತೆಯ ಮಾಜಿ ಸಚಿವ ದೇವಿಪ್ರಸಾದ್‌ ಮಿಶ್ರಾ ಅವರ ಮನೆಯಲ್ಲಿ ಸಿಬಿಐ ಶೋಧ ನಡೆಸಿತು. ₹ 1,000 ಕೋಟಿ ಮೌಲ್ಯದ ಹಗರಣವೊಂದಕ್ಕೆ ಸಂಬಂಧಿಸಿ ಶೋಧ ನಡೆಸಲಾಗಿದೆ ಎಂದು ಸಿಬಿಐ ಹೇಳಿತ್ತು. ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ರಾಜ್ಯದಲ್ಲಿ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಶೋಧ ನಡೆಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು