ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಲ್ಲಿ ರಾಹುಲ್‌ ಭಾಷಣ: ಶೀಘ್ರದಲ್ಲೇ ಬಿರುಗಾಳಿ ಬೀಸಲಿದೆ ಎಂದ ಎನ್‌ಸಿಪಿ

Last Updated 3 ಅಕ್ಟೋಬರ್ 2022, 6:25 IST
ಅಕ್ಷರ ಗಾತ್ರ

ನವದೆಹಲಿ: ಮೈಸೂರಿನಲ್ಲಿ ಮಳೆಯ ನಡುವೆಯೇ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಭಾಷಣ ಮಾಡಿರುವ ವಿಡಿಯೊ ಹಾಗೂ ಫೋಟೊಗಳು ವೈರಲ್‌ ಆಗಿವೆ.

ಮಳೆಯಲ್ಲಿ ಭಾಷಣ ಮಾಡುತ್ತಿರುವ ರಾಹುಲ್‌ ಹಾಗೂ ಶರದ್‌ ಪವಾರ್‌ ಫೋಟೊಗಳನ್ನು ಹಂಚಿಕೊಂಡಿರುವ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, ‘ಈ ಹಿಂದೆ ಸಮಯವು ಸಾಬೀತುಪಡಿಸಿದೆ. ಮುಂದೆಯೂ ಸಾಬೀತುಪಡಿಸಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ವರುಣದೇವ ನಿಮ್ಮನ್ನು ಆಶೀರ್ವದಿಸಲು ನಿರ್ಧರಿಸಿದಾಗ, ಶೀಘ್ರದಲ್ಲೇ ವಿರೋಧ ಪಕ್ಷಗಳ ಒಕ್ಕೂಟದಲ್ಲಿ ಬಿರುಗಾಳಿ ಬೀಸಲಿದೆ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೊ’ ಪಾದಯಾತ್ರೆಯು ಭಾನುವಾರ ಜೋರು ಮಳೆಯಲ್ಲಿ ನಡೆಯಿತು.

ನಂಜನಗೂಡು ತಾಲ್ಲೂಕು ಕಡಕೊಳದ ಕಾಳಿಬೀರಮ್ಮ ದೇವಸ್ಥಾನದ ಬಳಿಯಿಂದ 4.46ಕ್ಕೆ ಹೊರಟ ಪಾದಯಾತ್ರೆಯಲ್ಲಿ 25ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ರಾಹುಲ್ ಜೊತೆ ನಾಯಕರೂ ಹೆಜ್ಜೆ ಹಾಕಿದರು. ಸಂಜೆ 6.40ರ ಸುಮಾರಿಗೆ ಬಂಡೀಪಾಳ್ಯ ಸಮೀಪಿಸುತ್ತಿದ್ದಂತೆಯೇ ಜೋರು ಮಳೆ ಆರಂಭವಾಯಿತು.

ಎಪಿಎಂಸಿ ಸಮೀಪ ಮಳೆಯಲ್ಲೇ ಭಾಷಣ ಮಾಡಿದ ರಾಹುಲ್‌, ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ. ಯಾವ ಕಾರಣಕ್ಕೂ ಯಾತ್ರೆ ನಿಲ್ಲುವುದಿಲ್ಲ. ಈಗ ಮಳೆ ಬರುತ್ತಿದೆ, ಹಾಗೆಂದು ಪಾದಯಾತ್ರೆ ನಿಲ್ಲಿಸಿದ್ದೇವೆಯೇ’ ಎಂದು ಪ್ರಶ್ನಿಸಿದರು.

‘ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಯಾತ್ರೆ ನಡೆಯಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನದಿಗಳು ಹರಿಯುವಂತೆಯೇ ಮುಂದುವರಿಯುತ್ತದೆ. ಇಲ್ಲಿ, ಯಾವುದೇ ದ್ವೇಷ–ಅಸೂಯೆ ಕಾಣುವುದಿಲ್ಲ. ಕೇವಲ ಪ್ರೀತಿ–ಸಹನೆಯ ಸಂದೇಶವನ್ನಷ್ಟೆ ನೀಡಲಾಗುತ್ತಿದೆ. ಇದೇ ನಮ್ಮ ದೇಶದ ಸಂಸ್ಕೃತಿಯಾಗಿದೆ’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT