ಗುರುವಾರ , ಮಾರ್ಚ್ 23, 2023
29 °C
ಕೇಂದ್ರದ ನಡೆ ಕುರಿತು ಪ್ರಶ್ನೆ

ಫ್ರಾನ್ಸ್‌ನಲ್ಲಿ ‘ಅಕ್ರಮ’ದ ತನಿಖೆ: ಕೇಂದ್ರ ಸರ್ಕಾರದ ಮೌನವೇಕೆ?: ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದವನ್ನು ತನಿಖೆಗೆ ಒಳಪಡಿಸಿರುವ ಫ್ರಾನ್ಸ್ ಸರ್ಕಾರದ ನಿರ್ಧಾರದ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡದ ಕೇಂದ್ರ ಸರ್ಕಾರದ ಮೌನವನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ರಫೇಲ್‌ ಒಪ್ಪಂದವನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಒಳಪಡಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂದೇಟು ಹಾಕುತ್ತಿರುವುದು ಏಕೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.

ರಫೇಲ್ ಯುದ್ಧವಿಮಾನ ಮಾರಾಟ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಫ್ರಾನ್ಸ್‌ನಲ್ಲಿ ಶನಿವಾರ ನ್ಯಾಯಾಂಗ ತನಿಖೆ ಆರಂಭಿಸಲಾಗಿದೆ. ಈ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಲಾಬಿ ನಡೆದಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಮೀಡಿಯಾಪಾರ್ಟ್‌ ಸಂಸ್ಥೆಯು ಪ್ರಕಟಿಸಿದ ತನಿಖಾ ವರದಿಗಳ ಆಧಾರದಲ್ಲಿ ನ್ಯಾಯಾಂಗ ತನಿಖೆ ಆರಂಭಿಸಲಾಗಿದೆ.

‘ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ಲಾಬಿ ಮತ್ತು ಪ್ರಭಾವ ಬೀರುವಿಕೆ ಕುರಿತು ತನಿಖೆ ನಡೆಸಲು ಫ್ರಾನ್ಸ್ ಆದೇಶಿಸಿ 24 ಗಂಟೆ ಕಳೆದಿದೆ. ಇಡೀ ದೇಶ ಮತ್ತು ಇಡೀ ಜಗತ್ತು ಈಗ ದೆಹಲಿಯತ್ತ ನೋಡುತ್ತಿದೆ. ಆದರೆ ಕೇಂದ್ರ ಸರ್ಕಾರದ ಈ ಮೌನವೇಕೆ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪ್ರಶ್ನಿಸಿದ್ದಾರೆ.

‘ಇಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದ ಷರತ್ತುಗಳನ್ನು ಒಪ್ಪಂದದಲ್ಲಿ ಕೈಬಿಡಲಾಗಿದೆ. ಈ ಒಪ್ಪಂದದಲ್ಲಿ ಮಧ್ಯವರ್ತಿಯಾಗಿದ್ದ ವ್ಯಕ್ತಿಯನ್ನು ಬೇರೆ ಪ್ರಕರಣದ ಕಾರಣ ಇದೇ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ರಫೇಲ್‌ ಒಪ್ಪಂದದಲ್ಲಿ ಆತನಿಗೆ ಕೋಟ್ಯಂತರ ರೂಪಾಯಿ ಉಡುಗೊರೆಯಾಗಿ ಬಂದಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಆತನಿಂದ ವಶಕ್ಕೆ ಪಡೆದಿತ್ತು. ಜಾರಿ ನಿರ್ದೇಶನಾಲಯವು ಆ ದಾಖಲೆಗಳನ್ನು ಏನು ಮಾಡಿತು ಎಂಬುದು ಗೊತ್ತಿಲ್ಲ. ಆದರೆ ಫ್ರಾನ್ಸ್‌ ಸರ್ಕಾರ ಈ ಒಪ್ಪಂದದ ಬಗ್ಗೆ ಈಗ ತನಿಖೆ ಆರಂಭಿಸಿದೆ’ ಎಂದು ಪವನ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ನ ಆರೋಪಗಳನ್ನು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಅವರು ಶನಿವಾರವೇ ಅಲ್ಲಗಳೆದಿದ್ದರು. ‘ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಡಾಸೊ ಏವಿಯೇಷನ್‌ನ ಪ್ರತಿಸ್ಪರ್ಧಿ ಕಂಪನಿಗಳು ರಾಹುಲ್ ಗಾಂಧಿ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ’ ಎಂದು ಪಾತ್ರಾ ಹೇಳಿದ್ದರು.

*
₹ 570 ಕೋಟಿ ಬೆಲೆಯ ಯುದ್ಧವಿಮಾನಗಳನ್ನು ₹ 1,670 ಕೋಟಿ ಕೊಟ್ಟು ಖರೀದಿ ಮಾಡಿರುವುದೇ ರಫೇಲ್‌ ಒಪ್ಪಂದ ಎಂಬುದು ಮತ್ತಷ್ಟು ಸ್ಪಷ್ಟವಾಗುತ್ತಿದೆ.
-ಪವನ್ ಖೇರಾ, ಕಾಂಗ್ರೆಸ್ ವಕ್ತಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು