ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ವಿಧಾನಸಭೆ ಚುನಾವಣೆ: ರಾಹುಲ್‌, ಪ್ರಿಯಾಂಕಾ ಮೋಡಿ

ಯುಡಿಎಫ್‌ ಅಭ್ಯರ್ಥಿಗಳಿಂದ ಇಬ್ಬರಿಗೂ ದುಂಬಾಲು
Last Updated 2 ಏಪ್ರಿಲ್ 2021, 1:22 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ವಿಧಾನ ಸಭೆಗೆ ಏಪ್ರಿಲ್‌ 6ರಂದು ನಡೆಯಲಿರುವ ಮತದಾನದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಧಿಕಾರಕ್ಕೆ ಬರುವ ಸಾಧ್ಯತೆ ಕ್ಷೀಣ ಎಂದು ಎಲ್ಲ ಸಮೀಕ್ಷೆಗಳೂ ಹೇಳಿವೆ. ಹಾಗಿದ್ದರೂ ಮುಖಂಡರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಂಕಾ ಗಾಂಧಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಬದಲಾಯಿಸಲು ಕಾಂಗ್ರೆಸ್‌ ಶ್ರಮಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉನ್ನತ ನಾಯಕರನ್ನು ಬಿಜೆಪಿ ಕೂಡ ಪ್ರಚಾರಕ್ಕೆ ಕರೆ ತರುತ್ತಿದೆ. ಆದರೆ, ಬಿಜೆಪಿಯ ರಾಷ್ಟ್ರಮಟ್ಟದ ನಾಯಕರಿಗಿಂತ ರಾಹುಲ್‌, ಪ್ರಿಯಾಂಕಾ ರ್‍ಯಾಲಿಗಳಿಗೆ ಹೆಚ್ಚು ಜನರು ಬರುತ್ತಿದ್ದಾರೆ ಎಂಬುದು ಇಲ್ಲಿ ಸಾಮಾನ್ಯವಾಗಿ ಇರುವ ಭಾವನೆ. ನೆಹರೂ ಕುಟುಂಬದ ಬಗ್ಗೆ ಇಲ್ಲಿನ ಜನರಿಗೆ ಇರುವ ಅಭಿಮಾನ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ರಾಹುಲ್‌ ಅಥವಾ ಪ್ರಿಯಾಂಕಾ ಅವರಲ್ಲಿ ಒಬ್ಬರು ತಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಬೇಕು ಎಂಬುದು ಯುಡಿಎಫ್‌ನ ಎಲ್ಲ ಅಭ್ಯರ್ಥಿಗಳ ಬಯಕೆಯಾಗಿದೆ. ಬಿಜೆಪಿಯ ಏಕೈಕ ಶಾಸಕ ಇರುವ ತಿರುವನಂತಪುರದ ನೇಮಮ್‌ ಕ್ಷೇತ್ರದ ಪ್ರಚಾರವನ್ನು ಪ್ರಿಯಾಂಕಾ ಅವರು ಸಮಯದ ಅಭಾವದ ಕಾರಣಕ್ಕೆ ರದ್ದು ಮಾಡಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಕೆ. ಮುರಳೀಧರನ್‌ ಅವರ ಒತ್ತಾಯದಿಂದಾಗಿ ಪ್ರಿಯಾಂಕಾ ಅವರು ಏಪ್ರಿಲ್‌ 3ರಂದು ಈ ಕ್ಷೇತ್ರಕ್ಕೆ ಭೇಟಿ ನೀಡಲು ಒಪ್ಪಿದ್ದಾರೆ ಎನ್ನಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಅವರು ಉತ್ತರ ಕೇರಳದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದಾಗಿ ಮತ್ತು ಕಾಂಗ್ರೆಸ್ ಗೆದ್ದರೆ ಅವರು ಪ್ರಧಾನಿಯಾಗಲಿದ್ದಾರೆ ಎಂಬ ಕಾರಣದಿಂದಾಗಿ ಕೇರಳದಲ್ಲಿ ರಾಹುಲ್‌ ಅಲೆ ಇತ್ತು. ಅಂತಹ ಅಲೆ ಈಗ ಕಾಣಿಸುತ್ತಿಲ್ಲ. ಹಾಗಿದ್ದರೂ ರಾಹುಲ್‌, ಪ್ರಿಯಾಂಕಾ ಭೇಟಿಯು ಮತದಾರರ ಮೇಲೆ ಪ್ರಭಾವ ಬೀರುತ್ತಿದೆ ಎಂಬುದು ನಿಜ.

‘ಚುನಾವಣಾ ಪ್ರಚಾರದ ಆರಂಭದಲ್ಲಿ ಕಾಂಗ್ರೆಸ್‌ ಸಭೆಗಳಿಗೆ ಜನರು ಹೆಚ್ಚಾಗಿ ಬರುತ್ತಿರಲಿಲ್ಲ. ಆದರೆ, ರಾಹುಲ್‌ ಅವರ ರೋಡ್‌ಶೋ ಆರಂಭವಾದ ಬಳಿಕ ಪರಿಸ್ಥಿತಿ ಬದಲಾಗಿದೆ. ಯಾವುದೇ ರಾಜಕೀಯ ಪಕ್ಷದ ಜತೆಗೆ ಗುರುತಿಸಿಕೊಂಡಿಲ್ಲದ ವೃದ್ಧರು ಮತ್ತು ಮಕ್ಕಳು ಕೂಡ ರಾಹುಲ್‌ ಅವರನ್ನು ನೋಡಲು ಹೊರ ಬರುತ್ತಿದ್ದಾರೆ. ಇದು ಕಾಂಗ್ರೆಸ್‌ ಮುಖಂಡರ ಹುರುಪು ಹೆಚ್ಚಿಸಿದೆ’ ಎಂದು ಪತ್ತನಂತಿಟ್ಟ ಜಿಲ್ಲೆಯ ಅನ್ಶಾದ್‌ ಹೇಳುತ್ತಾರೆ.

ಮಕ್ಕಳು ಮತ್ತು ವೃದ್ಧರು ರಾಹುಲ್‌ ಅವರಿಗೆ ಪ್ರೀತಿ ತೋರುತ್ತಿರುವ ವಿಡಿಯೊಗಳನ್ನು ಕಾಂಗ್ರೆಸ್ ‌ಪಕ್ಷವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ.

‘ವಯನಾಡ್‌ ಪ್ರದೇಶದಲ್ಲಿಯೂ ರಾಹುಲ್‌ ಪರ ಅಲೆಯೇನೂ ಈಗ ಕಾಣಿಸುತ್ತಿಲ್ಲ. ಆದರೆ, ರಾಹುಲ್‌ ಅವರು ಪ್ರಚಾರಕ್ಕೆ ಬಂದ ಬಳಿಕ ಇಲ್ಲಿನ ಚಿತ್ರಣ ಬದಲಾಗಬಹುದು. ವಯನಾಡ್‌ ಮತ್ತು ಮಲಪ್ಪುರಂ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ರಾಹುಲ್ ಪ್ರಚಾರವು ಯುಡಿಎಫ್‌ ಅಭ್ಯರ್ಥಿಗಳಿಗೆ ನೆರವಾಗಬಹುದು’ ಎಂದು ವಯನಾಡ್‌ನ ಪರಿಸರವಾದಿ ಎನ್‌. ಬಾದುಷಾ ಹೇಳುತ್ತಾರೆ.

ರಾಷ್ಟ್ರ ಮಟ್ಟದ ನಾಯಕರು ಮತದಾರರ ಮೇಲೆ ನೇರ ಪರಿಣಾಮ ಬೀರಬೇಕು ಎಂದೇನೂ ಇಲ್ಲ. ತಾರಾ ಪ್ರಚಾರಕರು ಬರುವುದರಿಂದ ಕಾರ್ಯಕರ್ತರ ಉತ್ಸಾಹ ಹೆಚ್ಚುತ್ತದೆ. ಅವರು ಹೆಚ್ಚು ಸಕ್ರಿಯವಾಗುತ್ತದೆ. ಇದು ಆ ಪಕ್ಷದ ಗೆಲುವಿನ ಸಾಧ್ಯತೆ ಹೆಚ್ಚಿಸುತ್ತದೆ ಎಂದು ರಾಜಕೀಯ ವಿಶ್ಲೇಷಕ ಸಿ.ಎ. ಜೋಸ್‌ಕುಟ್ಟಿ ಹೇಳುತ್ತಾರೆ.

ಕೇರಳದಲ್ಲಿ ಬಿಜೆಪಿ ಪ್ರಮುಖ ರಾಜಕೀಯ ಪಕ್ಷವಾಗಿ ಬೆಳೆದಿಲ್ಲ. ಹಾಗಾಗಿ, ಬಿಜೆಪಿ ನಾಯಕರಿಗಿಂತ ರಾಹುಲ್‌ ಮತ್ತು ಪ್ರಿಯಾಂಕಾ ಅವರ ಬಗ್ಗೆ ಜನರಿಗೆ ಹೆಚ್ಚು ಪ್ರೀತಿ ಇದೆ ಎಂಬುದು ಜೋಸ್‌ಕುಟ್ಟಿ ಅವರ ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT