ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ರಾಜಕೀಯ ಪಕ್ಷಗಳಲ್ಲದೇ, ನಾವೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ

Last Updated 3 ಡಿಸೆಂಬರ್ 2020, 11:39 IST
ಅಕ್ಷರ ಗಾತ್ರ

ಕೆಲವು ಬಿಡಿ ಬಿಡಿ ವಿಚಾರಗಳನ್ನು ಮೊದಲು ಹೇಳಿಬಿಡುತ್ತೇನೆ:

ಒಂದು...

ನನ್ನ ಸ್ನೇಹಿತನೊಬ್ಬ ಸಾಹಿತ್ಯವನ್ನು ತುಂಬಾ ಚೆನ್ನಾಗಿ ಓದಿಕೊಂಡಿದ್ದಾನೆ. ದಲಿತ ಸಾಹಿತ್ಯವನ್ನು ಬಹಳವಾಗಿ ಇಷ್ಟಪಡುತ್ತಾನೆ. ಅವನಿಗೆ ಯಕ್ಷಗಾನದ ಬಗ್ಗೆ ಹಲವು ಆಕ್ಷೇಪಗಳಿವೆ. ನಾನು ಒಮ್ಮೆ ಯಕ್ಷಗಾನದ ಬಗ್ಗೆ ಒಂದು ಲೇಖನ ಬರೆದಿದ್ದೆ. ಆ ಸಂದರ್ಭ ಕರೆ ಮಾಡಿ, ಯಕ್ಷಗಾನದ ಬಗ್ಗೆ ಆತನಿಗೆ ಇದ್ದ ಆಕ್ಷೇಪಗಳನ್ನು ಹೊರ ಹಾಕಿದ. ‘ಯಕ್ಷಗಾನದಲ್ಲಿ ದಲಿತ ಸಂವೇದನೆ ಇಲ್ಲ’ ಎನ್ನುವುದು ಆತನ ಪ್ರಮುಖ ಆಕ್ಷೇಪವಾಗಿತ್ತು. ಕೇವಲ ಪುರಾಣಗಳನ್ನು ಮಾತ್ರ, ಅದರಲ್ಲೂ ಬ್ರಾಹ್ಮಣಶಾಹಿ ಚಿಂತನೆಗಳನ್ನು ಮಾತ್ರ ಹೇಳಲಾಗುತ್ತದೆ, ಇತ್ಯಾದಿ...

ಅರೆ, ಇದಕ್ಕೆ ಏನು ಹೇಳುವುದು. ಎಲ್ಲದರಲ್ಲೂ ದಲಿತ ಸಂವೇದನೆ ಇರಬೇಕು ಎನ್ನುವುದು ಒಂದು ನಿಯಮವೇ? ಈಗ ಮಂಟೆಸ್ವಾಮಿ ಕಾವ್ಯದಲ್ಲಿ ಬ್ರಾಹ್ಮಣ ಸಂವೇದನೆ ಯಾಕಿಲ್ಲ ಎಂದು ಕೇಳಿದಷ್ಟೇ ಬಾಲಿಶ ಪ್ರಶ್ನೆ ಇದು. ಯಕ್ಷಗಾನವೂ ಒಂದು ಜಾನಪದ ಅಭಿವ್ಯಕ್ತಿ ಮಾಧ್ಯಮ. ಎಲ್ಲ ಕಲೆಗಳಂತೆ ಇದರ ಹುಟ್ಟು, ಇದರ ಚೌಕಟ್ಟು, ಜೀವ ಪಡೆದ ಪ್ರದೇಶ, ಅದರ ಹಿನ್ನೆಲೆ ಇವೆಲ್ಲವೂ ಕಲೆಯ ಇತಿಮಿತಿಗಳಿಗೆ ಕಾರಣವಾಗಿರುತ್ತದೆ. ಇಂತೆ ಇರುವ ಕಲೆಯಲ್ಲಿ ಪ್ರಯೋಗ ಮಾಡಬಾರದೇ ಎಂದರೆ, ಖಂಡಿತ ಮಾಡಬಹುದು. ಆದರೆ, ದಲಿತ ಸಂವೇದನೆ ಇಲ್ಲ ಎಂದು ತಾನು ಅಂದುಕೊಂಡ ಕಾರಣಕ್ಕೆ ಯಕ್ಷಗಾನ ಎನ್ನುವುದು ಒಂದು ಕಲೆಯೇ ಅಲ್ಲ, ಅದಕ್ಕೆ ಬೆಲೆಯೇ ಇಲ್ಲ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಾದ ಚಿಂತನ ಕ್ರಮ ಅಲ್ಲ.

ಇತ್ತೀಚೆಗೆ ನಮ್ಮದೆ ಫೇಸ್‌ಬುಕ್‌ ಪೇಜ್‌ನಲ್ಲಿ ‘ಮಹಾ ಬ್ರಾಹ್ಮಣ’ ಎನ್ನುವ ಪ್ರಸಂಗದ ನೇರ ಪ್ರಸಾರ ಇತ್ತು. ಕ್ಷತ್ರಿಯನಾಗಿದ್ದ, ದೊಡ್ಡ ರಾಜನಾಗಿದ್ದ ಕೌಶಿಕನು, ನಂತರ ಮಹಾ ಬ್ರಾಹ್ಮಣನಾಗುವ, ವಿಶ್ವಾಮಿತ್ರನಾಗುವ ಕಥೆಯ ಪ್ರಸಂಗ ಅದು. ರಾಜನಾಗಿದ್ದಾತ, ಯಾಕೆ ವಿಶ್ವಾಮಿತ್ರನಾಗುತ್ತಾನೆ ಎನ್ನುವುದು ಇಡೀ ಕಥೆಯ ಸಾರ. ಕಾಮಧೇನು ತನಗೆ ಬೇಕು ಎಂದು ಇನ್ನಿಲ್ಲದೆ ಭುಜಬಲ ಶಕ್ತಿಯಿಂದ ಅದನ್ನು ಪಡೆದುಕೊಳ್ಳುವ ಪ್ರಯತ್ನ ಮಾಡುವ ಕೌಶಿಕನಿಗೆ ಅದನ್ನು ಪಡೆಯಲಾಗದೆ, ತೋಳುಬಲ ನಿಜವಾದ ಬಲ ಅಲ್ಲ; ಜ್ಞಾನಬಲವೇ ನಿಜವಾದ ಬಲ ಎಂಬುದಾಗಿ ಅರಿವಾಗುತ್ತದೆ. ನಂತರ ಆತ ಕಠಿಣ ತಪಸ್ಸು ಮಾಡಿ, ವಿಶ್ವಾಮಿತ್ರನಾಗಿ ನಂತರ ಗಾಯತ್ರಿ ಮಂತ್ರವನ್ನು ರಚಿಸುತ್ತಾನೆ. ನನಗೆ ಜ್ಞಾನ ಕೊಡು, ಅರಿವು ಕೊಡು ಎಂದು ಸೂರ್ಯನಲ್ಲಿ ಬೇಡುವ ಮಂತ್ರ ಅದು. ಹಾಗಾದರೆ, ಈ ಪ್ರಸಂಗ ಯಾವ ಸಂವೇದನೆಯನ್ನೂ ದಾಟಿಸುವುದಿಲ್ಲವೇ? ಅಂಬೇಡ್ಕರ್‌ ಸಹ ಇದನ್ನೇ ಅಲ್ಲವೇ ಹೇಳಿದ್ದು, ಶಿಕ್ಷಣ ಪಡೆಯಿರಿ, ಜ್ಞಾನ ಪಡೆಯಿರಿ ಎಂದು. ಅಂಬೇಡ್ಕರ್‌ ಹೇಳಿದರೆ ವೇದ್ಯ, ವಿಶ್ವಾಮಿತ್ರ ಹೇಳಿದರೆ ಅದು ಬ್ರಾಹ್ಮಣಶಾಹಿ ಆದೀತೆ?

ಎರಡು...

ನಾವು ಶಾಲೆಯಲ್ಲಿ ಓದುವ ಹೊತ್ತಿಗೆ, ಗಾಂಧಿ ಮತ್ತು ಅಂಬೇಡ್ಕರ್‌ ಕುರಿತ ಪಾಠಗಳು ಇದ್ದವು. ಪಾಠ ಮಾಡುವ ಮೇಷ್ಟ್ರಾಗಲಿ, ಪಠ್ಯದಲ್ಲಿಯೇ ಆಗಲಿ, ಯಾರು ಹೆಚ್ಚು ಯಾರು ಕಮ್ಮಿ ಅನ್ನುವ ಗೊಂದಲವನ್ನು ಮೂಡಿಸಲಿಲ್ಲ. ಇಬ್ಬರು ಮಹಾನ್‌ ಚೇತನಗಳು ಎಂದೇ ನಾವು ಓದಿಕೊಂಡು ಬಂದಿರುವುದು. ಆದರೆ, ಬುದ್ಧಿ ಬೆಳೆದಂತೆ, ನಾನು ಸಮಾಜಕ್ಕೆ ಹೆಚ್ಚು ತೆರೆದುಕೊಂಡಂತೆ, ಗಾಂಧಿ ಮತ್ತು ಅಂಬೇಡ್ಕರ್‌ ಮಧ್ಯೆ ಯಾರು ಹೆಚ್ಚು ಎನ್ನುವ ಚರ್ಚೆವೊಂದಿದೆ ಎಂದು ಗೊತ್ತಾದ ಮೇಲೆ ಚಕಿತಗೊಂಡಿದ್ದೆ. ಗಾಂಧಿ ಮತ್ತು ಅಂಬೇಡ್ಕರ್‌ ಅವರವರ ನೆಲೆಯಲ್ಲಿ ಆಧುನಿಕ ಭಾರತದ ಶಿಲ್ಪಿಗಳು. ಅದರಲ್ಲಿ ಹೆಚ್ಚು ಕಮ್ಮಿ ಎಲ್ಲಿಂದ ಬಂತು? ದೇಶದ ಒಂದು ವರ್ಗಕ್ಕೆ ಗಾಂಧಿ ಬೇಡ. ಅವರನ್ನು ಹತ್ಯೆ ಮಾಡಲಾಯಿತು. ಹಾಗೆಯೇ, ಇನ್ನೊಂದು ವರ್ಗಕ್ಕೂ ಗಾಂಧಿ ಬೇಡ. ಅಲ್ಲಿಗೆ ಗಾಂಧಿ ವಿಷಯದಲ್ಲಿ ರಾಜಕೀಯ ಮಾಡುವವರಿಗೆ ಸುಲಭದ ದಾರಿಯನ್ನು ನಾವೇ ಮಾಡಿಕೊಟ್ಟಿದ್ದೇವೆ. ಇದು ಯಾಕೆ ಹೀಗಾಗಬೇಕು ಎನ್ನುವುದು ಇಂದೂ ನನ್ನನ್ನು ಕಾಡುತ್ತಿರುವ ಪ್ರಶ್ನೆಯೇ ಸರಿ. ಆದರೆ ನಮಗೆ ಇಬ್ಬರೂ ಬೇಕು.

ನನ್ನ ತಂದೆ ಒಂದು ಲೇಖನ ಬರೆಯುತ್ತಾರೆ. ಗಾಂಧಿ ಅವರದ್ದು ‘ಮೃದು ಹಿಂದುತ್ವ’ ಅಲ್ಲ. ಅದು ‘ಲಿಬರಲ್‌ ಹಿಂದುತ್ವ’ ಎಂಬುದಾಗಿ. ಇದಕ್ಕೆ ಹಲವು ಕಾರಣಗಳನ್ನು ನೀಡುತ್ತಾ ವಿಶ್ಲೇಷಣೆ ಮಾಡುತ್ತಾರೆ. ಮೃದು ಹಿಂದುತ್ವ ಅನ್ನುವುದು ಕಟು ಹಿಂದುತ್ವದ ವಿರುದ್ಧವಾದ ಚಿಂತನೆ ಅಲ್ಲ, ಅದರ ಜೊತೆಯಲ್ಲೇ ಸಾಗುವಂಥದ್ದು. ಆದರೆ, ಲಿಬರಲ್‌ ಅನ್ನುವುದು ಕಟು ಹಿಂದುತ್ವ ಚಿಂತನೆಗೆ ವಿರುದ್ಧವಾದುದು ಎಂದೂ ನನ್ನ ತಂದೆ ವಾದಿಸುತ್ತಾರೆ. ಇದು ಎಲ್ಲೂ ಪ್ರಕಟವಾಗುವುದಿಲ್ಲ. ಬಹುಶಃ ‘ಗಾಂಧಿ’ ಎನ್ನುವುದು ‘ಸೇಲೆಬಲ್‌’ ಅನ್ನಿಸಲಿಲ್ಲ ಎನಿಸುತ್ತದೆ. ಲೇಖನ ಬರೆದವರ ಜಾತಿ, ಅಥವಾ ಗಾಂಧಿ ಕುರಿತು ಕೆಲವರು ಮಾತ್ರ ಬರೆಯಬಹುದು ಎನ್ನುವ ಆಲೋಚನೆಯೂ ಕಾರಣ ಇರಬಹುದು.

ಒಂದು ಲೇಖನ ಪ್ರಕಟಗೊಳ್ಳಲು ಅಥವಾ ವೈರಲ್‌ ಆಗಲು ಅಂಬೇಡ್ಕರ್‌ ಮತ್ತು ದಲಿತ ಸಂವೇದನೆ ಎನ್ನುವುದೇ ಬಹುಮುಖ್ಯ ಅಂಶ ಎನ್ನುವಂತೆ ನಮ್ಮ ಸಮಾಜ ತಯಾರಾಗಿದೆ. ಯಾವುದೇ ಆಳವಾದ ಚಿಂತನೆ ಇಲ್ಲದ, ಯಾವ ವಾದವನ್ನೂ ಗಂಭೀರವಾಗಿ ಚರ್ಚೆ ಮಾಡದ, ಕೇವಲ ಅಂಬೇಡ್ಕರ್‌ ಮತ್ತು ದಲಿತ ಎಂದು ಬರೆದ ಲೇಖನ ಮತ್ತು ಲೇಖನ ಬರೆದವರ ಜಾತಿ ಕಾರಣದಿಂದ ಎಷ್ಟೋ ಬರಹಗಳು ವೈರಲ್‌ ಆಗುತ್ತವೆ. ಅದನ್ನು ಬರೆದವರು ಸಹ ಚಿಂತಕರಾಗುತ್ತಾರೆ. ಇವೆಲ್ಲವೂ ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಇಣುಕಿದರೂ ಕಾಣುವ ಸಂಗತಿಗಳು. ನಾನು ಹೀಗೆ ಬರೆಯುವ ಹೊತ್ತಿಗೆ ನನ್ನ ಜಾತಿಯ ಹಿನ್ನೆಲೆಯೂ ಸಹ ತಲೆಯಲ್ಲಿ ಓಡಾಡುತ್ತಿರುತ್ತದೆ. ನಾನು ಸಹ ಹಲವು ಬಾರಿ ಇಂಥವನ್ನು ಅನುಭವಿಸಿದ್ದೇನೆ.

ಮೂರು...

ನಮಲ್ಲಿ ರಾಜಕೀಯ ಪಕ್ಷಗಳನ್ನು ಆರಿಸಿಕೊಳ್ಳುವಲ್ಲಿ ಕೆಲವು ಗೊಂದಲ ಇದ್ದಂತೆ ಇದೆ. ಕೋಮುವಾದ, ಜಾತಿವಾದ, ಗಲಭೆಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ನಾವು ಎಲ್ಲಿ ನಿಲ್ಲಬೇಕು ಎನ್ನುವ ಗೊಂದಲ ಮನೆ ಮಾಡಿದಂತಿದೆ. ಕೋಮುವಾದದಂಥ ಆಲೋಚನೆಗಳಿಗೆ, ಕ್ರಿಯೆಗಳಿಗೆ ರಾಜಕೀಯವಾಗಿ ಬೆಂಬಲ ದೊರೆಯುತ್ತಿರುವಾಗ ನಮಗೆ ಯಾರು ಬೇಕು, ನಮ್ಮ ಮೊದಲ ಶತ್ರು ಯಾರು ಎನ್ನುವುದನ್ನು ನಾವು ಮನಗಂಡಂತಿಲ್ಲ. ನಾವು ಯಾವ ಪಕ್ಷವನ್ನೂ ನಂಬುವುದಿಲ್ಲ.

ಮಾಯಾವತಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅವರೇ ಪರ್ಯಾಯ ಎಂದೂ ನಂಬಿದ್ದರು. ಕೆಲವು ಚಿಂತಕರು ಬಿಎಸ್‌ಪಿಯಿಂದ ಕರ್ನಾಟಕದಲ್ಲಿ ಚುನಾವಣೆ ಎದುರಿಸಿದ್ದರು ಕೂಡ. ಆದರೆ, ಮಾಯಾವತಿ ಅವರ ರಾಜಕೀಯ ನಡೆಗಳು ಈಗ ಬೇರೆಯದೇ ಹಾದಿ ಹಿಡಿಯುತ್ತಿದೆ. ಹಿಂದೆಯೂ ಅವರು ಬಿಜೆಪಿ ಜೊತೆ ಸೇರಿ ಉತ್ತರ ಪ್ರದೇಶಲ್ಲಿ ಸರ್ಕಾರ ರಚಿಸಿದ್ದರು. ಇದನ್ನು ನಾವು ಮರೆತು ಬಿಡುತ್ತೇವೆ ಏಕೆ?

ನಮ್ಮ ಈ ಎಲ್ಲ ಗೊಂದಲಗಳು ಕೋಮುವಾದದ ವಿರುದ್ಧದ ಹೋರಾಟದಲ್ಲಿ ನಮ್ಮ ಶಕ್ತಿ ಕುಂದಿಸುತ್ತಿರುವುದೇ? ಕೇವಲ ಕಾಂಗ್ರೆಸ್‌ ಪಕ್ಷ ಮಾತ್ರ ಆತ್ಮಾವಲೋಕನ ಮಾಡಿಕೊಳ್ಳಬೇಕು ಏಕೆ. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಡವೇ? ನಮ್ಮ ನಡುವಿನ ಕೆಲವು ವೈರುಧ್ಯವೇ ನಮ್ಮ ದೌರ್ಬಲ್ಯವಾಗಬಾರದು ಅಲ್ಲವೇ?

ನಾಲ್ಕು...

ಇತ್ತೀಚೆಗೆ ಓರ್ವ ಹಿರಿಯ ಪತ್ರಕರ್ತ, ತಮ್ಮ ಫೇಸ್‌ಬುಕ್‌ನಲ್ಲಿ ಒಂದು ವಿಚಾರವನ್ನು ಹಂಚಿಕೊಂಡಿದ್ದರು. ಕೋಮುವಾದ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಸಾಹಿತ್ಯ ಯಾವುದಿದೆ ಎನ್ನುವ ಅರ್ಥದಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ಅದನ್ನು ಓದಿದಾಗ, ಹೌದೆನ್ನಿಸಿತು. ಯಾಕೆ ನಮಗೆ ಸಾಹಿತ್ಯ ರಚನೆ ಸಾಧ್ಯವಾಗುತ್ತಿಲ್ಲ. ಯಾಕೆ ಒಂದು ದಿಟ್ಟ ಕಥೆಯೋ, ಕವನವೋ, ಕಾದಂಬರಿಯೋ, ನಾಟಕವೋ ರಚನೆ ಆಗುತ್ತಿಲ್ಲ. ಅಥವಾ ಎಲ್ಲೋ ಮೂಲೆಯಲ್ಲಿ ರಚನೆ ಆಗುತ್ತಿದ್ದರೂ ನಾವು ಅದನ್ನು ಗುರುತಿಸುವಲ್ಲಿ ಪ್ರಯತ್ನ ನಡೆಸಿಲ್ಲವೋ ಎಂಬಂಥ ಪ್ರಶ್ನೆಗಳು ನನ್ನ ತಲೆಯಲ್ಲಿ ಮೂಡಿದವು.

ನಮ್ಮ ಇಂದಿನ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಿ ಅಂಬೇಡ್ಕರ್‌, ಲಂಕೇಶ್‌, ತೇಜಸ್ವಿ ಅಥವಾ ಇನ್ನು ಹಲವು ಚಿಂತಕರಲ್ಲಿ ಉತ್ತರ ಹುಡುಕುತ್ತಿದ್ದೇವೆ. ಅವರೆಲ್ಲರ ಚಿಂತನೆಗಳನ್ನು ನಮ್ಮದಾಗಿಸಿಕೊಂಡು, ಹೊಸ ಹುಟ್ಟಿಗೆ ನಾವು ಅಣಿಯಾಗುತ್ತಿಲ್ಲವೇ ಎನ್ನುವ ಗೊಂದಲವೂ ಕಾಡತೊಡಗಿದೆ. ಹಿಂದಿನದರಲ್ಲೇ ಉತ್ತರ ಹುಡುಕುತ್ತಿರುವಾಗ ಮುಂದಿನ ದಾರಿಯ ಬಗ್ಗೆ ಯೋಚನೆ ಹೊರಳುವುದೇ?

ಹೀಗೆ ಬಿಡಿ ಬಿಡಿಯಾಗಿರುವ ಘಟನೆಗಳು ಮತ್ತು ಅದರೊಂದಿಗೆ ಹುಟ್ಟಿಕೊಂಡಿರುವ ಪ್ರಶ್ನೆಗಳು ನನ್ನನ್ನು ಬಹಳವಾಗಿ ಕಾಡಿದ ಸಂಗತಿಗಳು. ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಮಾಡುವುದಿಲ್ಲ ಎಂದು ಯಾರನ್ನು ಬೈಯುತ್ತೇವೋ, ನಾವು ಸಹ ಅವರಂತೆ ಒಳಗೊಳ್ಳುವ ಚಿಂತನೆ ನಡೆಸುತ್ತಿಲ್ಲ. ಗಾಂಧಿ ಬೇಡ, ಯಾವುದೋ ಒಂದು ಸಮುದಾಯ ಬೇಡ, ಅವರ ಸಂಸ್ಕೃತಿ, ವಿಚಾರಗಳು ಬೇಡ ಎನ್ನುತ್ತಾ ನಾವೂ ಸಹ ಮತ್ತೊಂದು ಮೂಲಭೂತವಾದಿಗಳಾಗುತ್ತಿದ್ದೇವಾ?

ನನ್ನದೇ ಇನ್ನೊಂದು ಉದಾಹರಣೆ ಕೊಡುತ್ತೇನೆ. ಅಸೈನ್‌ಮೆಂಟ್‌ ಸಂಬಂಧ ಗಮಕ ಕಲೆಯ ಬಗ್ಗೆ ಒಂದು ಆಡಿಯೊ ಸಂವಾದ ನಡೆಸಿದ್ದೆ. ಅದನ್ನು ಯಾರೂ ಕೇಳಲಿಲ್ಲ. ಅದೇ, ದಲಿತ ಸಮುದಾಯದ ಗೌರಿ ಹಾಡು, ಸೋಬಾನೆ ಪದ, ಮದುವೆ ಸಂದರ್ಭದಲ್ಲಿ ಹಾಡುವ ಪದಗಳ ಕುರಿತು ಆಡಿಯೊ ಸಂವಾದ ಮಾಡಿದ್ದೆ. ಇದನ್ನು ಹೆಚ್ಚಿನವರು ಕೇಳಿದರು. ಬಹಳ ಚೆನ್ನಾಗಿದೆ ಎಂದು ನನ್ನ ಬಳಿಯೂ ಹೇಳಿದರು, ಅಭಿನಂದಿಸಿದರು. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ಆದ್ದರಿಂದ ಎಲ್ಲಾ ರೀತಿಯ ಮೂಲಭೂತವಾದವೂ ಅಪಾಯಕಾರಿಯೇ ಆಗಿರುತ್ತದೆ. ನಮಗೆ ಎಲ್ಲರೂ ಬೇಕು. ಎಲ್ಲ ಜಾತಿ, ಸಮುದಾಯದವರೂ ಬೇಕು. ನಮ್ಮ ರಾಜಕೀಯವೂ, ನಮ್ಮ ಚಿಂತನೆಯೂ ಈ ತಳಹದಿಯಲ್ಲೇ ಬೆಳೆಯಬೇಕು ಅಲ್ಲವೇ? ಆತ್ಮಾವಲೋಕನವನ್ನು ನಾವೆಲ್ಲರೂ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT