ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ದಾಳಿ: 2047ಕ್ಕೆ ಭಾರತವನ್ನು ಇಸ್ಲಾಂ ದೇಶವಾಗಿಸುವ ಪಿಎಫ್‌ಐ ದಾಖಲೆ ಪತ್ತೆ

Last Updated 14 ಜುಲೈ 2022, 14:49 IST
ಅಕ್ಷರ ಗಾತ್ರ

ಪಟ್ನಾ: ಇಲ್ಲಿನ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ದಾಳಿ ನಡೆಸಿರುವ ಬಿಹಾರದ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಮಹತ್ವದ ದಾಖಲೆಗಳು ಸಿಕ್ಕಿದ್ದು, ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಪಿಎಫ್‌ಐನ ರಹಸ್ಯ ಕಾರ್ಯಸೂಚಿ 'ಮಿಷನ್ 2047' ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಯುವಕರಿಗೆ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ತರಬೇತಿ ನೀಡುತ್ತಿದ್ದರು ಎಂದು ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಾನವಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.

‘ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರಪತ್ರಗಳನ್ನು ದಾಳಿಯ ಸಮಯದಲ್ಲಿ ನಾವು ವಶಕ್ಕೆ ಪಡೆದಿದ್ದೇವೆ. 2047 ವೇಳೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಕಾರ್ಯಸೂಚಿ ಆ ದಾಖಲೆಗಳಲ್ಲಿದೆ. ಜತೆಗೆ, ಇತರ ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ‘ ಎಂದು ಧಿಲ್ಲೋನ್ ಹೇಳಿದರು.

ಪಾಟ್ನಾ ಪೊಲೀಸರು ಈ ಪ್ರಕರಣದಲ್ಲಿ 26 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅವರಲ್ಲಿ ಕೆಲವರು ಜಾರ್ಖಂಡ್, ಕರ್ನಾಟಕ, ತಮಿಳುನಾಡಿನವರಾಗಿದ್ದಾರೆ.

ಜಾರ್ಖಂಡ್‌ನ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಜಲಾಲುದ್ದೀನ್, ಸಿಮಿ ಸಂಘಟನೆಯ ಮಾಜಿ ಸದಸ್ಯ ಅಥರ್ ಪರ್ವೇಜ್ ಮತ್ತು ಅರ್ಮಾನ್ ಮಲಿಕ್‌ನನ್ನು ಪಾಟ್ನಾ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅಥರ್ ಪರ್ವೇಜ್‌ನ ಸಹೋದರ ಮಂಜರ್ ಪರ್ವೇಜ್ ಪಾಟ್ನಾದಲ್ಲಿ ಬಾಂಬ್ ಸ್ಫೋಟವೊಂದರಲ್ಲಿ ಭಾಗಿಯಾಗಿದ್ದು, ಆತ ಈಗ ಜೈಲಿನಲ್ಲಿದ್ದಾನೆ ಎಂದು ಹೇಳಲಾಗಿದೆ.

‘ಆರೋಪಿಗಳು ಯುವಕರಿಗೆ ಮಾರ್ಷಲ್ ಆರ್ಟ್ಸ್ ಮತ್ತು ದೈಹಿಕ ತರಬೇತಿಯ ಹೆಸರಿನಲ್ಲಿ ಇಸ್ಲಾಮಿಕ್ ಉಗ್ರವಾದದ ತರಬೇತಿ ನೀಡುತ್ತಿದ್ದರು. ತರಬೇತಿ ಕೇಂದ್ರದಿಂದ ನಾವು ದಾಖಲೆಗಳನ್ನು ವಶಪಡಿಸಿಕೊಂಡಿದ್ದೇವೆ. ದೇಶದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿ ಅವರು ಕೆಲಸ ಮಾಡುತ್ತಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಅವರ ಹಣದ ಮೂಲ ಪತ್ತೆ ಮಾಡಲು, ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ಇವರಿಗೆ ಪಾಕಿಸ್ತಾನದ ನಂಟು ಇರುವುದು ಪತ್ತೆಯಾಗಿಲ್ಲ. ಇವರ ಬಳಿ ತರಬೇತಿ ಪಡೆದವರನ್ನೂ ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT