ಶುಕ್ರವಾರ, ಮಾರ್ಚ್ 31, 2023
32 °C

ರೈಲ್ವೆ ಯೋಜನೆ: ರಾಜ್ಯಕ್ಕೆ ₹7,561 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ₹7,561 ಕೋಟಿ ಅನುದಾನ ಮೀಸಲಿಡಲಾಗಿದೆ. ಇದು ಕರ್ನಾಟಕಕ್ಕೆ ವರ್ಷವೊಂದರಲ್ಲಿ ಒದಗಿಸಿರುವ ದಾಖಲೆಯ ಮೊತ್ತ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2009–2013ರ ಅವಧಿಗೆ ಹೋಲಿಸಿದರೆ ವರ್ಷವೊಂದಕ್ಕೆ ಒದಗಿಸಿರುವ ಅನುದಾನ ಒಂಬತ್ತು ಪಟ್ಟು (ಶೇ 900) ಹೆಚ್ಚಾಗಿದೆ. 2009–14ರ ಅವಧಿಯಲ್ಲಿ ವಾರ್ಷಿಕ ₹841 ಕೋಟಿ ಒದಗಿಸಲಾಗುತ್ತಿತ್ತು. ಇದರಲ್ಲಿ ರಾಜ್ಯದಲ್ಲಿ ಅನುಷ್ಠಾನವಾಗುತ್ತಿರುವ ಹಾಗೂ ರಾಜ್ಯದ ಮೂಲಕ ಹಾದು ಹೋಗುತ್ತಿರುವ ಯೋಜನೆಗಳು ಸೇರಿವೆ’ ಎಂದು ತಿಳಿಸಿದರು.

‘ಕರ್ನಾಟಕದಲ್ಲಿ ಹೊಸ ಮಾರ್ಗಗಳ ನಿರ್ಮಾಣ, ದ್ವಿಪಥ, ಗೇಜ್‌ ಪರಿವರ್ತನೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಒದಗಿಸುತ್ತಿರುವ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚು ತ್ತಿದೆ. ಕರ್ನಾಟಕದಲ್ಲಿ ₹49,336 ಕೋಟಿ ವೆಚ್ಚದ 4,330 ಕಿ.ಮೀ. ಕಾಮಗಾರಿಗಳು ವಿವಿಧ ಹಂತದಲ್ಲಿವೆ. ಇದರಲ್ಲಿ 21 ಹೊಸ ಯೋಜನೆಗಳು ಹಾಗೂ 11 ದ್ವಿಪಥ ಕಾಮಗಾರಿಗಳು ಸೇರಿವೆ’ ಎಂದು ಮಾಹಿತಿ ನೀಡಿದರು. 

‘ರಾಜ್ಯದಲ್ಲಿ 55 ನಿಲ್ದಾಣಗಳ ಅಭಿ ವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಬೈಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ಟರ್ಮಿನಲ್‌ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಇತರ ನಿಲ್ದಾಣಗಳ ಅಭಿವೃದ್ಧಿಗೆ ಮಾದರಿ’ ಎಂದು ಅವರು ಹೇಳಿದರು. 

‘ರಾಜ್ಯದಲ್ಲಿ ರೈಲ್ವೆ ಯೋಜನೆಗಳ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಉತ್ತಮ ಸಹಕಾರ ನೀಡುತ್ತಿದೆ. ಯೋಜನೆಗೆ ರಾಜ್ಯದ ಪಾಲು ಭರಿಸುವುದು, ಭೂಸ್ವಾಧೀನ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ಅಗತ್ಯ ನೆರವನ್ನು ನೀಡುತ್ತಿದೆ’ ಎಂದರು. 

ನೈರುತ್ಯ ರೈಲ್ವೆಗೆ ₹9200 ಕೋಟಿ: ನೈರುತ್ಯ ರೈಲ್ವೆ ವಿಭಾಗಕ್ಕೆ ₹9200 ಕೋಟಿ ನಿಗದಿಪಡಿಸಲಾಗಿದ್ದು, ಕೇಂದ್ರ ಸರ್ಕಾರ ₹527 ಕೋಟಿ ನೀಡಲಿದೆ. ಉಳಿದ ₹880 ಕೋಟಿಯನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಒಟ್ಟು 22 ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆಯ ಪಿಂಕ್‌ ಬುಕ್‌ನಲ್ಲಿ ತಿಳಿಸಲಾಗಿದೆ. 

ರೈಲು ಮಾರ್ಗಗಳ ದ್ವಿಪಥ ಕಾಮಗಾರಿಗೆ ₹1,329 ಕೋಟಿ ಹಂಚಿಕೆ ಮಾಡಲಾಗಿದೆ. 

ಮೈಸೂರು–ಚಾಮರಾಜನಗರ ಮಾರ್ಗವನ್ನು ಮೆಟ್ಟುಪಾಳ್ಯಂ ವರೆಗೆ ವಿಸ್ತರಿಸುವ ಮಾರ್ಗಕ್ಕೆ ₹50 ಕೋಟಿ ಪ್ರಕಟಿಸಲಾಗಿದೆ. ಟ್ರ್ಯಾಕ್‌ಗಳ ದುರಸ್ತಿಗೆ ₹790 ಕೋಟಿ, ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ನಿರ್ಮಾಣಕ್ಕೆ ₹242 ಕೋಟಿ ನಿಗದಿಪಡಿಸಲಾಗಿದೆ. 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಗ್ಗಜಗ್ಗಾಟದಿಂದ ಕೆಲವು ಯೋಜನೆಗಳಿಗೆ ಹಲವು ವರ್ಷಗಳಿಂದ ನಿಗದಿತ ಅನುದಾನ ಒದಗಿಸಿರಲಿಲ್ಲ. ಈ ವರ್ಷ ಇಂತಹ ಯೋಜನೆಗಳಿಗೆ ಅನುದಾನ ಕೊಡಲಾಗಿದೆ. ಹಲವು ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲನ್ನು ಒದಗಿಸಬೇಕಿದೆ. 

ಈ ವರ್ಷ ಹೊಸದಾಗಿ ಮಾರಿಕುಪ್ಪಂ– ಕುಪ್ಪಂ ಮಾರ್ಗವನ್ನು ಪ್ರಸ್ತಾಪಿಸಲಾಗಿದ್ದು, ಕೇಂದ್ರ ಸರ್ಕಾರವೇ ಇದಕ್ಕೆ ₹200 ಕೋಟಿ ಕೊಡಲಿದೆ. 

‘ಚಾಲ್ತಿ ಯೋಜನೆಗೆ ಹೆಚ್ಚು ಹಣ’

‘ದ್ವಿಪಥ, ವಿದ್ಯುದ್ದೀಕರಣ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸಿರುವುದು ಉತ್ತಮ ಬೆಳವಣಿಗೆ. ಈ
ಅನುದಾನ ಬಳಸಿಕೊಂಡು 2024ರ ಒಳಗೆ ಮಾರ್ಗಗಳ ವಿದ್ಯುದ್ದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಬಹುದು ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌ ತಿಳಿಸಿದರು.

‘ಸ್ಥಳೀಯ ಆಹಾರ’

‘ದಕ್ಷಿಣ ಭಾರತದ ರೈಲುಗಳಲ್ಲಿ ಉತ್ತರ ಭಾರತದ ಆಹಾರಗಳನ್ನು ಒದಗಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಹೀಗಾಗಿ, ರೈಲಿನಲ್ಲಿ ಆಯಾ ಪ್ರದೇಶದ ಆಹಾರಗಳನ್ನೇ ಒದಗಿಸಲು ತೀರ್ಮಾನಿಸಲಾಗಿದೆ’ ಎಂದು ಅಶ್ವಿನಿ ವೈಷ್ಣವ್‌ ತಿಳಿಸಿದರು.


Caption

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು