ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿ ಜೆರೆಮಿ ಕಾರ್ಬಿನ್ – ರಾಹುಲ್ ಭೇಟಿ: ಬಿಜೆಪಿ, ಕಾಂಗ್ರೆಸ್ ವಾಕ್ಸಮರ

ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಲೇಬರ್ ಪಕ್ಷದ ಮಾಜಿ ನಾಯಕ, ಬ್ರಿಟನ್ ಸಂಸದ ಜೆರೆಮಿ ಕಾರ್ಬಿನ್ ಅವರನ್ನು ಭೇಟಿಯಾಗಿ ಫೋಟೊ ಹಂಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿಯ ಅನೇಕ ನಾಯಕರು ರಾಹುಲ್ ಗಾಂಧಿ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಬಿನ್ ಕೈಕುಲುಕುತ್ತಿರುವ ವಿಡಿಯೊ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ.

‘ಭಾರತ ವಿರೋಧಿ, ಹಿಂದು ವಿರೋಧಿ’ ಜತೆ ರಾಹುಲ್ ಗಾಂಧಿ ಏನು ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ.

‘ಮತ್ತೊಮ್ಮೆ ರಾಹುಲ್ ಗಾಂಧಿ ಬ್ರಿಟನ್‌ ಸಂಸದ ಜೆರೆಮಿ ಕಾರ್ಬಿನ್ ಅವರನ್ನು ಭೇಟಿಯಾಗಿದ್ದಾರೆ. ಜೆರೆಮಿ ಕಾರ್ಬಿನ್ ಅವರು ಭಾರತದ ಕುರಿತ ದ್ವೇಷದ ನಿಲುವಿನಿಂದಲೇ ಗುರುತಿಸಿಕೊಂಡವರು. ಕಾಶ್ಮೀರ ಪ್ರತ್ಯೇಕವಾಗಬೇಕೆಂದು ಪ್ರತಿಪಾದಿಸುವವರು. ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾಗಿರುವವರ ಜತೆ ಹೋಗಲು ಹೇಗೆ ಸಾಧ್ಯ’ ಎಂದು ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ಜೆರೆಮಿ ಕಾರ್ಬಿನ್ ಅವರು ರಾಹುಲ್ ಗಾಂಧಿ ಹೆಗಲ ಮೇಲೆ ಕೈಹಾಕಿಕೊಂಡು ನಿಂತಿರುವ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ಪ್ರವಾಸವೊಂದರ ಸಂದರ್ಭದಲ್ಲಿ ಸೋಮವಾರ ಜೆರೆಮಿ ಕಾರ್ಬಿನ್ ಅವರನ್ನು ಭೇಟಿಯಾಗಿದ್ದರು. ಈ ಕುರಿತು ಕಾಂಗ್ರೆಸ್‌ನ ಸಾಗರೋತ್ತರ ಘಟಕ ಟ್ವೀಟ್ ಮಾಡಿತ್ತು.

ಕಾರ್ಬಿನ್ ಅವರು ಆಗಾಗ್ಗೆ ಭಾರತಕ್ಕೆ ಸಂಬಂಧಿಸಿದ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ವಿವಾದಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

‘ಜೆರೆಮಿ ಅವರು ಭಾರತದ ಬಗ್ಗೆ ದ್ವೇಷದ ನಿಲುವಿನಿಂದಲೇ ಗುರುತಿಸಿಕೊಂಡವರು. ಕಾಶ್ಮೀರ ಪ್ರತ್ಯೇಕವಾಗಬೇಕೆಂದು ಬಯಸುವವರು. ಹಿಂದು ವಿರೋಧಿಯೂ ಹೌದು. ರಾಹುಲ್ ಗಾಂಧಿ ಅವರು ಅಂತಿಮವಾಗಿ ತಮ್ಮಂತೆಯೇ ಭಾರತವನ್ನು ಹೀಯಾಳಿಸುವ ವಿದೇಶಿ ಸಹಭಾಗಿಯನ್ನು ಕಂಡುಕೊಂಡಿದ್ದಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಮೋದಿ ಅವರು ಜೆರೆಮಿ ಕಾರ್ಬಿನ್ ಅವರ ಕೈಕುಲುಕುತ್ತಿರುವ ವಿಡಿಯೊ ತುಣುಕನ್ನು ಪ್ರಕಟಿಸಿದೆ.

‘ಡಿಯರ್ ಸಂಘಿ, ಜೆರೆಮಿ ಕಾರ್ಬಿನ್ ಜತೆ ಮೋದಿ ಅವರು ಲಂಡನ್‌ನಲ್ಲಿ ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದೆ.

ಮೋದಿ ಅವರು ಜೆರೆಮಿಯನ್ನು ಭೇಟಿಯಾದ ಸಂದರ್ಭವನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘2015ರಲ್ಲಿ ಜೆರೆಮಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಮೋದಿ ಭೇಟಿಯಾಗಿದ್ದರು. ಅದು ಶಿಷ್ಟಾಚಾರದ ಭಾಗವಾಗಿತ್ತು. ಜೆರೆಮಿ ಐಆರ್‌ಎ ಜತೆ ಸಂಪರ್ಕ ಹೊಂದಿರುವುದನ್ನು 2017ರಲ್ಲಿ ಬಹಿರಂಗಪಡಿಸಲಾಗಿದೆ. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕೆಂದು 2019 ರಲ್ಲಿ ಜೆರೆಮಿ ಕರೆ ನೀಡಿದ್ದರು. ಇದಾದ ನಂತರ ರಾಹುಲ್ ಗಾಂಧಿ ಭೇಟಿ ಮಾಡಲು ಹೋಗಿದ್ದು ಯಾಕೆ?’ ಎಂದು ಅವರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT