ಮಂಗಳವಾರ, ನವೆಂಬರ್ 30, 2021
21 °C

ಅಸಂಘಟಿತ ವಲಯವನ್ನು ನಾಶ ಮಾಡುವುದೇ ನೋಟು ರದ್ದತಿಯ ಉದ್ದೇಶವಾಗಿತ್ತು: ರಾಹುಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2016ರ ನೋಟು ರದ್ದತಿ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವಿಟರ್‌ ವಿಡಿಯೊ ಮೂಲಕ ವಾಗ್ದಾಳಿ ನಡೆಸಿದ್ದಾರೆ. ನೋಟು ರದ್ದತಿಯು ಜಿಡಿಪಿ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡಿದ್ದು, ದೇಶದ ಬಡವರು, ರೈತರು ಹಾಗೂ ಅಸಂಘಟಿತ ವಲಯದ ವಿರುದ್ಧ ಕೈಗೊಳ್ಳಲಾಗಿರುವ ಈ ಕ್ರಮವನ್ನು ವಿರೋಧಿಸಿ ದೇಶವೇ ಒಂದಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದ್ದಾರೆ.

ವಿಡಿಯೊ ಜೊತೆಗೆ, ‘ಪ್ರಧಾನಿ ಮೋದಿ ಅವರ ಕ್ಯಾಷ್‌ಲೆಸ್‌ ಇಂಡಿಯಾ (ನಗದುರಹಿತ ಭಾರತ) ಎಂಬುದು ನಿಜವಾಗಿಯೂ ರೈತರು, ಕಾರ್ಮಿಕರು ಮತ್ತು ಸಣ್ಣ ಪ್ರಮಾಣದ ವ್ಯಾಪಾರಿಗಳಿಲ್ಲದ ಭಾರತವನ್ನು ನಿರ್ಮಿಸುವುದೇ ಆಗಿದೆ. ನವೆಂಬರ್ 8, 2016ರಂದು ಉರುಳಿದ ದಾಳಗಳ ಭಯಾನಕ ಪರಿಣಾಮವು ಆಗಸ್ಟ್ 31, 2020 ರಂದು ಬಹಿರಂಗವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಜಿಡಿಪಿ ಕುಸಿತದ ಜೊತೆಗೆ ನೋಟು ರದ್ದು ಕ್ರಮವು ಅಸಂಘಟಿತ ವಲಯದದ ಆರ್ಥಿಕತೆಯನ್ನು ಹೇಗೆ ಮುರಿಯಿತೆಂತು ತಿಳಿಯಲು ಈ ವಿಡಿಯೊ ನೋಡಿ ಎಂದು ತಿಳಿಸಿದ್ದಾರೆ.

ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದ ಜಿಡಿಪಿ ದರವು ಶೇ.23.9ರಷ್ಟು ಕುಸಿದಿದೆ. ಇದು ಕಳೆದ 40 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. 40 ವರ್ಷಗಳಲ್ಲೇ ಅತಿದೊಡ್ಡ ಕುಸಿತ ಇದಾಗಿದೆ ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.

‘ಮೋದಿ ಸರ್ಕಾರ ಭಾರತದ ಆರ್ಥಿಕತೆಯನ್ನು ಹೇಗೆ ನಾಶ ಮಾಡಿತು?’ ಎಂಬುದಕ್ಕೆ ಸಂಬಂಧಿಸಿದಂತೆ ರಾಹುಲ್‌ ಹಂಚಿಕೊಂಡ ಎರಡನೇ ವಿಡಿಯೊ ಇದಾಗಿದೆ. ಇದರಲ್ಲಿ, ‘ನವೆಂಬರ್‌ 8, ರಾತ್ರಿ 8ಕ್ಕೆ ಪ್ರಧಾನಿ ಮೋದಿ ಘೋಷಿಸಿದ ಆ ನಿರ್ಧಾರ ಇಡೀ ದೇಶವೇ ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಲ್ಲುವಂತೆ ಮಾಡಿತು. ಈ ಕ್ರಮದಿಂದಾದ ಪ್ರಯೋಜನವೇನು? ಕಪ್ಪುಹಣ ಸಿಕ್ಕಿತೇ? ಇಲ್ಲ. ನೋಟು ರದ್ದತಿಯಿಂದ ಪಡವರಿಗೆ ಸಿಕ್ಕಿದ್ದೇನು? ಏನೂ ಇಲ್ಲ. ಹಾಗಾದರೆ ಯಾರಿಗೆ ಲಾಭವಾಯಿತು? ಕೇವಲ ಉದ್ಯಮಿಗಳಿಗೆ. ಕೆಲವೇ ಉದ್ಯಮಿಗಳ ಸಾಲಮನ್ನಾ ಮಾಡಲು ನಿಮ್ಮ ಹಣವನ್ನು ಬಳಸಲಾಯಿತು’ ಎಂದು ಆರೋಪಿಸಿದ್ದಾರೆ.

‘ನೇರವಾಗಿ ನಗದು ವಿನಿಮಯದೊಂದಿಗೆ ಕೆಲಸ ನಿರ್ವಹಿಸುವ ಅಸಂಘಟಿತ ವಲಯದಿಂದ ಎಲ್ಲ ಹಣವನ್ನು ಹೊರತೆಗೆಯುವುದು ನೋಟು ರದ್ದತಿಯ ಹಿಂದಿನ ಉದ್ದೇಶವಾಗಿತ್ತು. ನಗದುರಹಿತ ಭಾರತ ನಿರ್ಮಾಣವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದರು. ಅಂದರೆ, ಅಸಂಘಟಿತ ವಲಯವನ್ನು ನಾಶ ಮಾಡುವುದು ಎಂದರ್ಥ’ ಎಂದು ಕಿಡಿಕಾರಿದ್ದಾರೆ.

ಆಗಸ್ಟ್‌ 31ರಂದು ಬಿಡುಗಡೆ ಮಾಡಿದ್ದ ಮೊದಲ ವಿಡಿಯೊದಲ್ಲಿ, ಕೇಂದ್ರ ಸರ್ಕಾರವು ಕಳೆದ ಆರು ವರ್ಷಗಳಿಂದ ಅಸಂಘಟಿತ ವಲಯವನ್ನು ಗುರಿಯಾಗಿಸಿ ದಾಳಿ ಮಾಡಿದೆ. ನೋಟು ರದ್ದು ಕ್ರಮ, ಜಿಎಸ್‌ಟಿಯ ಹಾಗೂ ಕೊರೊನಾವೈರಸ್‌ ಲಾಕ್‌ಡೌನ್‌ ಉದ್ದೇಶ ‘ಈ ವಲಯವನ್ನು ನಾಶಮಾಡುವುದು’ ಎಂದು ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು