ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಸದಸ್ಯತ್ವಕ್ಕೆ ಕುತ್ತು: ಅಧಿಸೂಚನೆ ಹೊರಡಿಸಿದ ಲೋಕಸಭಾ ಕಾರ್ಯಾಲಯ

ಅಧಿಸೂಚನೆ ಹೊರಡಿಸಿದ ಲೋಕಸಭಾ ಕಾರ್ಯಾಲಯ: ವಿಪಕ್ಷಗಳ ಆಕ್ರೋಶ
Last Updated 24 ಮಾರ್ಚ್ 2023, 19:29 IST
ಅಕ್ಷರ ಗಾತ್ರ

ನವದೆಹಲಿ: ವಯನಾಡ್‌ ಸಂಸದ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಶುಕ್ರವಾರ ಅನರ್ಹಗೊಳಿಸಲಾಗಿದೆ. ಸೂರತ್‌ನ ನ್ಯಾಯಾಲಯವೊಂದು ಅವರಿಗೆ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆ ಪ್ರಕಟಿಸಿದ 24 ತಾಸುಗಳೊಳಗೆ ಅನರ್ಹತೆ ನಿರ್ಧಾರ ಕೈಗೊಳ್ಳಲಾಗಿದೆ. ಇದು ಬಿಜೆಪಿಯ ದ್ವೇಷದ ರಾಜಕಾರಣ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಕಾನೂನು ಮತ್ತು ರಾಜಕೀಯ ನೆಲೆಯಲ್ಲಿ ಇದರ ವಿರುದ್ಧ ಹೋರಾಟ ಮಾಡುವುದಾಗಿ ಶಪಥ ಮಾಡಿವೆ.

ವಿರೋಧ ಪಕ್ಷಗಳ ಆರೋಪವನ್ನು ಬಿಜೆಪಿ ನಿರಾಕರಿಸಿದೆ ಮತ್ತು ಅನರ್ಹತೆಯು ಕಾನೂನುಬದ್ಧವಾಗಿಯೇ ನಡೆದಿದೆ ಎಂದಿದೆ.

ಸೂರತ್‌ನ ಮುಖ್ಯ ನ್ಯಾಯಾಂಗೀಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರಾಹುಲ್‌ ಅವರಿಗೆ ಎರಡು ವರ್ಷ ಸಜೆ ನೀಡಿರುವ ಕಾರಣ ಅವರ ಲೋಕಸಭಾ ಸದಸ್ಯತ್ವ ರದ್ದಾಗಿದೆ ಎಂದು ಲೋಕಸಭಾ ಕಾರ್ಯಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ. ತೀರ್ಪು ಪ್ರಕಟವಾದ 2023ರ ಮಾರ್ಚ್‌ 23ರಿಂದಲೇ ಅನರ್ಹತೆ ಅನ್ವಯ ಎಂದೂ ಹೇಳಲಾಗಿದೆ.

ಉನ್ನತ ನ್ಯಾಯಾಲಯವು ಸೂರತ್‌ ನ್ಯಾಯಾಲಯದ ತೀರ್ಪಿಗೆ ತಡೆ ನೀಡದೇ ಇದ್ದರೆ, ಈಗಿನ ಅನರ್ಹತೆಯಿಂದಾಗಿ ರಾಹುಲ್ ಅವರು ಎಂಟು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಅವರು ನಾಲ್ಕು ಬಾರಿ ಸಂಸದರಾಗಿದ್ದರು.

‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ಲೋಕಸಭೆಗೆ 2019ರಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಪ್ರಶ್ನಿಸಿದ್ದರು. ಸೂರತ್‌ನ ಶಾಸಕ ಪೂರ್ಣೇಶ್‌ ಮೋದಿ ಅವರು ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಮಾನನಷ್ಟ ಪ್ರಕರಣದ ಮೇಲ್ಮನವಿಯಲ್ಲಿ ರಾಹುಲ್‌ ಪರ ತೀರ್ಪು ಬಂದರೆ, ತಮ್ಮ ಸ್ಥಾನವನ್ನು ಮರಳಿ ನೀಡುವಂತೆ ಲೋಕಸಭಾ ಕಾರ್ಯಾಲಯವನ್ನು ಕೋರುವುದಕ್ಕೆ ಅವಕಾಶ ಇದೆ.

ತೀರ್ಪು ಮತ್ತು ಅನರ್ಹತೆಯ ಕುರಿತಂತೆ ಕಾಂಗ್ರೆಸ್‌ ಮುಖಂಡರು ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಆದರೆ, ಈಗಿನ ನಡೆಯು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಪೂರಕವಾಗಿ ಪರಿವರ್ತನೆ ಆಗಬಹುದು ಎಂಬ ಭಾವನೆ ಕಾಂಗ್ರೆಸ್‌ನ ಕೆಲವು ನಾಯಕರಲ್ಲಿ ಇದೆ.

ರಾಹುಲ್‌ ವಿರುದ್ಧ ಕೈಗೊಂಡಿರುವ ಕ್ರಮವು ಬಿಜೆಪಿ ವಿರೋಧಿ ಪಕ್ಷಗಳ ನಡುವಣ ಸಮೀಕರಣವನ್ನೇ ಬದಲಾಯಿಸಿದೆ. ಈತನಕ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಟಿಎಂಸಿ, ಎಎಪಿ, ಭಾರತ ರಾಷ್ಟ್ರ ಸಮಿತಿ ಮತ್ತು ಸಮಾಜವಾದಿ ಪಕ್ಷ ರಾಹುಲ್‌ ಬೆಂಬಲಕ್ಕೆ ನಿಂತಿವೆ. ಬಿಜೆಪಿ ವಿರೋಧಿ ಇತರ ಪಕ್ಷಗಳು ಕೂಡ ರಾಹುಲ್‌ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿವೆ.

ಅಧಿಸೂಚನೆ ಪ್ರಕಟವಾಗುವುದಕ್ಕೆ ಮುನ್ನ, ರಾಹುಲ್ ಅವರು ಲೋಕಸಭಾ ಕಲಾಪಕ್ಕೆ ಹಾಜರಾಗಿದ್ದರು. ಕಲಾಪ ಆರಂಭಕ್ಕೆ ಮುನ್ನ ಅವರು ಸಂಸತ್‌ ಭವನದಲ್ಲಿ ನಡೆದ ಪಕ್ಷದ ಸಂಸದರ ಸಭೆಯಲ್ಲಿಯೂ ಭಾಗವಹಿಸಿದ್ದರು.

ಅನರ್ಹತೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್‌, ಇದು ಭಾರತದ ಪ್ರಜಾಪ್ರಭುತ್ವದ ಕರಾಳ ದಿನ ಎಂದಿದೆ. ರಾಹುಲ್ ಅವರು ಸತ್ಯವನ್ನು ಹೇಳುತ್ತಿದ್ದಾರೆ. ಸಂವಿಧಾನ ಮತ್ತು ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಹಾಗಾಗಿ, ಅವರನ್ನು ಅನರ್ಹಗೊಳಿಸಲು ಬಿಜೆಪಿ ಎಲ್ಲ ಪ್ರಯತ್ನವನ್ನೂ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘ಇಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಪ್ರಶ್ನೆಯೇ ಇಲ್ಲ. ಲಲಿತ್ ಮೋದಿ ಮತ್ತು ನೀರವ್ ಮೋದಿ ಹಿಂದುಳಿದ ವರ್ಗಗಳಿಗೆ ಸೇರಿದವರು ಅಲ್ಲ. ರಾಹುಲ್ ಅವರು ಹಿಂದುಳಿದ ವರ್ಗಗಳ ವಿರುದ್ಧ ಮಾತನಾಡಿದ್ದಾರೆ ಎಂದು ಬಿಂಬಿಸುವ ಯತ್ನ ನಡೆದಿದೆ. ರಾಹುಲ್‌ ಅವರು ದೇಶದ ಮುಂದೆ ಸತ್ಯವನ್ನು ತೆರೆದಿಡಲು ಯತ್ನಿಸಿದ್ದಾರೆ. ಆದರೆ, ಕೆಲವರಿಗೆ ಅದು ಇಷ್ಟ ಆಗಿಲ್ಲ’ ಎಂದು ಖರ್ಗೆ ವಿವರಿಸಿದ್ದಾರೆ. ಹಿಂದುಳಿದ ವರ್ಗಗಳವರು ಕಳ್ಳರು ಎಂದು ರಾಹುಲ್ ಅವರು ಹೇಳಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಖರ್ಗೆ ಹೀಗೆ ಹೇಳಿದ್ದಾರೆ.

ರಾಹುಲ್‌ ಅನರ್ಹತೆಯಿಂದಾಗಿ ವಯನಾಡ್‌ ಲೋಕಸಭಾ ಕ್ಷೇತ್ರ ತೆರವಾಗಿದೆ. ಈ ಲೋಕಸಭೆಯ ಅವಧಿಯು ಮುಂದಿನ ಜೂನ್‌ಗೆ ಕೊನೆಗೊಳ್ಳುತ್ತದೆ. ತೆರವಾದ ವಯನಾಡ್‌ ಕ್ಷೇತ್ರಕ್ಕೆ ಆರು ತಿಂಗಳೊಳಗೆ ‌ಉಪಚುನಾವಣೆ ನಡೆಸಬೇಕಾಗುತ್ತದೆ. ಅಂದರೆ, ಮುಂದಿನ ಲೋಕಸಭಾ ಚುನಾವಣೆಯು 2024ರಲ್ಲಿ ನಡೆಯಲಿದೆ. ಅದಕ್ಕೆ ಕೆಲವೇ ತಿಂಗಳ ಮೊದಲು ಈ ಉಪಚುನಾವಣೆ ನಡೆಯಬೇಕಾಗುತ್ತದೆ.

***

ಭಾರತದ ಧ್ವನಿಗಾಗಿ ನಾನು ಹೋರಾಡುತ್ತಿದ್ದೇನೆ. ಅದಕ್ಕಾಗಿ ಯಾವುದೇ ಬೆಲೆ ತೆರುವುದಕ್ಕೂ ಸಿದ್ಧನಿದ್ದೇನೆ

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT